

ಬೆಂಗಳೂರು : ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಈಗಾಗಲೇ ನಾಮಪತ್ರ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಏ. 23 ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ನಿನ್ನೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ ಸಿಎಂ ಸಿದ್ದರಾಮಯ್ಯ , ಬಾಗಲಕೋಟೆಯ ಬಾದಾಮಿ ಜಿಲ್ಲೆಯಿಂದಲೂ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡಿದ್ದವು.
ಆದರೆ, ಈ ಬಗ್ಗೆ ಗುಟ್ಟು ಬಿಟ್ಟುಕೊಡದ ಸಿದ್ದರಾಮಯ್ಯ, ಬಾದಾಮಿಯಲ್ಲಿ ಸ್ಪರ್ಧಿಸುವಂತೆ ಆ ಭಾಗದ ಕಾಂಗ್ರೆಸ್ ನಾಯಕರಿಂದ ಒತ್ತಡಗಳು ಕೇಳಿಬರುತ್ತಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದರು.
ಏ. 15 ರಂದು 218 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಬಾದಾಮಿಗೆ ಡಾ. ದೇವರಾಜ್ ಪಾಟೀಲ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ, ಆದಾಗ್ಯೂ, ಬಿ- ಪಾರಂ ಯಾರಿಗೂ ನೀಡಿರಲಿಲ್ಲ.
ಬಾದಾಮಿಯಲ್ಲಿ ಕುರುಬ ಸಮುದಾಯ ಹೆಚ್ಚಾಗಿದ್ದು, ಸಿದ್ದರಾಮಯ್ಯ ಆ ಸಮುದಾಯಕ್ಕೆ ಸೇರಿರುವುದರಿಂದ ಎರಡನೇ ಸುರಕ್ಷತೆಯ ಕ್ಷೇತ್ರವಾಗಿ ಆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಂತೆ ಸಮೀಕ್ಷಾ ವರದಿಗಳು ಸಲಹೆ ನೀಡಿದ್ದವು.
ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಎಳು ಬಾರಿ ಸ್ಪರ್ಧಿಸಿದ್ದು, ಐದು ಬಾರಿ ಗೆಲುವು ಕಂಡಿದ್ದಾರೆ. ಪ್ರಸ್ತುತ ವರುಣಾ ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಈ ಬಾರಿ ಆ ಕ್ಷೇತ್ರವನ್ನು ತಮ್ಮ ಮಗ ಯತೀಂದ್ರ ಅವರಿಗೆ ಬಿಟ್ಟು ಕೊಟ್ಟಿದ್ದು, ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಕಷ್ಟಸಾಧ್ಯ ಎಂಬ ಸಮೀಕ್ಷಾ ವರದಿ ಹಿನ್ನೆಲೆಯಲ್ಲಿ ಬಾದಾಮಿಯಿಂದಲೂ ಸ್ಪರ್ಧಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುವಂತೆ ಉತ್ತರ ಕರ್ನಾಟಕ ಭಾಗದ ಮುಖಂಡರು ಹೈಕಮಾಂಡ್ ಮೇಲೆ ಒತ್ತಡ ತಂದಿದ್ದು, ಅಲ್ಲಿಂದಲೂ ಕಣಕ್ಕಿಳಿಯುತ್ತಿರುವುದಾಗಿ ಅವರು ಹೇಳಿದ್ದಾರೆ.