

ಸೊರಬ: ಸೊರಬ ತಾಲೂಕು ಪಂಚಾಯತಿಗೆ ನಡೆದ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ಜೆಡಿಎಸ್ ಅಧಿಕಾರದ ಗದ್ದುಗೆ ಏರಿದೆ, ಆ ಮೂಲಕ ಶಾಸಕ ಮಧು ಬಂಗಾರಪ್ಪ ಪ್ರಾಬಲ್ಯ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸೊರಬದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಮತ ಎಣಿಕೆ ನಡೆಯಿತು. 19 ಸದಸ್ಯ ಬಲದ ಪಂಚಾಯತ್‌ನಲ್ಲಿ 11 ಸ್ಥಾನಗಳನ್ನು ಜೆಡಿಎಸ್ ಗೆದ್ದು ಅಧಿಕಾರ ಹಿಡಿದಿದೆ. 5 ರಲ್ಲಿ ಬಿಜೆಪಿ ಮತ್ತು 3 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿವೆ.
ಈ ಮೂಲಕ ಸಹೋದರರ ನಡುವಿನ ಪೈಪೋಟಿಯಲ್ಲಿ ಮಧು ಬಂಗಾರಪ್ಪ ನೇತೃತ್ವದ ಜೆಡಿಎಸ್ ಭಾರಿ ಮೇಲುಗೈ ಸಾಧಿಸಿದ್ದು ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿ ಮುಖಂಡ ಮಾಜಿ ಸಚಿವ ಹರತಾಳು ಹಾಲಪ್ಪ ಭಾರೀ ಮುಖಭಂಗ ಅನುಭವಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಪಂಚಾಯತಿಯ 19 ಸದಸ್ಯ ಸ್ಥಾನಗಳಿಗೆ ಜೂನ್ 26ರಂದು ಚುನಾವಣೆ ನಡೆದಿತ್ತು.