ಬೆಂಗಳೂರು: ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಲ್ಲಿ ತಮ್ಮ ಕೈವಾಡವಿದೆ ಎಂಬ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ನಗರಾಭಿವೃದ್ಧಿ ಹಾಗೂ ಮೂಲಸೌಕರ್ಯ ಸಚಿವ ರೋಷನ್ ಬೇಗ್, ಬಿಜೆಪಿ ನಾಯಕಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ.
ಶೋಭಾ ಆರೋಪದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರೋಷನ್ ಬೇಗ್, ಶೋಭಾ ಕರಂದ್ಲಾಜೆ ಅವರು ಕೀಳು ಮಟ್ಟದ ಪ್ರಚಾರಕ್ಕಾಗಿ ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ. ಈ ಸಂಬಂಧ ನಾನು ಅವರ ವಿರುದ್ಧ ಮಾನನಷ್ಟ ಮೊಕದಮ್ಮೆ ದಾಖಲಿಸುತ್ತೇನೆ ಎಂದಿದ್ದಾರೆ.
ಮಂಗಳೂರಿನಿಂದ ಬಂದಿರುವ ಶೋಭಾಗೆ ನನ್ನ ಬಗ್ಗೆ ಗೊತ್ತಿಲ್ಲ. ಪ್ರಚಾರಕ್ಕಾಗಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಹತ್ಯೆಯಾಗಿರುವ ರುದ್ರೇಶ್ ಸಹ ಒಳ್ಳೆಯ ಹುಡುಗ, ಈ ಸಂಬಂಧ ನಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ದ ಎಂದು ಬೇಗ್ ತಿರುಗೇಟು ನೀಡಿದ್ದಾರೆ.
ರುದ್ರೇಶ್ ಹತ್ಯೆ ಹಿಂದೆ ರೋಷನ್ ಬೇಗ್ ಅವರ ಕೈವಾಡ ಇದ್ದು, ಸಚಿವರೇ ಸುಫಾರಿ ಕೊಟ್ಟು ಆರ್ ಎಸ್ಎಸ್ ಕಾರ್ಯಕರ್ತನನ್ನು ಕೊಲೆ ಮಾಡಿಸಿರುವುದಾಗಿ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.