ರಾಜ್ಯದಲ್ಲಿ ಅರಾಜಕತೆ ಪರಿಸ್ಥಿತಿ ನಿರ್ಮಾಣ: ಮಾಜಿ ಸಿಎಂ ಜಗದೀಶ್ ಶೆಟ್ಟರ್

ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಬರೆದಿರುವ ಪತ್ರ ಇದೀಗ ವಿಪಕ್ಷಗಳ ಬಾಣವಾಗಿ ಪರಿಣಮಿಸಿದ್ದು, ಇದನ್ನೇ ಹಿನ್ನಲೆಯಾಗಿಟ್ಟುಕೊಂಡು ಸರ್ಕಾರದ ವಿರುದ್ದ ಬಿಜೆಪಿ ವಾಗ್ದಾಳಿ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕೆಲಸದಲ್ಲಿ ರಾಜಕೀಯ ಹಸ್ತಕ್ಷೇಪ ಕುರಿತಂತೆ ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಬರೆದಿರುವ ಪತ್ರ ಇದೀಗ ವಿಪಕ್ಷಗಳ ಬಾಣವಾಗಿ ಪರಿಣಮಿಸಿದ್ದು, ಇದನ್ನೇ ಹಿನ್ನಲೆಯಾಗಿಟ್ಟುಕೊಂಡು ಸರ್ಕಾರದ ವಿರುದ್ದ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ರಾಜ್ಯದಲ್ಲಿ ಅರಾಜಕ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸ್ ಅಧಿಕಾರಿಗಳ ಪ್ರತಿಯೊಂದು ಕೆಲಸದಲ್ಲೂ ರಾಜಕೀಯ ಹಸ್ತಕ್ಷೇಪ ಹೆಚ್ಚಿದೆ. ಇದಕ್ಕೆ ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾರವರು ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರವೇ ಸಾಕ್ಷೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಬಿಜೆಪಿ ಮೊದಲಿನಿಂದಲೂ ಗೃಹ ಇಲಾಖೆಯಲ್ಲಿ ಕೆಂಪಯ್ಯನವರ ಹಸ್ತಕ್ಷೇಪ ಇದೆ ಎಂದು ಹೇಳುತ್ತಲೆ ಬಂದಿತ್ತು. ಪ್ರಾಮಾಣಿಕ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಬೆಲೆ ಇಲ್ಲ ಎಂಬುದನ್ನು ಹಲವು ಬಾರಿ ಹೇಳಿದ್ದೇವು. ಈಗ ಅದು ಸಾಕ್ಷಿ ಸಮೇತ ಬಯಲಾಗಿದೆ. ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾ, ತಮ್ಮ ಪತ್ರದಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟರಿಗೆ ಮಾತ್ರ ಮಣೆ ಎಂಬುದು ಈ ಪತ್ರದಿಂದ ಗೊತ್ತಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಶೆಟ್ಟರ್, ರಾಜ್ಯದ ಸಿದ್ಧರಾಮಯ್ಯ ಸರ್ಕಾರ ಭ್ರಷ್ಟ ಸರ್ಕಾರ. ರಾಜ್ಯದಲ್ಲಿ ಹರಾಜಕತೆ ತಾಂಡವವಾಡುತ್ತಿದೆ. ಗೃಹ ಸಚಿವರು ನಾಮಕಾವಸ್ಥೆಗೆ ಗೃಹ ಸಚಿವರಾಗಿದ್ದಾರೆ. ಸಿದ್ಧರಾಮಯ್ಯ ಸರ್ಕಾರದ ಕೌಂಟ್ ಡೌನ್ ಆರಂಭವಾಗಿದೆ. ಜನ ಈ ಸರ್ಕಾರಕ್ಕೆ ಪಾಠ ಕಲಿಸುತ್ತಾರೆ. ನಲಪಾಡ್ ಗುಂಡಾಗಿರಿ ಪ್ರಕರಣದಲ್ಲಿ ವರ್ಗಾವಣೆಯಾಗಿದ್ದ ಎಸಿಪಿ ಮಂಜುನಾಥ್ ಅವರನ್ನು ಮತ್ತೆ ಅದೇ ಹುದ್ದೆಗೆ ನೇಮಕ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಲಪಾಡ್ ಜಾಮೀನು ಅರ್ಜಿ ವಿಚಾರಣೆಯಲ್ಲಿದೆ. ತನಿಖೆಯೂ ಪೂರ್ಣಗೊಂಡಿಲ್ಲ. ಹೀಗಿರುವಾಗ ಮತ್ತೆ ಅಧಿಕಾರಿಯನ್ನು ನೇಮಕ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಸರ್ಕಾರ ಭ್ರಷ್ಟರ ಹಾಗೂ ಗೂಂಡಾಗಳ ಬೆನ್ನಿಗೆ ನಿಂತಿದೆ. 
ನಲಪಾಡ್ ಪ್ರಕರಣದಲ್ಲಿ ವಿದ್ವತ್ ಮೇಲೆ ಹಲ್ಲೆಗೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣ ಪತ್ರ ಶಾಸಕ ಹ್ಯಾರಿಸ್ ಅವರಿಗೆ ತಲುಪಿವೆ. ವಿಪರ್ಯಾಸ ಎಂದರೆ ವಿದ್ವತ್ ಅವರ ತಂದೆಗೆ ಇನ್ನೂ ಈ ಪತ್ರಗಳು ಸಿಕ್ಕಿಲ್ಲ. ಇದು ಕಾಂಗ್ರೆಸ್‌ನಲ್ಲಿ ಪ್ರಭಾವಿಗಳು ಏನು ಬೇಕಾದರು ಮಾಡಬಹುದು ಎಂಬುದನ್ನು ತೋರಿಸುತ್ತದೆ. ಬೆಂಗಳೂರನ್ನು ಕ್ರೈಂ ಸಿಟಿಯಾಗಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರದ್ದು. ಚುನಾವಣೆಯಲ್ಲಿ ಜನ ಈ ಸರ್ಕಾರಕ್ಕೆ ಬುದ್ಧಿ ಕಲಿಸುತ್ತಾರೆ ಎಂದು ಶೆಟ್ಟರ್ ವಾಗ್ದಾಳಿ ನೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com