ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ: ಕನ್ನಡಪರ ಸಂಘಟನೆಗಳ ಆಕ್ರೋಶ

ಬೆಳಗಾವಿ ಕುರಿತಂತೆ ಕಾಂಗ್ರೆಸ್ ಮುಖಂಡರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿರುವ ಹೇಳಿಕೆಯೊಂದು ಇದೀಗ ಅವರನ್ನು ವಿವಾದಕ್ಕೆ ಸಿಲುಕಿಸಿದ್ದು, ಕನ್ನಡಪರ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿವೆ.

ಬೆಂಗಳೂರು: ಬೆಳಗಾವಿ ವಿಚಾರ ಕುರಿತಂತೆ ಕಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿರುವ ಹೇಳಿಕೆಯೊಂದು ಇದೀಗ ಅವರನ್ನು ವಿವಾದಕ್ಕೆ ಸಿಲುಕಿಸಿದ್ದು, ಕನ್ನಡಪರ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿವೆ.

ಮಾಧ್ಯಮವೊಂದು ವರದಿ ಮಾಡಿರುವಂತೆ ಕಳೆದ ಆಗಸ್ಟ್ 27ರಂದು ಬೆಳಗಾವಿಯ ಬಸರಿಕಟ್ಟೆ ಗ್ರಾಮಕ್ಕೆ ಭೇಟಿ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಅಲ್ಲಿ ನೆರೆದಿದ್ದ ಮರಾಠಿಗರನ್ನು ಉದ್ದೇಶಸಿ ಮಾತನಾಡಿದ್ದರು. ಈ ವೇಳೆ ಬೆಳಗಾವಿ ವಿಚಾರದ ಬಗ್ಗೆ ಮಾತನಾಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸುಪ್ರೀಂ ಕೋರ್ಟ್ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ತೀರ್ಪು ನೀಡಿದರೆ, ನಾನೇ ಮೊದಲು ಮಹಾರಾಷ್ಟ್ರ ಧ್ವಜ ಹಿಡಿದು ಜೈ ಮಹಾರಾಷ್ಟ್ರ ಎಂದು ಕೂಗುತ್ತೇನೆ. ಇಲ್ಲಿನ ಯಾವ ರಾಜಕಾರಣಿಗಳಿಗೂ ಈ ಬಗ್ಗೆ ಹೇಳುವ ಧೈರ್ಯವಿಲ್ಲ. ಆದರೆ ನನಗೆ ಯಾರ ಭಯವೂ ಇಲ್ಲ ಎಂದು ಹೇಳುವ ಮೂಲಕ ಕನ್ನಡಿಗರನ್ನು ಕೆಣಕುವ ಕೆಲಸ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಮ್ಮ ಹೇಳಿಕೆ ಮಾಧ್ಯಮಗಳಲ್ಲಿ ವಿವಾದದ ಸ್ವರೂಪಕ್ಕೆ ತಿರುಗುತ್ತಿದ್ದಂತೆಯೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ತಮ್ಮ ಹೇಳಿಕೆಯನ್ನು ತಿರುಚಲಾಗುತ್ತಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಲಾಗುತ್ತಿದೆ. ನಾನು ಹೇಳಿದ್ದು, ಬೆಳಗಾವಿ ವಿಚಾರ ಸುಪ್ರೀಂ ಕೋರ್ಟ್  ಗೆ ಬರುವುದೇ ಇಲ್ಲ. ಇದು ಅಪ್ರಸ್ತುತ. ಒಂದು ವೇಳೆ ಸುಪ್ರೀಂ ಕೋರ್ಟ್ ಆದೇಶ ನೀಡಿದರೆ ಆಗ ಅದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದಷ್ಟೇ ಹೇಳಿದ್ದೇನೆ ಎಂದು ಹೇಳಿದ್ದಾರೆ. ಅಂತೆಯೇ ತಮ್ಮ ವಿವಾದಕ್ಕೆ ಎಂಇಎಸ್  ಮೂಲಕ ತೇಪೆ ಹಚ್ಚುವ ಕಾರ್ಯ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಎಂಇಎಸ್ ನಂತಹ ಪಕ್ಷಗಳು ಬೆಳಗಾವಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿವೆ. ರಾಜಕೀಯ ಪಕ್ಷಗಳ ನಾಟಕಕ್ಕೆ ಮರುಳಾಗದಿರಿ  ಎಂದು ನಾನು ಹೇಳಿದ್ದೆ. ಹೀಗಾಗಿ ಇದು ರಾಜ್ಯದ್ರೋಹದ ಹೇಳಿಕೆಯಲ್ಲ. ನಾನು ಕರ್ನಾಟಕದ ರಾಜ್ಯದ ಮಗಳಾಗಿದ್ದೇನೆ. ಬೆಳಗಾವಿ ಅಭವಿೃದ್ಧಿ ಆಗಬೇಕು ಎನ್ನುವುದರ ಬಗ್ಗೆ ಮಾತನಾಡಿದ್ದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ  ನೀಡಿದ್ದಾರೆ.

ಕನ್ನಡಪರ ಸಂಘಟನೆಗಳ ಆಕ್ರೋಶ
ಇದೇ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಕಿಡಿಕಾರಿದ್ದು, ಮಹಾಜನ್  ವರದಿಯಂತೆ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಹೀಗಾಗಿ ಇದರಲ್ಲಿ ಮತ್ತೆ ಯಾವುದೇ ರಾಜಕಾರಣಿಗಳು ರಾಜಕೀಯ ಮಾಡಬಾರದು. ಒಂದು ವೇಳೆ ಈ ವಿಚಾರದಲ್ಲಿ ರಾಜಕಾರಣಿಗಳು ಮತ್ತೆ ವಿವಾದ ಎಬ್ಬಿಸಿದರೆ ತಮ್ಮ ಸಂಘಟನೆ  ಅವರ ವಿರುದ್ಧ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು ಅವರು ಮಾತನಾಡಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿನಾಕಾರಣ ವಿವಾದ ಹುಟ್ಟಿಸುತ್ತಿದ್ದಾರೆ. ಅವರು ಕನ್ನಡಿಗರಿಗೆ ಅಪಮಾನ  ಮಾಡಿದ್ದು ಕೂಡಲೇ ಕನ್ನಡಿಗರ ಮತ್ತು ಕರ್ನಾಟಕ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com