

ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಯಾಚಿಸಲು ಕ್ಷಣಗಣನೆ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಾಡಲಾಗಿದೆ. ಇದು ಇಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತ ಯಾರು ಕೂಡ ಗುಂಪುಕಟ್ಟಿ ನಿಲ್ಲುವ ಹಾಗಿಲ್ಲ. ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು ಮಾಡುವ ಹಾಗಿಲ್ಲ. ಬಹುಮತ ಯಾಚನೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯವರೆಗೆ ರೆಸಾರ್ಟ್ ನಲ್ಲಿ ಇಷ್ಟು ದಿನ ವಾಸ್ತವ್ಯ ಹೂಡಿದ್ದ ಶಾಸಕರನ್ನು ವಿಧಾನಸೌಧಕ್ಕೆ ಕರೆತರಲು ಬಸ್ಸುಗಳು ತೆರಳಿವೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮನೆಗೆ ಇಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎಸ್ ರಾಜು ತೆರಳಿ ಭದ್ರತೆ ಬಗ್ಗೆ ಮಾಹಿತಿ ನೀಡಿದರು. ವಿಧಾನಸೌಧ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಕೋರಲಿದ್ದಾರೆ. ಇಂದು ಮಧ್ಯಾಹ್ನ 12.15ರಿಂದ ವಿಧಾನಸಭೆ ಕಲಾಪ ಆರಂಭವಾಗಲಿದ್ದು, ಆರಂಭದಲ್ಲಿ ಸ್ಪೀಕರ್ ಆಯ್ಕೆ ನಡೆಯುತ್ತದೆ. ಇದಾದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಪ್ರಸ್ತಾವವನ್ನು ಮಂಡಿಸಲಿದ್ದಾರೆ. ನಂತರ ಅವರು ಮಾತನಾಡಿ ಪ್ರಸ್ತಾವವನ್ನು ಮತಕ್ಕೆ ಹಾಕಲಾಗುತ್ತದೆ. ಸದನದಲ್ಲಿರುವ ಸದಸ್ಯರ ಪೈಕಿ ಅರ್ಧಕ್ಕಿಂತ ಹೆಚ್ಚು ಮತಗಳು ಬಂದರೆ ಪ್ರಸ್ತಾವಕ್ಕೆ ಅಂಗೀಕಾರ ಸಿಕ್ಕಿ ವಿಶ್ವಾಸಮತ ಸಾಬೀತಾಗುತ್ತದೆ.
ಒಟ್ಟು 224 ಸದಸ್ಯರ ವಿಧಾನಸಭೆಯಲ್ಲಿ ಪ್ರಸ್ತುತ 221 ಸದಸ್ಯಬಲವಿದ್ದು, ಬಹುಮತ ಸಾಬೀತಿಗೆ 111 ಸ್ಥಾನಗಳ ಅವಶ್ಯಕತೆ ಇದೆ. ಬಿಜೆಪಿ 104 ಸಂಖ್ಯಾಬಲ ಹೊಂದಿದ್ದು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸದಸ್ಯರ ಸಂಖ್ಯೆ 115 ಇದ್ದು, ಪಕ್ಷೇತರ ಮತ್ತು ಕೆಪಿಜೆಪಿ ಶಾಸಕರೂ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ವಿಶ್ವಾಸಮತ ಸಾಬೀತಿಗೆ ಯಾವುದೇ ಸಮಸ್ಯೆ ಉಂಟಾಗಬಾರದು. ಸದಸ್ಯರಲ್ಲಿ ಅಸಮಾಧಾನ ಕಾಣಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಪ್ರಸ್ತುತ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮಾತ್ರ ಪ್ರಮಾಣವಚನ ಸ್ವೀಕರಿಸಿದ್ದು, ಬಹುಮತ ಗಳಿಸಿದ ಬಳಿಕವೇ ಸಂಪುಟ ರಚನೆಗೆ ನಿರ್ಧರಿಸಲಾಗಿದೆ.