

ಬೆಂಗಳೂರು: ಹೊಸದಾಗಿ ಕುಮಾರಸ್ವಾಮಿ ಸಂಪುಟ ಸೇರಿದ 8 ಸಚಿವರ ಪೈಕಿ , ಏಳುಮಂದಿ ಉತ್ತರ ಕರ್ನಾಟಕ ಭಾಗಕ್ಕೆ ಸೇರಿದವರಾಗಿದ್ದಾರೆ. ಈ ಮೂಲಕ ಪಕ್ಷ ಆ ಭಾಗದ ನಾಯಕರನ್ನು ತೃಪ್ತಿ ಪಡಿಸಿದೆ. ಆದರೆ. ಬೆಂಗಳೂರು ಶಾಸಕರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಶಾಸಕರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಹಾಗೂ ಕೃಷ್ಣಪ್ಪ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದಾಗ್ಯೂ, ರೋಷನ್ ಬೇಗ್, ಕೃಷ್ಣಪ್ಪ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿಲ್ಲ. ಆದರೆ. ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ ತಮ್ಮ ತಂದೆಗೆ ಸಂಪುಟದಲ್ಲಿ ಸ್ಥಾನ ಸಿಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏಳು ಬಾರಿ ಶಾಸಕರಾಗಿರುವ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಗೃಹ, ಬೆಂಗಳೂರು ನಗರಾಭಿವೃದ್ದಿ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರನ್ನು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕಡೆಗಣಿಸಲಾಗಿದೆ ಎಂಬ ಕಾರಣದಿಂದ ಸೌಮ್ಯ ರೆಡ್ಡಿ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ತಿರಸ್ಕರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.