ರಾಜಕೀಯ

ಅತೃಪ್ತ ಶಾಸಕರು ಮುಂಬೈ ರೆಸಾರ್ಟ್ ಗೆ; ಕಾಂಗ್ರೆಸ್ ನಾಯಕರಿಗೆ ಮತ್ತೊಂದು ತಲೆನೋವು

ಅತೃಪ್ತ ಶಾಸಕರು ಮುಂಬೈ ರೆಸಾರ್ಟ್ ಗೆ; ಕಾಂಗ್ರೆಸ್ ನಾಯಕರಿಗೆ ಮತ್ತೊಂದು ತಲೆನೋವು
ಮಾಜಿ ಸಿಎಂ ಸಿದ್ದರಾಮಯ್ಯ
Published On :

ಬೆಂಗಳೂರು/ ಬೆಳಗಾವಿ: ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಅತೃಪ್ತ ಶಾಸಕರಿಂದ ಎದುರಾಗಿದ್ದ ಕಂಟಕ ಶಮನವಾಗಿ ಎಲ್ಲವೂ ಸರಿಹೋಯಿತು ಎನ್ನುವಾಗಲೇ ಮತ್ತೊಂದು ಬಿಕ್ಕಟ್ಟು ಎದುರಾಗಿದ್ದು ಭಿನ್ನಮತೀಯ ಕಾಂಗ್ರೆಸ್ ಶಾಸಕರ ಗುಂಪೊಂದು ಮುಂಬೈಗೆ ನಿನ್ನೆ ತೆರಳಿದ್ದು ಪಕ್ಷದ ನಾಯಕರಲ್ಲಿ ಇನ್ನೊಂದು ಸುತ್ತಿನ ಆತಂಕ ಸೃಷ್ಟಿಸಿದೆ.

ಮುಂಬೈಯ ಜುಹುವಿನಲ್ಲಿರುವ ರೆಸಾರ್ಟ್ ವೊಂದಕ್ಕೆ ಕಾಂಗ್ರೆಸ್ ನ ಕೆಲವು ಅತೃಪ್ತ ಶಾಸಕರು ಹೋಗಿದ್ದಾರೆ ಎಂದು ಕೆಲವು ಸುದ್ದಿ ವಾಹಿನಿಗಳಲ್ಲಿ ನಿನ್ನೆ ಪ್ರಸಾರವಾಯಿತು. ಇವರು ಆಪರೇಷನ್ ಕಮಲದ ದಾಳಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ತಮ್ಮ ಕ್ಷೇತ್ರಗಳಿಂದ ನಿನ್ನೆ ಮರೆಯಾದ ಕೆಲವು ಕಾಂಗ್ರೆಸ್ ಶಾಸಕರನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗಳು ಸಂರರ್ಕಿಸಲು ಯತ್ನಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ. ಸಚಿವ ರಮೇಶ್ ಜಾರಕಿಹೊಳಿ ಅವರ ಸಮೀಪವರ್ತಿ ಎಂದು ಹೇಳಿಕೊಳ್ಳುತ್ತಿರುವ ಶಾಸಕ ಮಹೇಶ್ ಕುಮತಳ್ಳಿ ಸಂಪರ್ಕಕ್ಕೆ ಸಿಕ್ಕಿದರು. ತಾನು ಎಲ್ಲಿದ್ದೇನೆ, ಶಾಸಕರು ಮುಂಬೈಯ ರೆಸಾರ್ಟ್ ನಲ್ಲಿದ್ದಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಾನು ಎಂಟಿಬಿ ನಾಗರಾಜ್ ಅವರ ಜೊತೆ ಮಾತುಕತೆ ನಡೆಸಿದ್ದು ಯಾರೂ ಕೂಡ ಮುಂಬೈಗೆ ಹೋಗಿಲ್ಲ. ಸೆಪ್ಟೆಂಬರ್ 25ರಂದು ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ಶೋಲಾಪುರಕ್ಕೆ ಹೋಗಿದ್ದ ಬಿ ಸಿ ಪಾಟೀಲ್ ಅವರು ವಾಪಸಾಗಿದ್ದಾರೆ.ಚಿಕ್ಕಬಳ್ಳಾಪುರ ಶಾಸಕ ಡಾ ಸುಧಾಕರ್ ಅವರಲ್ಲಿ ಕೂಡ ಮಾತನಾಡಿದ್ದು ಅವರು ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ಮಾಧ್ಯಮಗಳು ಸುಮ್ಮನೆ ಇಲ್ಲಸಲ್ಲದ್ದನನು ಊಹೆ ಮಾಡಿ ವರದಿ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಆಪ್ತವಲಯದಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಅತೃಪ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಚಲನವಲನಗಳ ಮೇಲೆ ನಿಗಾವಹಿಸಲು ಜಾಗೃತ ದಳಕ್ಕೆ ಸೂಚಿಸಲಾಗಿದೆ.

ಜೆಡಿಎಸ್ ನ ಕಾನೂನು ಘಟಕ ನಿನ್ನೆ ಬೆಂಗಳೂರು ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರನ್ನು ಕಾನೂನುಬಾಹಿರವಾಗಿ ಸೆಳೆದುಕೊಳ್ಳಲು ನೋಡುತ್ತಿರುವ ಬಿಜೆಪಿ ನಾಯಕರಾದ ಬಿ ಎಸ್ ಯಡಿಯೂರಪ್ಪ, ಆರ್ ಅಶೋಕ್ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ಕೇಸು ದಾಖಲಿಸಬೇಕೆಂದು ಮನವಿ ಸಲ್ಲಿಸಿದರು. ಈ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಹ ಮನವಿ ಸಲ್ಲಿಸಲು ಜೆಡಿಎಸ್ ಚಿಂತನೆ ನಡೆಸಿದೆ.

ಸರ್ಕಾರ ಸ್ಥಿರ; ಕುಮಾರಸ್ವಾಮಿ
; ಇನ್ನೊಂದೆಡೆ ನಿನ್ನೆ ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಸರ್ಕಾರ ಸ್ಥಿರವಾಗಿದ್ದು ಭದ್ರವಾಗಿದೆ. ಯಾರೂ ನಮ್ಮನ್ನು ಬಿಟ್ಟುಹೋಗುವುದಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.