ಕೋಲಾರ: ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು ಹೇಳಿದ್ದಾರೆ.
ಇತ್ತೀಚಿಗೆ ಕಾಂಗ್ರೆಸ್ ತೊರೆದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿರುವ ಉಮೇಶ್ ಜಾಧವ್ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ,. ಅದಕ್ಕೆ ಕೆಲವು ತಾಂತ್ರಿಕ ತೊಂದರೆಗಳಿವೆ ಎಂದು ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಜಾಧವ್ ವಿರುದ್ಧ ಕಾಂಗ್ರೆಸ್ ದೂರು ನೀಡಿದ್ದು, ಈ ಬಗ್ಗೆ ಸ್ಪಷ್ಟನೆ ಕೋರಿ ಸೂಕ್ತವಾದ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಉಮೇಶ್ ಜಾಧವ್ ಗೆ ಸೂಚಿಸಲಾಗಿದೆ.
ಉಮೇಶ್ ಜಾಧವ್ ಪ್ರಮಾಣ ಪತ್ರ ಸಲ್ಲಿಸಿದ ನಂತರ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.
ಡಾ. ಉಮೇಶ್ ಜಾಧವ್ ಕೆಲವು ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದಾರೆ. ಮೂರು ಪತ್ರಗಳಲ್ಲಿ ಯಾವುದೇ ರೀತಿಯ ಸಾಮ್ಯತೆ ಇಲ್ಲ. ಹೀಗಾಗಿ ಸ್ಪಷ್ಟನೆ ಕೇಳಿದ್ದೇನೆ ಎಂದು ಸ್ಪೀಕರ್ ತಿಳಿಸಿದ್ದಾರೆ.
ಜಾಧವ್ ಅವರ ರಾಜೀನಾಮೆಯನ್ನು ತಡೆಹಿಡಿಯುವ ಯಾವುದೇ ಉದ್ದೇಶ ಇಲ್ಲ ಮತ್ತು ಈ ಸಂಬಂಧ ತಮ್ಮ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.