ಮೈಸೂರು: ಬಿಎಸ್ಪಿ ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಬುಧವಾರ ಮೈಸೂರಿನಲ್ಲಿ ನಿರೀಕ್ಷಿತ ಪ್ರಮಾಣದ ಜನರನ್ನು ಸೆಳೆಯುವಲ್ಲಿ ವಿಫಲವಾಗಿದ್ದಾರೆ. ಆದರೆ ರ್ಯಾಲಿಯಲ್ಲಿ ಭಾಗವಹಿಸಿದವರು ಮಾತ್ರ ಮಾಯಾವತಿ ನಮ್ಮ ದೇವರಿದ್ದಂತೆ ಎಂದಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ನಗರದ ಮಹರಾಜ ಕಾಲೇಜು ಮೈದಾನದಲ್ಲಿ ನಡೆದ ಜೆಡಿಎಸ್-ಬಿಎಸ್ಪಿ ಸಮಾವೇಶದಲ್ಲಿ ಮಾಯಾವತಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಅವರ ಪತ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಭಾಗವಹಿಸಿದ್ದರು.
ಸಮಾವೇಶ ಮೂರು ಗಂಟೆ ತಡವಾಗಿ ಆರಂಭವಾಗಿದ್ದರಿಂದ, ಸಮಾವೇಶಕ್ಕೆ ಆಗಮಿಸಿದ್ದ ಆ ಕಡಿಮೆ ಜನರು ಸಹ ಕಾದು ಕಾದು ಸುಸ್ತಾಗಿದ್ದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಯಾವತಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ನಾನು ತಿನ್ನುವುದಿಲ್ಲ. ಆದರೆ ಬೇರೆಯವರು ತಿನ್ನಲಿ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೋದಿ ಭ್ರಷ್ಟರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯ ದೇಶ ಕೊಳ್ಳೆ ಹೊಡೆದು ದೇಶ ತೊರೆದಿರುವುದೇ ಇದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.
ದಲಿತ, ಹಿಂದುಳಿದ, ಆದಿವಾಸಿ, ಅಲ್ಪಸಂಖ್ಯಾತ, ರೈತ, ಸಣ್ಣ ವ್ಯಾಪಾರಿಗಳ ಹಿತ ಕಾಯುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸೋತಿವೆ ಎಂದು ಮಾಯಾವತಿ ಆರೋಪಿಸಿದರು.