ವಿಶ್ವಾಸ ಮತಯಾಚನೆಗೆ ಸಮಯ ಕೇಳಿ ಶಾಕ್ ನೀಡಿದ ಸಿಎಂ, ಮತ್ತೆ ರೆಸಾರ್ಟ್ ಗೆ ಹಾರಿದ ಅತೃಪ್ತರು, ಮನವೊಲಿಕೆಗೆ ಹರ ಸಾಹಸ

ಕರ್ನಾಟಕದಲ್ಲಿ ಭುಗಿಲೆದ್ದಿರುವ ರಾಜಕೀಯ ಅಸ್ಥಿರತೆ ನಡುವೆಯೇ ನಿನ್ನೆ ನಡೆದ ವಿಧಾನಸಭೆ ಕಲಾಪದಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಗೆ ಸಮಯ ಕೇಳುವ ಮೂಲಕ ಪ್ರತಿಪಕ್ಷ ಬಿಜೆಪಿಗೆ ಶಾಕ್ ನೀಡಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕದಲ್ಲಿ ಭುಗಿಲೆದ್ದಿರುವ ರಾಜಕೀಯ ಅಸ್ಥಿರತೆ ನಡುವೆಯೇ ನಿನ್ನೆ ನಡೆದ ವಿಧಾನಸಭೆ ಕಲಾಪದಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಗೆ ಸಮಯ ಕೇಳುವ ಮೂಲಕ ಪ್ರತಿಪಕ್ಷ ಬಿಜೆಪಿಗೆ ಶಾಕ್ ನೀಡಿದ್ದು, ಇದೇ ಸಂದರ್ಭದಲ್ಲೇ ರಾಜಿನಾಮೆ ನೀಡಲು ವಿಧಾನಸೌಧಕ್ಕೆ ಆಗಮಿಸಿದ್ದ ಅತೃಪ್ತರು ಮತ್ತೆ ರೆಸಾರ್ಟ್ ಗೆ ಹಾರಿದ್ದಾರೆ.
ಹೀಗಾಗಿ ಮತ್ತೊಂದಿಷ್ಟು ದಿನಗಳ ಕಾಲ ಅತೃಪ್ತರ ರೆಸಾರ್ಟ್ ರಾಜಕೀಯ ಮುಂದುವರೆಯಲಿದ್ದು, ಅತೃಪ್ತರ ಮನವೊಲಿಕೆಗೆ ಇತ್ತ ಸಿಎಂ ಎಚ್ ಡಿ ಕುಮಾರಸ್ವಾಮಿ, ಅತ್ತ ಕಾಂಗ್ರೆಸ್ ನಾಯಕರು ಹರ ಸಾಹಸ ಪಡುತ್ತಿದ್ದಾರೆ. ರೆಸಾರ್ಟ್ ನಲ್ಲಿ ತಂಗಿರುವ ಶಾಸಕರನ್ನು ತಲುಪಲು ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ವಿವಿಧ ಕಾಂಗ್ರೆಸ್ ಮುಖಂಡರ ಪ್ರಯತ್ನ ಮುಂದುವರೆದಿದೆ. 
ಏತನ್ಮಧ್ಯೆ ಅತೃಪ್ತರ ರಾಜೀನಾಮೆ ವಿಚಾರದಲ್ಲಿ ಮಂಗಳವಾರದವರೆಗೂ ಯಥಾಸ್ಥಿತಿ ಪಾಲನೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು. ಈ ಹಿನ್ನೆಲೆಯಲ್ಲಿ ಮೈತ್ರಿಪಾಳಯದ ಆತಂಕ ಕೊಂಚ ಕಡಿಮೆಯಾಗಿದೆ. ಆದರೆ ಸುಪ್ರೀಂ ಸೂಚನೆ ಬಿಜೆಪಿ ಮತ್ತು ಅತೃಪ್ತ ಶಾಸಕರ ಪಾಳಯದ ಆತಂಕಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಸುಪ್ರೀಂ ಕೋರ್ಟ್ ನಿರ್ಧಾರದಿಂದಾಗಿ ಪ್ರಸ್ತುತ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಅತೃಪ್ತ ಶಾಸಕರ ಮನವೊಲಿಕೆಗೆ ಸಮಯ ಸಿಕ್ಕಂತಾಗಿದೆ. 
ಅಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ತಮ್ಮ ಶಾಸಕರಿಗೆ ವಿಪ್ ಕೂಡ ಜಾರಿ ಮಾಡಿದ್ದು, ಸೋಮವಾರ ಅಥವಾ ಮಂಗಳವಾರ ನಡೆಯುವ ವಿಶ್ವಾಸ ಮತ ಯಾಚನೆ ವೇಳೆ ಅವರು ಕಡ್ಡಾಯವಾಗಿ ಹಾಜರಿದ್ದು, ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರಬೇಕು. ಇನ್ನು ಈ ಕುರಿತಂತೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಸೋಮವಾರವೇ ವಿಶ್ವಾಸ ಮತ ಯಾಚನೆ ಮಾಡುವಂತೆ ಸಿಎಂ ಎಚ್ ಡಿಕೆಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಸಿಎಂ ಕುಮಾರಸ್ವಾಮಿ ಅವರು ಕೋರ್ಟ್ ತೀರ್ಪು ನೋಡಿಕೊಂಡು ಬುಧವಾರದಂದು ವಿಶ್ವಾಸ ಮತ ಯಾಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಸೋಮವಾರದಂದು ಸ್ಪೀಕರ್ ರಮೇಶ್ ಕುಮಾರ್ ಅವರು ವಿಶ್ವಾಸ ಮತ ಯಾಚನೆಗೆ ದಿನ ನಿಗದಿ ಮಾಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com