ಕೆಶಿಪ್ ಕಚೇರಿಯನ್ನಷ್ಚೇ ಏಕೆ, ವಿಧಾನಸೌಧವನ್ನೂ ಹಾಸನಕ್ಕೆ ಶಿಫ್ಟ್ ಮಾಡಿದರೂ ಅಚ್ಚರಿ ಏನಿಲ್ಲ: ಬಿಜೆಪಿ ಕಿಡಿ

ಕೆಶಿಪ್ ಕಚೇರಿಯಷ್ಟೇ ಅಲ್ಲ ವಿಧಾನಸೌಧವನ್ನೂ ಹಾಸನಕ್ಕೆ ಸ್ಥಳಾಂತರ ಮಾಡಿದರೂ ಯಾವುದೇ ಅಚ್ಚರಿ ಇಲ್ಲ ಎಂದು ಬಿಜೆಪಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬೆಳಗಾವಿ ಕೆಶಿಪ್ ಕಚೇರಿ ಸೇರಿದಂತೆ  ರೇವಣ್ಣ ಅವರ ಇಲಾಖೆಗೆ ಸಂಬಂಧಿಸಿದ ಇತರೆ ಕಚೇರಿಗಳನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಶಿಪ್ ಕಚೇರಿಯಷ್ಟೇ ಅಲ್ಲ ವಿಧಾನಸೌಧವನ್ನೂ ಹಾಸನಕ್ಕೆ ಸ್ಥಳಾಂತರ ಮಾಡಿದರೂ ಯಾವುದೇ ಅಚ್ಚರಿ ಇಲ್ಲ ಎಂದು ಹೇಳಿದೆ.
ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಿಡಿಕಾರಿರುವ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರದ ಅಡಿಯಲ್ಲಿ ಇಡೀ ಆಡಳಿತ ವ್ಯವಸ್ಥೆ ಹಾಸನ ಕೇಂದ್ರಿತವಾಗುತ್ತಿದೆ. ಬೆಳಗಾವಿಯಲ್ಲಿದ್ದ ಕೆಶಿಪ್ ಕಚೇರಿ ಒಂದೇ ಅಲ್ಲ, ಇಡೀ ವಿಧಾನಸೌಧವನ್ನೂ ಕೂಡ ಹಾಸನಕ್ಕೆ ಸ್ಥಳಾಂತರ ಮಾಡಿದರೂ ಯಾವುದೇ ರೀತಿಯ ಅಚ್ಚರಿ ಪಡಬೇಕಿಲ್ಲ. ಕೆಶಿಪ್ ಕಚೇರಿ ಸ್ಥಳಾಂತರದ ಮೂಲಕ ಕುಮಾರಸ್ವಾಮಿ ಸರ್ಕಾರ ಮತ್ತೆ ತನ್ನ ತಾರತಮ್ಯ ನೀತಿ ಮುಂದುವರೆಸಿದೆ. ಸರ್ಕಾರ ಹಾಸನ, ಮಂಡ್ಯ, ರಾಮನಗರ ಕೇಂದ್ರಿತವಾಗುತ್ತಿದೆ ಎಂದು ಕಿಡಿಕಾರಿದೆ.
ಈ ಹಿಂದೆ ಕಳೆದ ಆಗಸ್ಟ್ ನಲ್ಲಿ ಸಚಿವ ರೇವಣ್ಣ ತಮ್ಮ ಇಲಾಖೆಯ ಅಡಿಯಲ್ಲಿ ಬರುವ ಅಂದರೆ, 'ವಿಶ್ವ ಬ್ಯಾಂಕ್‌ ಅಧಿಕಾರಿಗಳ ಪತ್ರ ವ್ಯವಹಾರದ ಆಧಾರದ ಮೇಲೆ ಬೆಳಗಾವಿ ಕೆಶಿಪ್ ಕಚೇರಿ ಸೇರಿದಂತೆ ತಮ್ಮ ಇಲಾಖೆ ವ್ಯಾಪ್ತಿಯ ವಿವಿಧ ಕಚೇರಿಗಳನ್ನು ಸ್ವಂತ ಜಿಲ್ಲೆ ಹಾಸನ ಹಾಗೂ ಇತರೆಡೆಗೆ ಸ್ಥಳಾಂತರ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಈ ಬಗ್ಗೆ ಆಗಸ್ಟ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಉತ್ತರ ಕರ್ನಾಟಕ ಕೆಲವೆಡೆ ವಿಶ್ವಬ್ಯಾಂಕ್ ನೆರವಿನಲ್ಲಿ ₹ 618 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ವಾಪಸ್ ತೆಗೆದುಕೊಳ್ಳಿ ಎಂದು ಅಧಿಕಾರಿಗಳು ಪತ್ರ ಬರೆದಿದ್ದರು. ಅದರಂತೆ ಈಗ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದ್ದರು. 
ಅಂತೆಯೇ ವಿಪಕ್ಷಗಳ ಟೀಕೆಗೆ ಉತ್ತರಿಸಿದ್ದ ಅವರು, 'ಹಾಸನ, ಬೇಲೂರು, ಅರಸೀಕೆರೆ, ಮಡಿಕೇರಿ, ಮೈಸೂರು ವ್ಯಾಪ್ತಿಯಲ್ಲಿ ಶೀಘ್ರವೇ ರೂ. 685 ಕೋಟಿಗೂ ಅಧಿಕ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿ (ಬೇಲೂರು–ಬೆಂಗಳೂರು ರೂ. 175 ಕೋಟಿ, ಎಡೆಗೌಡನಹಳ್ಳಿ–ಹಾಸನ ರೂ. 324 ಕೋಟಿ, ಚಾರ್ಮಡಿ ಘಾಟ್‌ ರೂ. 175 ಕೋಟಿ, ಬಾಣವಾರ–ಹಿರಿಯೂರು ರೂ. 125 ಕೋಟಿ) ಆರಂಭವಾಗಲಿವೆ. ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ಕಾಮಗಾರಿ ಮುಗಿದಿದ್ದರೂ, ಅಲ್ಲೇ ಉಪವಿಭಾಗ ಉಳಿಸಿ ಆರು ತಿಂಗಳಿಂದ ಕೆಲಸ ಇಲ್ಲದಿದ್ದರೂ ಸುಮ್ಮನೇ ಸಂಬಳ ಕೊಡಬೇಕೆ ಎಂದೂ ರೇವಣ್ಣ ಪ್ರಶ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com