
ಬೆಂಗಳೂರು: ಗಣಿಗಾರಿಕೆ ಕಂಪನಿಗೆ ಪರವಾನಗಿ ನೀಡಲು ಬಿಎಸ್ ಯಡಿಯೂರಪ್ಪ ಅವರು ಕಿಕ್ ಬ್ಯಾಕ್ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಸಿಬಿಐ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.
ಪ್ರಕರಣದ ತೀರ್ಪು ಬಂದು 8 ತಿಂಗಳ ಬಳಿಕ ಯಡಿಯೂರಪ್ಪ ಅವರ ವಿರುದ್ಧದ ಕಿಕ್ ಬ್ಯಾಕ್ ಪ್ರಕರಣ ರಾಜ್ಯ ರಾಜಕೀಯ ವಲಯದಲ್ಲಿ ಮತ್ತೆ ಸದ್ದು ಮಾಡುತ್ತಿದ್ದು, ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳ ನಡೆ ಹಲವು ಅನುಮಾನಗಳನ್ನು ಮೂಡಿಸುತ್ತಿದೆ ಎಂದು ಆರೋಪಿಸಲಾಗಿದೆ.
ಕಳೆದ ಅಕ್ಟೋಬರ್ ನಲ್ಲಿ ಪ್ರೇರಣಾ ಟ್ರಸ್ಟ್ ಗೆ ಗಣಿಕಪ್ಪ(ಕಿಕ್ ಬ್ಯಾಕ್) ಪಡೆದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲಾ ಆರೋಪಿಗಳು ದೋಷಮುಕ್ತ ಎಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿತ್ತು. ಬಿಎಸ್ ವೈ ವಿರುದ್ಧದ ಆರೋಪ ಸಾಬೀತುಪಡಿಸುವಲ್ಲಿ ಸಿಬಿಐ ಮತ್ತು ಅವರ ವಕೀಲರು ವಿಫಲರಾದ ಹಿನ್ನೆಲೆಯಲ್ಲಿ ಕೋರ್ಟ್ ಅವರನ್ನು ದೋಷಮುಕ್ತಗೊಳಿಸಿತ್ತು. ಆದರೆ ಪ್ರಕರಣದ ತೀರ್ಪುಹೊರಬಿದ್ದು 8 ತಿಂಗಳುಗಳೇ ಕಳೆದರೂ ಇನ್ನೂ ರಾಜ್ಯ ಸಿಬಿಐ ಅಧಿಕಾರಿಗಳೇಕೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿಲ್ಲ ಎಂಬ ವಿಚಾರ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸಿಬಿಐ ಮೂಲಗಳ ಪ್ರಕಾರ ತೀರ್ಪು ಹೊರಬಿದ್ದ ಮರು ದಿನವೇ ಸಿಬಿಐ ಸಂಸ್ಥೆಯ ಕಾನೂನು ತಜ್ಞರ ತಂಡ ತೀರ್ಪಿನ ವಿರುದ್ಧ ಕರ್ನಾಟಕ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿತ್ತು. ಆದರೆ ರಾಜ್ಯದ ಸಿಬಿಐ ಅಧಿಕಾರಿಗಳು ಮಾತ್ರ ಈ ವರಗೂ ಅರ್ಜಿ ಸಲ್ಲಿಕೆ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಾಮಾನ್ಯವಾಗಿ ತೀರ್ಪು ಹೊರಬಿದ್ದ ದಿನದಿಂದ 90 ದಿನಗಳ ಅವಧಿಯೊಳಗೆ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ಆದರೆ ಬಿಎಸ್ ವೈ ವಿರುದ್ಧ ಕಿಕ್ ಬ್ಯಾಕ್ ಪ್ರಕರಣದ ತೀರ್ಪು ಹೊರಬಿದ್ದು ಬರೊಬ್ಬರಿ 240 ದಿನಗಳೇ ಕಳೆದಿದ್ದರೂ ಇನ್ನೂ ಸಿಬಿಐ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಇದೇ ಕಾರಣಕ್ಕಾಗಿ ಸಿಬಿಐ ಅಧಿಕಾರಿಗಳ ವಿರುದ್ಧ ಬಿಎಸ್ ವೈ ವಿರೋಧಿ ನಾಯಕರು ಶಂಕೆ ವ್ಯಕ್ತ ಪಡಿಸಿದ್ದು, ಕೇಂದ್ರದ ಎನ್ ಡಿಎ ಸರ್ಕಾರದ ಆಣತಿಯಂತೆ ಸಿಬಿಐ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ ಅವರು, ಸಿಬಿಐನ ಈ ನಡೆ ಅವರ ಪಕ್ಷಪಾತ ಧೋರಣೆ ಮತ್ತು ಬಿಜೆಪಿ ಪರ ನಿಲುವನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಸಿಬಿಐ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ತನ್ನ ನಾಯಕರ ವಿರುದ್ಧದ ಪ್ರಕರಣಗಳನ್ನು ಮುಚ್ಚಿಹಾಕುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಏನಿದು ಪ್ರಕರಣ?
ಜಿಂದಾಲ್ ಗ್ರೂಪ್ ನ ಸೌತ್‌ವೆಸ್ಟ್ ಮೈನಿಂಗ್ ಕಂಪನಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಗಣಿ ಪರವಾನಗಿ ಮಂಜೂರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಂದಾಲ್ ಕಂಪನಿಯು 2006ರ ಮಾರ್ಚ್ ನಂತರ 2011ರವರೆಗೆ ಯಡಿಯೂರಪ್ಪ ಪುತ್ರರ ಒಡೆತನ ದಕಂಪನಿಗೆ ಮೂರು ಬಾರಿ ಹಣ ಸಂದಾಯ ಮಾಡಿದೆ ಎಂದು ಹೇಳಲಾಗಿತ್ತು. ನಂತರ ಆ ಹಣವನ್ನು ಪ್ರೇರಣಾ ಟ್ರಸ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ಈ ಅವಧಿಯಲ್ಲಿ ಯಡಿಯೂರಪ್ಪ ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
ಜಿಂದಾಲ್ ಕಂಪನಿಗೆ ಅನುಕೂಲ ಮಾಡಿಕೊಡಲು ಯಡಿಯೂರಪ್ಪ ಸಿಎಂ ಕಚೇರಿ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ತನ್ಮೂಲಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವೇಳೆ ಕೈಗೊಂಡ ಪ್ರತಿಜ್ಞಾ ವಿಧಿ ಮತ್ತು ಸಂವಿಧಾನದ ಮೂಲ ಆಶಯವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ದೂರು ದಾಖಲಾಗಿದ್ದು, ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು.
Advertisement