ಎನ್‌ಆರ್‌ಸಿ, ಸಿಎಎ ಕಾಯ್ದೆಗಳಿಗೆ ಜೆಡಿಎಸ್‌ನ ತೀವ್ರ ವಿರೋಧ, ಕಾಯ್ದೆಯಿಂದ ದೇಶಕ್ಕೆ ದೊಡ್ಡ ಹಾನಿ: ಎಚ್.ಡಿ.ಕುಮಾರಸ್ವಾಮಿ

ಪ್ರಸಕ್ತ‌ ರಾಜಕೀಯ ಪಕ್ಷಗಳು ದೇಶದ ಸಮಸ್ಯೆಗಳನ್ನು  ಸರಿಪಡಿಸುವುದಕ್ಕಿಂತಲೂ ಹೆಚ್ಚಾಗಿ ದೇಶದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ ಎಂದು  ಮಾಜಿ ಮುಖ್ಯಮಂತ್ರಿ,‌ ಜೆಡಿಎಸ್ ಶಾಸಕಾಂಗ ನಾಯಕ ಎಚ್‌‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರಸಕ್ತ‌ ರಾಜಕೀಯ ಪಕ್ಷಗಳು ದೇಶದ ಸಮಸ್ಯೆಗಳನ್ನು  ಸರಿಪಡಿಸುವುದಕ್ಕಿಂತಲೂ ಹೆಚ್ಚಾಗಿ ದೇಶದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ ಎಂದು  ಮಾಜಿ ಮುಖ್ಯಮಂತ್ರಿ,‌ ಜೆಡಿಎಸ್ ಶಾಸಕಾಂಗ ನಾಯಕ ಎಚ್‌‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನಗರದ ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಿಂದೂಗಳ ರಕ್ಷಣೆಗೆ ಇರುವ ಪಕ್ಷ ಎಂದು  ಸಂದೇಶ ನೀಡುತ್ತಿದ್ದರೆ ಮತ್ತೊಂದು ಪಕ್ಷ ಮುಸ್ಲಿಮರ ರಕ್ಷಣೆಗೆ ನಾವಿದ್ದೇವೆ ಎಂದು ಹೇಳಲು ಹೊರಟಿವೆ ಎಂದು ಟೀಕಿಸಿದರು. ವಿ.ಡಿ.ಸಾವರ್ಕರ್ ಸೇರಿದಂತೆ ಇನ್ಯಾರ ಬಗ್ಗೆ ತಾವು ಚರ್ಚಿಸುವ  ಅಗತ್ಯತೆ ಈಗಿಲ್ಲ. ವಲಸೆ ಎನ್ನುವುದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ  ವಿಶ್ವಕ್ಕೆ ಸೀಮಿತವಾಗಿದೆ ಎಂದರು.

ಕೇಂದ್ರ ಸರ್ಕಾರದ ಎನ್‌ಆರ್‌ಸಿ, ಸಿಐಎ  ಪೌರತ್ವ ಕಾಯಿದೆ ತಿದ್ದುಪಡಿಗೆ ಜೆಡಿಎಸ್ ವಿರೋಧವಿದ್ದು ರಾಜ್ಯಸಭಾ ಸದಸ್ಯ ಕುಪೇಂದ್ರ  ರೆಡ್ಡಿ ರಾಜ್ಯಸಭೆಯಲ್ಲಿ ಪಕ್ಷದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ  ನಾನು ಬಹಳ ಪುರುಸೊತ್ತಾಗಿದ್ದು ಬಿಡುವಿನ ಸಮಯವನ್ನು ಓದಿನಲ್ಲಿ  ಕಳೆಯುತ್ತಿದ್ದೇನೆ. ಸ್ವಾತಂತ್ರ ಪೂರ್ವದ ಸ್ಥಿತಿಗಳನ್ನು ಹಾಗೂ ನಂತರದ ಪರಿಸ್ಥಿತಿಯನ್ನು  ಅಧ್ಯಯನ ಮಾಡುತ್ತಿದ್ದೇನೆ. ದೇಶದಲ್ಲಿ ಒಕ್ಕೂಟ ವ್ಯವಸ್ಥೆ ರಚನೆ ಮಾಡುವಾಗ ಹಲವಾರು  ದೇಶಗಳ ಸಂವಿಧಾನ ಅಧ್ಯಯನವನ್ನು ಮಾಡಿ ನಮ್ಮ ಸಂವಿಧಾನ ರಚಿಸಲಾಗಿದೆ. ಬಿಜೆಪಿ ಎರಡನೇ  ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಕಾಶ್ಮೀರಕ್ಕೆ ವಿಶೇಷ ಪ್ರಾತಿನಿಧ್ಯ ರದ್ದು, ಪೌರತ್ವ  ನೀತಿ ತಿದ್ದುಪಡಿ ತಂದಿದೆ. ದೇಶದ ಹಲವಾರು ಕಡೆ ಕೇಂದ್ರದ ನೀತಿ ವಿರೋಧಿಸಿ ಸಾವಿರಾರು  ವಿದ್ಯಾರ್ಥಿಗಳು ಹಲವಾರು ಸಂಘಟನೆಗಳು ಹೋರಾಟ ಮಾಡುತ್ತಿವೆ ಎಂದರು.

ಸಮಾಜ - ಸಮುದಾಯದ  ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಪೌರತ್ವ ಸರಿಯಲ್ಲ. ದೇಶವನ್ನು ಜಾತ್ಯತೀತ ಎಂದು ಅಂಬೇಡ್ಕರ್  ಸೇರಿದಂತೆ ಹಲವು ನಾಯಕರೇ ಹೇಳಿದ್ದಾರೆ. ಹಾಗಾದರೆ ಸಂವಿಧಾನದ ರಚನೆಯ ಮೂಲ ಉದ್ದೇಶವೇನು?  ಪಾಕಿಸ್ತಾನ ಬಾಂಗ್ಲಾ ಏನು ಮಾಡಿದೆ ಎಂದು ಕೇಂದ್ರ ಕೇಳುತ್ತಿರುವುದು ಸರಿಯಲ್ಲ ಎಂದು  ಪ್ರತಿಪಾದಿಸಿದರು. ದೇಶದ ಪ್ರತಿಯೊಬ್ಬ ನಾಗರೀಕನಿಗೂ ಕೇಂದ್ರ ಹಾಗೂ ರಾಜ್ಯ  ಸರ್ಕಾರ ರಕ್ಷಣೆ ಕೊಡಬೇಕು. ಕೇಂದ್ರದ ಈ ಎರಡು ನೀತಿಗೆ ಜೆಡಿಎಸ್‌ನ ವಿರೋಧವಿದೆ ಎಂದು  ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಮುಸ್ಲಿಂ ಸಮಾಜದ ವಿದ್ಯಾರ್ಥಿಗಳಿರುವ ಕಡೆ ಹೋರಾಟ  ನಡೆಯುತ್ತಿದೆ. ಕೆಲವರು ಇದನ್ನು ಎತ್ತಿಕಟ್ಟಿದ್ದಾರೆ‌. ದೇಶದಲ್ಲಿ ವಲಸೆ ಬಂದರವರದ್ದೇ ಸಮಸ್ಯೆ ಅಲ್ಲ. ಸಾವಿರಾರು ಸಮಸ್ಯೆಗಳಿವೆ. ನರೇಂದ್ರ ಮೋದಿ ಅವರ ಸರ್ಕಾರ ಜನವರಿಯಲ್ಲಿಯೇ  ಸಿಎಬಿ ಜಾರಿಯಾಗಲಿದೆ ಎಂದಿತ್ತು. ಅಸ್ಸಾಂ ರಾಜ್ಯದಲ್ಲಿ ಪೂರ್ವ ಪಾಕಿಸ್ತಾನ , ಪೂರ್ವ  ಬಾಂಗ್ಲಾ ದೇಶದಿಂದ ವಲಸೆ ಬಂದಿದ್ದಾರೆ. ಅಸ್ಸಾಂನ ಸಮಸ್ಯೆಯೇ ಬೇರೆ‌. ತ್ರಿಪುರದಲ್ಲಿ ಮೂಲ  ಬುಡಕಟ್ಟು ಜನರ ಸಮಸ್ಯೆಯೇ ಬೇರೆ. ಬಾಂಗ್ಲಾ, ಅಸ್ಸಾಂ,‌ ಪಾಕಿಸ್ತಾನದ ಬಗ್ಗೆ ಕೇಂದ್ರ  ಮಾತಾಡುತ್ತಿದೆ. ಸರ್ಕಾರದ ನೀತಿಗಳು ಹಾನಿಗಳಿಂದಲೇ ತುಂಬಿವೆ. ಎರಡೂ ಕಾಯಿದೆಗಳಿಂದ  ದೇಶದಲ್ಲಿ ಮತ್ತೊಂದು ದೊಡ್ಡ ಸಮಸ್ಯೆಯೇ ಸೃಷ್ಟಿಯಾಗಲಿದೆ ಎಂದರು. 

