ರಾಮನಗರ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸೇರಿದಂತೆ ರಾಜ್ಯದಲ್ಲಿ ಯಾರ ದೂರವಾಣಿ ಕದ್ದಾಲಿಕೆಯೂ ನಡೆದಿಲ್ಲ. ಕೇಂದ್ರದಲ್ಲಿ ನಿಮ್ಮದೆ ಸರ್ಕಾರವಿದೆ ಬೇಕಿದ್ದರೆ ತನಿಖೆ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಎಸ್ ವೈಗೆ ತಿರುಗೇಟು ನೀಡಿದ್ದಾರೆ.
ನನ್ನ ಮತ್ತು ಸಿದ್ದರಾಮಯ್ಯ ಅವರ ದೂರುವಾಣಿ ಕರೆಗಳನ್ನು ರಾಜ್ಯ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ ಎಂಬ ಬಿಎಸ್ ವೈ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾನು ಯಾರ ಫೋನನ್ನೂ ಕದ್ದಾಲಿಕೆ ಮಾಡಿಲ್ಲ. ನಾನು ಅಂತಹ ಸಂಸ್ಕೃತಿಯಿಂದ ಬಂದವನಲ್ಲ ಎಂದು ಕಿಡಿ ಕಾರಿದರು.
ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸವನ್ನು ತಲೆಯಲ್ಲಿ ಇಟ್ಟುಕೊಂಡು ಹೀಗೆ ಹೇಳಿರಬಹುದು. ಹೇಗಿದ್ದರೂ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಭೇಟಿ ಮಾಡಿ ತನಿಖೆಗೆ ಮನವಿ ಸಲ್ಲಿಸಲಿ ಎಂದರು.
ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದ ಯಡಿಯೂರಪ್ಪ, ಕದ್ದಾಲಿಕೆಗೆ ಕಡಿವಾಣ ಹಾಕದಿದ್ದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.