ಸಿದ್ದರಾಮಯ್ಯನವರ ಜೊತೆ ಸೇರಿಕೊಂಡು 'ರಾಜಕೀಯ' ಮಾಡಿದರೆ ಹುಷಾರ್: ಪರಮೇಶ್ವರ್ ಎಚ್ಚರಿಕೆ

ಸಮ್ಮಿಶ್ರ ಸರ್ಕಾರದ ಆಡಳಿತ ಮತ್ತು ಕಾರ್ಯವೈಖರಿ ಬಗ್ಗೆ ಪದೇ ಪದೇ ಮಾಧ್ಯಮಗಳ ಮುಂದೆ ...
ಪಕ್ಷದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹಾಗೂ ಸಚಿವರುಗಳಾದ ಕೆ ಜೆ ಜಾರ್ಜ್ ಮತ್ತು ಡಿ ಕೆ ಶಿವಕುಮಾರ್
ಪಕ್ಷದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹಾಗೂ ಸಚಿವರುಗಳಾದ ಕೆ ಜೆ ಜಾರ್ಜ್ ಮತ್ತು ಡಿ ಕೆ ಶಿವಕುಮಾರ್
Updated on: 

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಆಡಳಿತ ಮತ್ತು ಕಾರ್ಯವೈಖರಿ ಬಗ್ಗೆ ಪದೇ ಪದೇ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಬಾರದು ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಸಚಿವರುಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಕೆಲವು ಸಚಿವರುಗಳು ಮತ್ತು ಶಾಸಕರು ಮಾಧ್ಯಮಗಳ ಮುಂದೆ ಹೋಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಕ್ಕೆ ಹಾಗೂ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪರಮೇಶ್ವರ್, ಸರ್ಕಾರದ ವಿರುದ್ಧ ಮಾಧ್ಯಮಗಳ ಎದುರು ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಕೆಲವು ಶಾಸಕರು ಮತ್ತು ಸಚಿವರು ಸೇರಿಕೊಂಡು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿ ಸಮ್ಮಿಶ್ರ ಸರ್ಕಾರದ ಸುಗಮ ಆಡಳಿತಕ್ಕೆ ತೊಂದರೆ ಕೊಡಲು ನೋಡಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

 ಸಿದ್ದರಾಮಯ್ಯನವರು ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾಗ ನೀಡಿದ್ದ ಹೇಳಿಕೆಗಳ ವಿಡಿಯೊ ಮಾಧ್ಯಮಗಳಲ್ಲಿ ವರದಿಯಾದ ನಂತರ ಸರ್ಕಾರದಲ್ಲಿ ಉಂಟಾಗಿರುವ ಸಂಕಷ್ಟಗಳನ್ನು ಬಗೆಹರಿಸಲು ನಾಯಕರುಗಳು ಹರಸಾಹಸಪಡುತ್ತಿದ್ದಾಗ ರಮೇಶ್ ಜಾರಕಿಹೊಳಿ ಮತ್ತು ಶಿವಾನಂದ್ ಪಾಟೀಲ್ ಅವರು ಪಕ್ಷದ ಕೆಲವು ಶಾಸಕರುಗಳೊಡನೆ ಸೇರಿಕೊಂಡು ಸಿದ್ದರಾಮಯ್ಯನವರ ಜೊತೆ ರಹಸ್ಯ ಮಾತುಕತೆ ನಡೆಸಿದ್ದರು ಎನ್ನಲಾಗುತ್ತಿದ್ದು ಇದು ಪರಮೇಶ್ವರ್ ಅವರಿಗೆ ತೀವ್ರ ಸಿಟ್ಟು ತರಿಸಿದೆ ಎನ್ನಲಾಗುತ್ತಿದೆ.

ಇನ್ನೊಂದೆಡೆ, ಪಕ್ಷದ ಮತ್ತು ಸಮ್ಮಿಶ್ರ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿ ಆಡಳಿತ ನಡೆಸಬೇಕು, ಅದಕ್ಕೆ ಪಕ್ಷದ ಹೈಕಮಾಂಡ್ ಹೇಳಿದಂತೆ ಕೇಳಬೇಕು ಎಂದು ಕಾಂಗ್ರೆಸ್ ನ ಪ್ರಭಾವಿ ನಾಯಕ ಹಾಗೂ ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಕೂಡ ಎಚ್ಚರಿಕೆ ನೀಡಿದ್ದಾರೆ.

ಪರಮೇಶ್ವರ್ ಮತ್ತು ಡಿ ಕೆ ಶಿವಕುಮಾರ್ ಈ ಬಗ್ಗೆ ಪಕ್ಷದ ಸಚಿವರಿಗೆ ಹಾಗೂ ಶಾಸಕರಿಗೆ ಆದೇಶ ಹೊರಡಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ಪರಮೇಶ್ವರ್ ಅವರು ಸಮ್ಮಿಶ್ರ ಸರ್ಕಾರದ ಬಗ್ಗೆ ಹೇಳಿಕೆ ನೀಡಲು ಅಧಿಕಾರ ಹೊಂದಿರುತ್ತಾರೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಜೆಡಿಎಸ್ ಬಗ್ಗೆ ಪಕ್ಷದ ಹೈಕಮಾಂಡ್ ಮೃದು ಧೋರಣೆ ತಳೆದಿದೆ ಎಂದು ತಮ್ಮ ಅಸಮಾಧಾನವನ್ನು ಧರ್ಮಸ್ಥಳದ ಪ್ರಕೃತಿ ಚಿಕಿತ್ಸೆಯಲ್ಲಿರುವಾಗ ಸಿದ್ದರಾಮಯ್ಯನವರು ಹೊರಹಾಕಿದ್ದಾರೆ. ಅವರು ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ನಾಯಕನಾಗಿ ಬೆಳೆಯಬೇಕೆಂಬ ಹಂಬಲ ಹೊಂದಿರುವುದು ಸಿದ್ದರಾಮಯ್ಯನವರ ಇತ್ತೀಚಿನ ನಡವಳಿಕೆಗಳು ಮತ್ತು ಹೇಳಿಕೆಗಳಿಂದ ತಿಳಿದುಬರುತ್ತಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ ಜಿ ಪರಮೇಶ್ವರ್, ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವುದರಿಂದ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿನ ಕೆಲವೊಂದು ಗೊಂದಲಗಳನ್ನು ಬಗೆಹರಿಸಲು ಈ ಸಭೆಯನ್ನು ಕರೆಯಲಾಗಿದೆ. ಸಮ್ಮಿಶ್ರ ಸರ್ಕಾರದ ಸುಗಮ ಆಡಳಿತಕ್ಕೆ ಸಚಿವರು ಸಹಕರಿಸಬೇಕು ಎಂದು ಸಭೆಯಲ್ಲಿ ಕೋರಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com