ಈಶ್ವರಪ್ಪ ಪಿಎ ಅಪಹರಣ ಕೇಸ್: ಪೊಲೀಸರಿಂದ ಯಡಿಯೂರಪ್ಪ ಮನೆ ಶೋಧ

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣ ಸಂಬಂಧ...
ಯಡಿಯೂರಪ್ಪ
ಯಡಿಯೂರಪ್ಪ
ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣ ಸಂಬಂಧ ನಗರ ಪೊಲೀಸರು ಶನಿವಾರ ಮುಂಜಾನೆ ಬಿಜೆಪಿ ರಾಜ್ಯಾಧ್ಯಕ ಯಡಿಯೂರಪ್ಪ ಅವರ ಮನೆಯಲ್ಲಿ ಶೋಧ ನಡೆಸಿದ್ರು.
ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್ ಆರ್ ಸಂತೋಷ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ವಿನಯ್ ಅಪಹರಣ ಪ್ರಕರಣದಲ್ಲಿ ಸಂತೋಷ್ ನನ್ನು ಪ್ರಮುಖ ಆರೋಪಿಯನ್ನಾಗಿ ಪರಿಗಣಿಸಿರುವ ಪೊಲೀಸರು , ಡಾಲರ್ಸ್ ಕಾಲನಿಯಲ್ಲಿರುವ ಬಿಎಸ್ ವೈ ಮನೆಯಲ್ಲಿ ಹುಡುಕಾಟ ನಡೆಸಿದರು ಎಂದು ಹೇಳಲಾಗಿದೆ. ಆದರೆ  ಯಡಿಯೂರಪ್ಪ ಮನೆಯ ಒಳಗೆ ಪೊಲೀಸರನ್ನು ಬಿಡದ ಭದ್ರತಾ ಸಿಬ್ಬಂದಿ ಸಂತೋಷ್ ಮನೆಯಲ್ಲಿ ಇಲ್ಲ ಎಂದು ಹೇಳಿ ಕಳುಹಿಸಿದ್ದಾಗಿ ಹೇಳಿದ್ದಾರೆ.
ಆದರೆ ನನ್ನ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ, ಇದೊಂದು ದ್ವೇಷ ರಾಜಕಾರಣ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.  ಸಂತೋಷ್ ಮನೆಯಲ್ಲಿ ಇದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ನಮ್ಮ ತಂಡ ತೆರಳಿತ್ತು, ಆದರೆ ನಾವು ಸೆರ್ಚ್ ವಾರಂಟ್ ಪಡೆಯದಿದ್ದ ಕಾರಣ ನಮ್ಮನ್ನು ಮನೆಯ ಒಳಗೆ ಬಿಡಲಿಲ್ಲ, ಈ ವೇಳೆ ಯಡಿಯೂರಪ್ಪ ಮನೆಯೊಳಗೆ ಇದ್ದರು ಎಂದು ಮಲ್ಲೇಶ್ವರಂ ಎಸಿಪಿ ಅರುಣ್ ನಾಯಕ್ ಬಡಿಗೇರ್ ಹೇಳಿದ್ದಾರೆ. 
ಇನ್ನು ಈ ಸಂಬಂಧ ಬಿಎಸ್‍ವೈ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸಂತೋಷ್ ಹುಡುಕಿಕೊಂಡು ಎಸಿಪಿ ಬಡಿಗೇರ್ ನೇತೃತ್ವದಲ್ಲಿ ತಂಡ ಬಂದಿತ್ತು. ಪ್ರಕರಣದಲ್ಲಿ ಸಂತೋಷ್ ಭಾಗಿಯಾಗಿಲ್ಲ. ಕಳೆದ 7 ವರ್ಷಗಳಿಂದ ಸಂತೋಷ್ ನನ್ನ ಬಳಿ ಕೆಲಸ ಮಾಡುತ್ತಿದ್ದು, ನನ್ನ ಸಂಬಂಧಿ ಕೂಡ ಹೌದು. ಸಂತೋಷ್ ವಿರುದ್ಧ ಸಾಕ್ಷಿಗಳನ್ನ ಸೃಷ್ಟಿಸಿ ಪಿತೂರಿ ನಡೆಯುತ್ತಿದೆ. ಮಧ್ಯರಾತ್ರಿ ಪೊಲೀಸರು ನನ್ನ ಮನೆಗೆ ಬಂದು ವಿಚಾರಣೆ ನಡೆಸುವ ಅವಶ್ಯಕತೆ ಇರಲಿಲ್ಲ.
ಈಗಾಗಲೇ ಆರೋಪಿ ರಾಜೇಂದ್ರ ಅರಸ್ ಎಂಬ ವ್ಯಕ್ತಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಕೂಡ ಕೊಟ್ಟಿದೆ. ಆದ್ರೆ ಪೊಲೀಸರು ರಾಜೇಂದ್ರ ಅರಸ್‍ಗೆ ಸಂತೋಷ್ ಭಾಗಿಯಾಗಿದ್ದಾನೆ ಎಂದು ಹೇಳಲು ಒತ್ತಡ ಹಾಕುತ್ತಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅವರು ಪತ್ರ ಬರೆದಿದ್ದಾರೆ.
ಮೇ 11 ರಂದು ಇಸ್ಕಾನ್ ದೇವಾಲಯದ ಬಳಿ8 ಮಂದಿಯ ತಂಡವೊಂದು ವಿನಯ್ ನನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿತ್ತು. ಈ ಸಂಬಂಧ ಅದೇ ದಿನ ವಿನಯ್  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ವೇಳೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರಸ್ ಕಿಡ್ನಾಪ್ ಪ್ರಕರಣದಲ್ಲಿ ಸಂತೋಷ್ ಕೈವಾಡವಿದೆ ಎಂದು ಆರೋಪಿಸಿದ್ದಾಗಿ  ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com