ಬಿಜೆಪಿ ಗೆದ್ದರೆ ರೆಡ್ಡಿ ಆಪ್ತ ಶ್ರೀರಾಮುಲು ಉಪ ಮುಖ್ಯಮಂತ್ರಿ..?: ಅಮಿತ್ ಶಾ ಹೇಳಿದ್ದೇನು?

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದೇ ಆದರೆ ಜನಾರ್ಧನ ರೆಡ್ಡಿ ಆಪ್ತರೊಬ್ಬರು ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದೇ ಆದರೆ ಜನಾರ್ಧನ ರೆಡ್ಡಿ ಆಪ್ತರೊಬ್ಬರು ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ 24 ಗಂಟೆಗಳ ಸಮಯವಿದ್ದು, ಈಗಾಗಲೇ ಬಹಿರಂಗ ಪ್ರಚಾರ ಕೂಡ ಅಂತ್ಯವಾಗಿದೆ. ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಪೂರ್ಣಗೊಳಿಸಿಕೊಂಡಿದ್ದು, ಇದರ ನಡುವೆಯೇ ಬಿಜೆಪಿ ವಲಯದಲ್ಲೊಂದು ಸಂಚಲನಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಹಾಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದೇ ಆದರೆ ಯಡಿಯೂರಪ್ಪ ಸಿಎಂ ಆಗಲಿದ್ದಾರೆ. ಅಂತೆಯೇ ಜನಾರ್ಧನ ರೆಡ್ಡಿ ಆಪ್ತರೊಬ್ಬರು ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜನಾರ್ಧನ ರೆಡ್ಡಿ ಆಪ್ತವಲಯದಲ್ಲಿ ಪ್ರಮುಖವಾಗಿ ಮೊಳಕಾಲ್ಮೂರು ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಿರುವ ಶ್ರೀರಾಮುಲು ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದು, ಬಿಜೆಪಿ ಗೆದ್ದರೆ ಅವರನ್ನೇ ಉಪ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ಈ ಹಿಂದೆ ಬಾದಾಮಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶ್ರೀರಾಮುಲು ಕೂಡ ತಾವು ಉಪ ಮುಖ್ಯಮಂತ್ರಿಯಾಗಬೇಕು ಎಂದು ತಮ್ಮ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಬಯಸುತ್ತಿದ್ದಾರೆ ಎಂದು ಹೇಳುವ ಮೂಲಕ ತಾವು ಉಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪರೋಕ್ಷವಾಗಿ ಹೇಳಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಸುದ್ದಿಗಾರರು ಪ್ರಶ್ನೆ ಮಾಡಿದ್ದು, ಅಮಿತ್ ಶಾ ಪಕ್ಷದ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವುದಾಗಿ  ಹೇಳಿದ್ದಾರೆ.
ಈ ಹಿಂದೆ ಇದೇ ಅಮಿತ್ ಶಾ ಅವರು, ಗಣಿ ಧಣಿ ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಆದರೆ ಇದೇ ಜನಾರ್ಧನ ರೆಡ್ಡೆ ಸಹೋದರರಾದ ಕರುಣಾಕರ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಸೇರಿದಂತೆ ಅವರ ಸಂಬಂಧಿಗಳಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇಷ್ಟು ಮಾತ್ರವಲ್ಲದೇ ಜನಾರ್ಧನ ರೆಡ್ಡಿ ತನ್ನ ಆಪ್ತ ಶ್ರೀರಾಮುಲು ಪರ ಮೊಳಕಾಲ್ಮೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ತನ್ನ ಆಪ್ತ ಸ್ನೇಹಿತನಿಗಾಗಿ  ಮೊಳಕಾಲ್ಮೂರಿನಲ್ಲೇ ನಿವಾಸ ಕೂಡ ಮಾಡಿಕೊಂಡಿದ್ದಾರೆ. ಈ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ರೆಡ್ಡಿ ಪ್ರಚಾರದಿಂದ ಪಕ್ಷಕ್ಕೆ ಆನೆ ಬಲ ಬಂದಿದೆ. ಅವರ ಬೆಂಬಲದಿಂದಾಗಿ ಪಕ್ಷ ಇನ್ನೂ 5-6 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆಲ್ಲಲಿದೆ ಎಂದು ಹೇಳಿಕೆ ನೀಡಿದ್ದರು.
ಈ ವಿಚಾರ ಕೂಡ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿ, ವಿರೋಧಕ್ಕೂ ಕಾರಣವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತಿದ್ದ ಬಿಜೆಪಿ ಬಹಿರಂಗ ಸಭೆ-ಸಮಾರಂಭಗಳಲ್ಲಿ ಬಿಜೆಪಿ ವೇದಿಕೆಯಲ್ಲಿ ಕಾಣಿಸಿಕೊಳ್ಳದಂತೆ ಜನಾರ್ಧನ ರೆಡ್ಡಿಗೆ ಸಲಹೆ ನೀಡಿದ್ದರು. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಕರ್ನಾಟಕ ಬಿಜೆಪಿ ಉಸ್ತುವಾರಿ ನಾಯಕ ಮುರಳಿಧರ್ ರಾವ್ ರೆಡ್ಡಿ ಬಿಜೆಪಿ ಸಮಾರಂಭಗಳಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡರೆ ಅದನ್ನು ಫೋಟೋ ತೆಗೆದು ವಾಟ್ಸಪ್ ಮಾಡಿ ಎಂದು ಹೇಳಿದ್ದರು.
ಒಟ್ಟಾರೆ ಬಹಿರಂಗವಾಗಿ ಜನಾರ್ಧನರೆಡ್ಡಿಯನ್ನು ಪಕ್ಷದಿಂದ ದೂರವಿಟ್ಟಿರುವಂತೆ ಪೋಸ್ ನೀಡುತ್ತಿರುವ ಬಿಜೆಪಿ ಒಳಗೊಳಗೆ ಜನಾರ್ಧನ ರೆಡ್ಡಿ ಮತ್ತು ಅವರ ಆಪ್ತರಿಗೆ ಮಣೆ ಹಾಕುತ್ತಿದೆ ಎಂಬುದು ಬಹಿರಂಗ ರಹಸ್ಯವಾಗಿದೆ. ಈ ಹಿಂದೆ ಆಪರೇಷನ್ ಕಮಲಕ್ಕೆ ನಾಂದಿ ಹಾಡಿದ್ದ ಮತ್ತು ಗಣಿ ಹಗರಣದ ಬಳಿಕ ನಾಪತ್ತೆಯಾಗಿದ್ದ ರೆಡ್ಡಿ ಮತ್ತು ತಂಡ ಇದೀಗ ಮತ್ತೆ ಪುಟಿದೆದ್ದಿದ್ದು, ರಾಜ್ಯ ರಾಜಕಾರಣದಲ್ಲಿ ಎಂತಹ ಸನ್ನಿವೇಶಗಳು ಸೃಷ್ಟಿಯಾಗಲಿವೆಯೋ ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com