ಮೋದಿ ಬೇರೆ ಬೇರೆ  ದೇಶಗಳ ಜೊತೆ ಉತ್ತಮ ಸಂಬಂಧ ಹೊಂದಬೇಕೆಂದು ವಿದೇಶಗಳಿಗೆ ಪ್ರವಾಸ ಹೋಗುವುದು ವಿದೇಶಿ  ನಾಯಕರನ್ನು ಭಾರತಕ್ಕೆ ಆಹ್ವಾನಿಸುತ್ತಾರೆ. ಆದರೆ ಪೌರತ್ವ ತಿದ್ದುಪಡಿ ನೀತಿಯಿಂದ ಆ  ದೇಶಗಳಿಗೆ ಮೋದಿ ಯಾವ ಸಂದೇಶ ಕೊಡಲು ಹೊರಟಿದ್ದಾರೆ. ಇಂತಹ ವಿವಾದವನ್ನು ಹುಟ್ಟುಹಾಕುವ  ಅಗತ್ಯವಿತ್ತೇ ? ಎಂದು ಪ್ರಶ್ನಿಸಿದರು. ಜೆಡಿಎಸ್ ರಾಷ್ಟ್ರೀಯ ಪ್ರಧಾನ  ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಮಾತನಾಡಿ, ಕೇಂದ್ರದ ಹೊಸ ನೀತಿಗಳಿಂದಾಗಿ ದೇಶದ  ಪರಿಸ್ಥಿತಿ ಹದಗೆಡುತ್ತಿದೆ. ಎನ್‌ಆರ್‌ಸಿ, ಸಿಎಬಿ ತಿದ್ದುಪಡಿ ಬಿಜೆಪಿಯ ಹಿಡನ್ ಅಜೆಂಡಾ  ಆಗಿದೆ. ವಸುದೇವ ಕುಟುಂಬಕಂ ಎನ್ನುವ ಒಗ್ಗಟ್ಟನ್ನು ಬಿಜೆಪಿ ಒಡೆಯುತ್ತಿದೆ. ಇದು ಮುಂದಿನ  ದಿನಗಳಲ್ಲಿ ದೇಶದ ಪರಿಸ್ಥಿತಿಯನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬ ಭೀತಿ ಎದುರಾಗಿದೆ  ಎಂದು ಆತಂಕ ವ್ಯಕ್ತಪಡಿಸಿದರು. ಮೇಲ್ಮನೆ ಸದಸ್ಯರಾದ ಬಿ.ಎಂ.ಫಾರೂಖ್, ಶರವಣ,  ಬೆಂಗಳೂರು ನಗರ ಘಟಕ ಅಧ್ಯಕ್ಷ ಪ್ರಕಾಶ್ ,‌ ಶಾಸಕ ಬಂಡೆಪ್ಪ ಖಾಶಂಪೂರ, ಮಾಜಿ ಶಾಸಕ  ಕೋನರೆಡ್ಡಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com