ಮತದಾನ ಮಾಡದ ರಮ್ಯಾ, ಪ್ರಕಾಶ್ ರೈ? ಕಿಡಿಕಾರಿದ ಟ್ವೀಟಿಗರು; ಹ್ಯಾಶ್ ಟ್ಯಾಗ್ ವೈರಲ್

ನಟಿ ಹಾಗೂ ಹಾಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಹಾಗೂ ಜಸ್ಟ್ ಆಸ್ಕಿಂಗ್ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ನಟ ಪ್ರಕಾಶ್ ರೈ ವಿರುದ್ಧ ಟ್ವೀಟಿಗರು ಕಿಡಿಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮತದಾನ ನಮ್ಮೆಲ್ಲರ ಹಕ್ಕು.. ಕಾಂಗ್ರೆಸ್ ಗೆ ಮತ ನೀಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದ ನಟಿ ಹಾಗೂ ಹಾಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಹಾಗೂ ಜಸ್ಟ್ ಆಸ್ಕಿಂಗ್ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ನಟ ಪ್ರಕಾಶ್ ರೈ ವಿರುದ್ಧ ಟ್ವೀಟಿಗರು ಕಿಡಿಕಾರಿದ್ದಾರೆ.
ಅರೆ..ಟ್ವೀಟಿಗರ ಕೋಪಕ್ಕೆ ಕಾರಣವಾಗಲು ರಮ್ಯಾ ಮಾಡಿದ್ದಾದರೂ ಏನು ಎಂದು ಗೊತ್ತಾ..? ನಟಿ ರಮ್ಯಾ ಹಾಗೂ ನಟ ಪ್ರಕಾಶ್ ರೈ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿಲ್ಲವಂತೆ. ಮಂಡ್ಯದಲ್ಲಿ ನಟಿ ರಮ್ಯಾ ಅವರು ನಿನ್ನೆ ಮತದಾನ ಮಾಡಬೇಕಿತ್ತು. ಆದರೆ ಅವರು ಮತದಾನಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿಲ್ಲ. ಅಂತೆಯೇ ನಟ ಪ್ರಕಾಶ್ ರೈ ಕೂಡ ಮತದಾನ ಮಾಡಿಲ್ಲ ಎಂದು ಹೇಳಲಾಗುತ್ತಿದೆ. 
ಮಂಡ್ಯದ ಕೆ.ಆರ್ ರಸ್ತೆಯ ಪಿಎಲ್‍ಡಿ ಬ್ಯಾಂಕ್ ಮತಗಟ್ಟೆಯಲ್ಲಿ ರಮ್ಯಾ ಅವರು ಮತದಾನ ಮಾಡಬೇಕಾಗಿತ್ತು. ಆದರೆ ಇದೀಗ ಅವರು ಮತದಾನ ಮಾಡದೆ ದೂರು ಉಳಿದಿದ್ದರಿಂದ ಜನ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ವೋಟು ಮಾಡದವರಿಗೆ ರಾಜಕೀಯ ಮಾತಾನಾಡುವ ನೈತಿಕತೆ ಎಲ್ಲಿದೆ ಎಂದು ಟ್ವೀಟಿಗರು ತರಾಟೆಗೆ ತೆಗೆದುಕೊಂಡಿದ್ದು, 'ನಂಬರ್ ಒನ್ ಸಿಟಿಜನ್' ಅಂತ ಲೇವಡಿ ಮಾಡಿದ್ದಾರೆ. ರಮ್ಯಾ ಮತ್ತು ಬಹುಭಾಷಾ ನಟ ಪ್ರಕಾಶ್ ರೈ ಅವರು ಪೃಧಾನಿ ಮೋದಿ ಬಗ್ಗೆ ಮಾತನಾಡುತ್ತಾ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೆ ಕೆಲವರು ರಮ್ಯಾ ವೋಟು ಮಾಡಿಲ್ಲ ಅಂದರೆ ಪಾಕಿಸ್ತಾನಕ್ಕೆ ಹೋಗೋಕೆ ಹೇಳಿ ಅಂತಾ ಜನರು ಕಿಡಿ ಕಾರಿದ್ದು, ಮೊದಲು ವೋಟ್ ಮಾಡಿ ಜವಾಬ್ದಾರಿ ಕಲಿಯಿರಿ ಎಂದು ರಮ್ಯಾ ಅವರಿಗೆ ಅಂತಾ ಟಾಂಗ್ ಕೊಟ್ಟಿದ್ದಾರೆ.
ಇನ್ನು ನಟ ಪ್ರಕಾಶ್ ರೈ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಬಳಿಕ ತಮ್ಮ ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಆದರೆ ನಿನ್ನೆ ನಡೆದ ಮತದಾನ ಪ್ರಕ್ರಿಯೆ ವೇಳೆ ಅವರು ಮತದಾನ ಮಾಡಿಲ್ಲ ಎಂದು ಟ್ವಿಟರ್ ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ನಟಿ ರಮ್ಯಾ ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಸೋತಿದ್ದರು. ಸೋಲಿನ ಬಳಿಕ ಕ್ಷೇತ್ರದಲ್ಲಿ ರಮ್ಯಾ ಕಾಣಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ನಟಿ ರಮ್ಯಾ ವಿರುದ್ಧ ಕಾರ್ಯಕರ್ತರು ಕೊಂಚ ಅಸಮಾಧಾನದಿಂದ ಇದ್ದಾರೆ. ಈಗ ಮತದಾನಕ್ಕೆ ಕ್ಷೇತ್ರಕ್ಕೆ ಹೋದರೆ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಬಹುದು ಎಂಬ ಭೀತಿಯಿಂದಾಗಿ ರಮ್ಯಾ ಮತದಾನದಿಂದ ದೂರ ಉಳಿದರೇ ಎಂಬ ಪ್ರಶ್ನೆ ಕೂಡ ಮೂಡುತ್ತಿದೆ. 
ಮತದಾನದಿಂದ ದೂರ ಉಳಿದಿದ್ದು ರಮ್ಯಾ ಮಾತ್ರ ಅಲ್ಲ ಇನ್ನೂ ಹಲವು ಮಂದಿ ಇದ್ದಾರೆ. 
ನಿನ್ನೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ದಿನ ಹಲವು ಮಂದಿ ಮತದಾನ ಮಾಡಿಲ್ಲ. ಅದರಲ್ಲಿ ನಟ ಹಾಗೂ ಮಾಜಿ ಸಚಿವ ಅಂಬರೀಷ್ ಅವರ ಪತ್ನಿ ಸುಮಲತಾ ಅವರೂ ಕೂಡ ಇದ್ದಾರೆ. ನಿನ್ನೆ ನಟ ಅಂಬರೀಶ್ ಅವರು ಮಂಡ್ಯಗೆ ಆಗಮಿಸಿ ಮತದಾನ ಮಾಡಿದ್ದರು. ಆದರೆ ಅವರೊಂದಿಗೆ ಸುಮಲತಾ ಅವರು ಕಾಣಿಸಲಿಲ್ಲ.
ಇದೀಗ ಮತದಾನ ಮಾಡದ ನಟ-ನಟಿಯರ ವಿರುದ್ಧದ #NotVoted ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com