ಬೆಂಗಳೂರು: ಇನ್ನು ಕೆಲವು ದಿನ ರಾಜ್ಯ ರಾಜಕೀಯದ ಹೈ ಡ್ರಾಮಾ ಮುಂದುವರೆಯುವ ಸಾಧ್ಯತೆ ಇದ್ದು, ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 13 ಶಾಸಕರನ್ನು ಕಟ್ಟಿಹಾಕಲು ಸ್ಪೀಕರ್ ರಮೇಶ್ ಅವರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ.
ಒಂದೆಡೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರೆಸಾರ್ಟ್ ರಾಜಕೀಯ ಮಾಡುತ್ತಿರುವ ಅತೃಪ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸ್ಪೀಕರ್ಗೆ ದೂರು ನೀಡಿದ್ದು, ಮತ್ತೊಂದೆಡೆ ಸ್ವೀಕರ್ ರಮೇಶ್ ಕುಮಾರ್ ಅವರು ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ವಿಚಾರಕ್ಕೆ ಸಂಬಂಧಿಸಿದಂತೇ ರಮೇಶ್ ಕುಮಾರ್ ರವಿವರ್ಮ ಕುಮಾರ್ ಅವರಿಂದೆ ಸಲಹೆ ಪಡೆದಿದ್ದು, ಇದಕ್ಕೇ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಕೃಷ್ಣ ಬೈರೇಗೌಡ ಅವರು ಸಹ ಸಾಥ್ ನೀಡಿದ್ದಾರೆ.
ರವಿವರ್ಮ ಕುಮಾರ್ ಜೊತೆ ಸಮಾಲೋಚನೆ ನಡೆಸುತ್ತಿರುವ ಸ್ವೀಕರ್ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷರು ಹಾಜರಾಗಿರುವುದು ಭಾರೀ ಕುತೂಹಲ ಮೂಡಿಸಿದೆ. ರೆಬೆಲ್ಗಳನ್ನು ಹತ್ತಿಕ್ಕಲು ಕಾನೂನು ಪ್ರಯೋಗ ಕುರಿತು ಚರ್ಚೆ ನಡೆಸಲಾಗುತ್ತಿದ್ದು, ಅತೃಪ್ತರನ್ನು ಹೇಗೆ ಕಾನೂನು ಪರಿಮಿತಿಯೊಳಗೆ ಕಟ್ಟಿ ಹಾಕಬಹುದು? ಎಂಬ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ್ದ ರಮೇಶ್ ಕುಮಾರ್ ಅವರು, ಕಳೆದ ಶನಿವಾರ ರಾಜೀನಾಮೆ ಸಲ್ಲಿಸಿದ್ದ 13 ಶಾಸಕರ ಪೈಕಿ ಐವರ ರಾಜೀನಾಮೆ ಮಾತ್ರ ಕ್ರಮಬದ್ಧವಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದರು.