ಉಪಚುನಾವಣೆ ಕದನ: 3 ದಶಕಗಳ ಬಳಿಕ ಇದೇ ಮೊದಲ ಬಾರಿ ರಾಮನಗರದಲ್ಲಿ ಜೆಡಿಎಸ್-ಕಾಂಗ್ರೆಸ್ ಜಂಟಿ ಪ್ರಚಾರ
ರಾಜ್ಯದಲ್ಲಿ ಉಪ ಚುನಾವಣೆ ಕದನದ ರಂಗು ದಿನದಿಂದ ದಿನಕ್ಕೆ ಏರತೊಡಗಿದ್ದು, 3 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ರಾಮನಗರ ಕ್ಷೇತ್ರದಲ್ಲಿ ಜಂಟಿಯಾಗಿ ಸಮರಕ್ಕಿಳಿಯಲು ಸಜ್ಜಾಗಿವೆ...
ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಕದನದ ರಂಗು ದಿನದಿಂದ ದಿನಕ್ಕೆ ಏರತೊಡಗಿದ್ದು, 3 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ರಾಮನಗರ ಕ್ಷೇತ್ರದಲ್ಲಿ ಜಂಟಿಯಾಗಿ ಸಮರಕ್ಕಿಳಿಯಲು ಸಜ್ಜಾಗಿವೆ.
ನವೆಂಬರ್ 3 ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ತಮ್ಮ ತಮ್ಮ ಪಕ್ಷದ ನಾಯಕರ ಮನವೊಲಿಸಲು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕಾಂಗ್ರೆಸ್ ನಾಯಕರು ಕಾರ್ಯನಿರ್ವಹಿಸಲು ಮುಂದಾಗುತ್ತಿಲ್ಲ. ಹೀಗಾಗಿ ಬಿಕ್ಕಟ್ಟು ಶಮನಗೊಳಿಸಲು ಸ್ವತಃ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಬಿಕ್ಕಟ್ಟು ಶಮನಗೊಳಿಸಲು ಡಿ.ಕೆ.ಶಿವಕುಮಾರ್ ಅವರು ನಿನ್ನೆಯಷ್ಟೇ ಸಭೆಯೊಂದನ್ನು ನಡೆಸಿದ್ದು, ಸಭೆಯಲ್ಲಿ ಮುಖ್ಯಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ನಾಯಕ ಹಾಗೂ ಸಂಸದ ಡಿಕೆ.ಸುರೇಶ್ ಸೇರಿದಂತೆ ಇನ್ನಿತರೆ ಹಿರಿಯ ನಾಯಕರು ಹಾಜರಿದ್ದರು.
ಸಭೆಯಲ್ಲಿ ನಾಯಕರ ಮನವೊಲಿಸಲು ಶಿವಕುಮಾರ್ ಹಾಗೂ ಕುಮಾರಸ್ವಾಮಿಯವರು ಸಾಕಷ್ಟು ಯತ್ನಗಳನ್ನು ನಡೆಸಿದರು. ಬಿಜೆಪಿ ಮಣಿಸಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ನಾಯಕರಿಗೆ ಕರೆ ನೀಡಿದರು, ಸಂಜೆ ಆರಂಭವಾದ ಈ ಸಭೆ ರಾತ್ರಿ 1 ಗಂಟೆಯವರೆಗೂ ಮುಂದುವರೆದಿತ್ತು.
ರಾಮನಗರ ಕ್ಷೇತ್ರದಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಇದರಂತೆ ಬಿಜೆಪಿ ಎಲ್.ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಿದೆ.