ಆರೋಗ್ಯ ವಿಚಾರಿಸಿದ್ದಕ್ಕೆ ಧನ್ಯವಾದ.. ಆದರೆ ಸಿಎಂ ಸಿದ್ದರಾಮಯ್ಯ ಜನರ ಬಳಿ ಹೋಗಬೇಕಿತ್ತು: ಎಚ್ ಡಿ ಕುಮಾರಸ್ವಾಮಿ

ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ತಮ್ಮ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದಾರೆ.
ಎಚ್ ಡಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಎಚ್ ಡಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಬೆಂಗಳೂರು: ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ತಮ್ಮ ಆರೋಗ್ಯ ವಿಚಾರಿಸಿದ ಸಿಎಂ  ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು ತಮ್ಮ ಆರೋಗ್ಯಕ್ಕಾಗಿ ಹರಸಿದ ಇಡೀ ಕರ್ನಾಟಕದ ಜನತೆಗೆ ಧನ್ಯವಾದ ಹೇಳುತ್ತೇನೆ.  ನಿಮ್ಮೆಲ್ಲರ ಹರಕೆ ಹಾಗೂ ಹಾರೈಕೆಯಿಂದ ನಾನು ಚೇತರಿಸಿಕೊಂಡಿದ್ದೇನೆ ಎಂದು ಹೇಳಿದರು. ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರ ಕುರಿತು ಮಾತನಾಡಿದ ಕುಮಾರಸ್ವಾಮಿ, "ಸಿದ್ದರಾಮಯ್ಯ ಅವರು  ನನ್ನ ಬಳಿ ಬರುವ ಬದಲು ಜನರ ಬಳಿ ಹೋಗಬೇಕಿತ್ತು. ರಾಜ್ಯದ ರೈತರು ತುಂಬಾ ಕಷ್ಟದಲ್ಲಿದ್ದಾರೆ. ರೈತರನ್ನು ಭೇಟಿ ಮಾಡಬೇಕಿತ್ತು" ಎಂದು ಅಭಿಪ್ರಾಯಪಟ್ಟರು.

ಇನ್ನು ಶನಿವಾರ ಮೈಸೂರಿನಲ್ಲಿ ದಸರಾದ ಜಂಬೂಸವಾರಿ ಮೆರವಣಿಗೆಯ ಮೊದಲು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ "ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ" ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು  ಕಿಡಿಕಾರಿದ ಕುಮಾರಸ್ವಾಮಿ, ಮುಂದಿನ ವರ್ಷ ದಸರಾ ಯಾರು ಉದ್ಘಾಟಿಸುತ್ತಾರೆಂದು ತಾಯಿ ಚಾಮುಂಡೇಶ್ವರಿ ತೀರ್ಮಾನಿಸುತ್ತಾಳೆ" ಎಂದು ಹೇಳಿದರು.

ಡಾ.ಸತ್ಯಕಿ ನೇತೃತ್ವದ ತಂಡದಿಂದ ನನಗೆ ಪುನರ್ಜನ್ಮ
ಇದೇ ವೇಳೆ ತಮಗೆ ಚಿಕಿತ್ಸೆ ನೀಡಿದ ಅಪೋಲೋ ಆಸ್ಪತ್ರೆಯ ನುರಿತ ವೈದ್ಯೆ ಡಾ.ಸತ್ಯಕಿ ಅವರ ತಂಡಕ್ಕೆ ಧನ್ಯವಾದ ಹೇಳಿದ ಕುಮಾರಸ್ವಾಮಿ ಅವರು, "ಅಪೋಲೊ ಆಸ್ಪತ್ರೆಯ ಡಾ.ಸತ್ಯಕಿ ನೇತೃತ್ವದ ತಜ್ಞ ವೈದ್ಯರ ತಂಡ  ನನಗೆ ಎರಡನೇ ಜನ್ಮ ನೀಡಿದೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದರೆ ವಾಪಾಸ್ ಬರುತ್ತಿದ್ದೆನೇನೋ. ಆದರೆ ಇಲ್ಲಿ ಎಲ್ಲರ ಹರಕೆ ಹಾರೈಕೆಯಿಂದಾಗಿ ನಾನು ಚೇತರಿಸಿಕೊಂಡಿದ್ದೇನೆ. ಇಸ್ರೇಲ್ ಗೆ ಹೋಗುವಾಗ ಎದೆ ನೋವು  ಕಾಣಿಸಿಕೊಂಡಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಎರಡು ಹೆಜ್ಜೆ  ನಡೆಯಲು ಸಾಧ್ಯವಾಗಲಿಲ್ಲ. ವಿಮಾನ ನಿಲ್ದಾಣದಲ್ಲಿ ಇಳಿಯುವಾಗಲೂ ಅದೇ ಪರಿಸ್ಥಿತಿ. ಇಸ್ರೇಲ್ ನಲ್ಲಿ ಆಸ್ಪತ್ರೆಯೊಂದಕ್ಕೆ ತೋರಿಸಿದೆ. ಅಲ್ಲಿನ ವೈದ್ಯರು  ಕೂಡಲೇ ಅಡ್ಮಿಟ್ ಆಗಬೇಕು ಎಂದು ಹೇಳಿದರು. ಆದರೆ ನನಗೆ ಅಲ್ಲಿ ಅಡ್ಮಿಟ್ ಆಗಲು ಇಷ್ಟವಿರಲಿಲ್ಲ. ಹೀಗಾಗಿ ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆದೆ ಎಂದು ಹೇಳಿದರು.

ಅಂತೆಯೇ ಇನ್ನು 25 ದಿನಗಳ ತನಕ ನನ್ನನ್ನು ಭೇಟಿ  ಮಾಡಲು ಬರಬೇಡಿ ಎಂದು ರಾಜ್ಯದ ಜನತೆ ಮನವಿ ಮಾಡಿದ ಕುಮಾರಸ್ವಾಮಿ ಆರೋಗ್ಯ ಸುಧಾರಿಸಿದ ಬಳಿಕ ನಾನೇ ನಿಮ್ಮ ಬಳಿ ಬರುತ್ತೇನೆ. ಹಳ್ಳಿ ಹಳ್ಳಿಗೆ ಭೇಟಿ  ನೀಡುತ್ತೇನೆ "ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com