ರೋಷನ್ ಬೇಗ್ ಹೇಳಿಕೆಗೆ ಯು ಟಿ ಖಾದರ್ ವಿರೋಧ

ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ನೀಡಿರುವ ಹಿರಿಯ ಶಾಸಕ ರೋಷನ್ ಬೇಗ್ ಅವರ ವಿರುದ್ಧ ಯುಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ನೀಡಿರುವ ಹಿರಿಯ ಶಾಸಕ ರೋಷನ್ ಬೇಗ್ ಅವರ ವಿರುದ್ಧ ಯುಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಶಾಸಕ ರೋಷನ್ ಬೇಗ್ ಅವರ ಹೇಳಿಕೆ ತಮಗೆ ನೋವು ತಂದಿದೆ. ಅವರು ಕಾಂಗ್ರೆಸ್‍ನ ಹಿರಿಯ ನಾಯಕರಾಗಿದ್ದು ಈ ರೀತಿ ಮಾತನಾಡುವುದು ಸರಿಯಲ್ಲ ಯುವ ಅಧ್ಯಕ್ಷರಿಗೆ ಎಲ್ಲರೂ ಸಹಕಾರ ಕೊಡಬೇಕು ಎಂದು ಹೇಳಿದ್ದಾರೆ.
ಅಂತೆಯೇ 'ರೋಷನ್ ಬೇಗ್ ಅವರ ಹೇಳಿಕೆ ಅಚ್ಚರಿ ತಂದಿದೆ. ಶಾಸಕಾಂಗ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಗ್ಗೆ ಮಾತನಾಡಿರುವುದು ಅತ್ಯಂತ ನೋವುಂಟು ಮಾಡಿದೆ. ಈ ಹೇಳಿಕೆ ಬಗ್ಗೆ ನಾವು ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುತ್ತೇವೆ. ಹಿರಿಯರ ಮಾರ್ಗದರ್ಶನದಲ್ಲಿ ದಿನೇಶ್ ಗುಂಡೂರಾವ್ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ವರ್ಗಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ರೋಷನ್ ಬೇಗ್‍ ಅವರಿಗೆ ವೈಯಕ್ತಿಕವಾಗಿ ನೋವಾಗಿರಬಹುದು. ಅದನ್ನ ಸರಿಪಡಿಸುವ ಕೆಲಸವನ್ನು ಪಕ್ಷ ಹಾಗೂ ಹೈಕಮಾಂಡ್ ಮಾಡಲಿದೆ ಎಂದು ಖಾದರ್ ಹೇಳಿದರು.
'ರೋಷನ್ ಬೇಗ್ ಹೇಳಿಕೆಯಿಂದ ಜನರಲ್ಲಿ ಚಿಂತನೆಗೆ ಅವಕಾಶ ನೀಡಿದ್ದಾರೆ. ಸಂವಿಧಾನದ ಪ್ರಕಾರ ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಕಾಂಗ್ರೆಸ್ ಸರ್ಕಾರವಲ್ಲದೆ ಇತರ ಸರ್ಕಾರಗಳು ನೀಡಿಲ್ಲ. ಮುಸ್ಲಿಂ ಮುಖಂಡರ ಒಪ್ಪಿಗೆ ಮೇರೆಗೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಒಂದೇ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. ಈ ವೇಳೆ ರೋಷನ್ ಬೇಗ್ ಅವರು ದೆಹಲಿಯಲ್ಲಿ ಇದ್ದರು. ಕಾಂಗ್ರೆಸ್ ಹಿಂದೆಯೂ ಮುಸ್ಲಿಂ ನಾಯಕರನ್ನು ಪರಿಗಣಿಸಿದೆ. ಮುಂದೆಯೂ ಮುಸ್ಲಿಮರನ್ನು ಪರಿಗಣಿಸಲಿದೆ ಎಂದೂ ಖಾದರ್ ಹೇಳಿದರು. 
ಇಂದು ಬೆಳಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರೋಹಷನ್ ಬೇಗ್, ತಮ್ಮದೇ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನೇರವಾಗ್ದಾಳಿ ನಡೆಸಿದ್ದ ರೋಷನ್ ಬೇಗ್ ಅವರು, 'ಲೋಕಸಭಾ ಚುನಾವಣೆಯ ಟಿಕೆಟ್ ಕೊಡುವಾಗಲೇ ನಾನು ಅಸಮಾಧಾನ ವ್ಯಕ್ತಪಡಿಸಿದ್ದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಒಂದೂ ಸೀಟ್ ಕೊಟ್ಟಿರಲಿಲ್ಲ. ಈ ಹಿಂದೆ ಅಲ್ಪಸಂಖ್ಯಾತರಿಗೆ ಮೂರು ಟಿಕೆಟ್ ಕೊಡುತ್ತಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಈ ಎರಡೂ ಸಮುದಾಯದವರನ್ನು ಕಡೆಗಣಿಸಲಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ದುರಹಂಕಾರದಿಂದ ಈ ರೀತಿ ಫಲಿತಾಂಶ ಬರುತ್ತಿದೆ. ಎಚ್‌.ಡಿ. ಕುಮಾರಸ್ವಾಮಿಯವರ ಮನೆ ಬಾಗಿಲಿಗೆ ಹೋಗಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಆನಂತರ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಾ ಓಡಾಡುತ್ತಿದ್ದಾರೆ. ಇದನ್ನೆಲ್ಲ ಜನರು ಗಮನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com