ನಾನು ಸಿದ್ದರಾಮಯ್ಯ ಕಾಂಗ್ರೆಸ್ ನ ಸದಸ್ಯನಲ್ಲ: ಮತ್ತೆ ಸಿದ್ದು ವಿರುದ್ಧ ಗುಡುಗಿದ ರೋಷನ್ ಬೇಗ್

ನಾನು ಭಾರತೀಯ ಕಾಂಗ್ರೆಸ್ ಪಕ್ಷದ ಸದಸ್ಯನೇ ಹೊರತು ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಸದಸ್ಯನಲ್ಲ. ನಾನು ಎಂದಿಗೂ ರಾಹುಲ್ ಗಾಂಧಿ ವಿರುದ್ಧ ಟೀಕೆ ಮಾಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಚ್ಛಾಟಿತ ಮುಖಂಡ ರೋಷನ್ ಬೇಗ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಾನು ಭಾರತೀಯ ಕಾಂಗ್ರೆಸ್ ಪಕ್ಷದ ಸದಸ್ಯನೇ ಹೊರತು ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಸದಸ್ಯನಲ್ಲ. ನಾನು ಎಂದಿಗೂ ರಾಹುಲ್ ಗಾಂಧಿ ವಿರುದ್ಧ ಟೀಕೆ ಮಾಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಚ್ಛಾಟಿತ ಮುಖಂಡ ರೋಷನ್ ಬೇಗ್ ಹೇಳಿದ್ದಾರೆ.
ಪಕ್ಷದಿಂದ ಉಚ್ಛಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೋಷನ್ ಬೇಗ್ ಅವರು, ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ನಾಯಕತ್ವವನ್ನು ಪ್ರಶ್ನಿಸುವ ಮತ್ತು ಟೀಕಿಸುವ ನಾಯಕರನ್ನು ಅಮಾನತು ಮಾಡಲಾಗುತ್ತಿದೆ ಎಂದು ಬೇಗ್ ಆರೋಪಿಸಿದರು.
'ನಾನು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿದ್ದು ಕೇವಲ ನನ್ನ ಮಾತಲ್ಲ. ರಾಜ್ಯದ ಮೂಲೆ ಮೂಲೆಯಲ್ಲಿರುವ ಸಾವಿರಾರು ಕಾರ್ಯಕರ್ತರ ಮಾತು. ಹಲವು ಕಾರ್ಯಕರ್ತರು ನನ್ನನ್ನು ಸಂಪರ್ಕಿಸಿ ನಮ್ಮ ಮನಸ್ಸಿನಲ್ಲಿ ಇದ್ದದ್ದನ್ನು ನೀವು ಹೇಳಿದ್ದೀರಿ ಎಂದು ಹೇಳಿದ್ದಾರೆ.  ಕರ್ನಾಟಕ ಕಾಂಗ್ರೆಸ್ ನಲ್ಲಿ ಸತ್ಯ ಹೇಳುವುದೆ ಅಪರಾಧವೇ?. ಲೋಕಸಭಾ ಚುನಾವಣೆ ಫಲಿತಾಂಶ ನೋಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಲು ಮುಂದಾಗಿಲ್ಲವೇ?, ರಾಜ್ಯದಲ್ಲಿ ಕೇವಲ ಒಂದು ಸೀಟು ಬಂತಲ್ಲ ಈ ಬಗ್ಗೆ ನೀವು ಏನು ಹೇಳುವಿರಿ? ಎಂದು ಪ್ರಶ್ನೆ ಮಾಡಿದ್ದಾರೆ.
ಅಂತೆಯೇ 'ನಮ್ಮ ಪಕ್ಷದ ದಲಿತ ನಾಯಕರಾದ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸುತ್ತೇವೆ ಎಂದು ಕೆಲವರು ಬಹಿರಂಗ ಹೇಳಿಕೆ ಕೊಟ್ಟರು. ಮಂಡ್ಯದಲ್ಲಿ ನಮ್ಮ ಪಕ್ಷದ ನಾಯಕರು ಸುಮಲತಾ ಅವರನ್ನು ಭೇಟಿ ಮಾಡಿದರು, ಅವರ ಪರವಾಗಿ ಪ್ರಚಾರ ಮಾಡಿದರು. ಆದರೆ, ಏಕೆ ಕ್ರಮ ಕೈಗೊಂಡಿಲ್ಲ. ಸತ್ಯ ಹೇಳಿದ್ದಕ್ಕೆ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಾಯಿತೇ?.. ನನ್ನ ಶಿವಾಜಿನಗರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಾನು 14 ಸಾವಿರಕ್ಕೂ ಅಧಿಕ ಲೀಡ್ ತೆಗೆದುಕೊಂಡಿದ್ದೇನೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಅವರ ಕ್ಷೇತ್ರದಲ್ಲಿ ಎಷ್ಟು ಲೀಡ್ ಪಡೆದರು, ಸಿದ್ದರಾಮಯ್ಯ ಹಳೇ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಎಷ್ಟು ಲೀಡ್ ಬಂತು, ಬಾದಾಮಿಯಲ್ಲಿ ಕಾಂಗ್ರೆಸ್ ಗೆ ಎಷ್ಟು ಲೀಡ್ ಸಿಕ್ಕಿತ್ತು?.. ಎಂದು ಹೇಳಿದರು.
ನಾನು ಪಕ್ಷದ ನಾಯಕರ ವಿರುದ್ಧ ಮಾತನಾಡಿದಾಗ ಕೇವಲ ಎಕ್ಸಿಟ್ ಪೋಲ್ ಫಲಿತಾಂಶ ಬಂದಿತ್ತು. ಲೋಕಸಭಾ ಫಲಿತಾಂಶ ಬಂದ ಬಳಿಕ ಏಕೆ ಪಕ್ಷದ ಎಲ್ಲಾ ನಾಯಕರ ಸಭೆಯನ್ನು ಕರೆಯಲಿಲ್ಲ. ಫಲಿತಾಂಶ ಹೀಗಿದೆ ಮುಂದೆ ಪಕ್ಷವನ್ನು ಹೇಗೆ ಸಂಘಟನೆ ಮಾಡೋಣ ಎಂದು ಚರ್ಚೆ ಮಾಡಬಹುದಿತ್ತಲ್ಲವೇ?. ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲು ಆಗುವುದಿಲ್ಲವೇ?.. ತುಮಕೂರು ಕ್ಷೇತ್ರದಲ್ಲಿ ಮುದ್ದಹನುಮೇಗೌಡರು ಯಾವ ತಪ್ಪು ಮಾಡಿದ್ದರು. ಅವರನ್ನು ಚುನಾವಣೆಯಲ್ಲಿ ಬಲಿಪಶುವನ್ನಾಗಿ ಮಾಡಲಾಯಿತು. ಯಾವುದೇ ತಪ್ಪು ಮಾಡದ ಅವರಿಗೆ ಮೋಸ ಮಾಡಿ ಮೈತ್ರಿ ಎಂದು ಹೇಳಿ ಟಿಕೆಟ್ ತಪ್ಪಿಸಿ ಸೋಲಿಸಿದಿರಿ. ದೇವೇಗೌಡರಿಗೆ ಟಿಕೆಟ್ ಕೊಟ್ಟು ಈಗ ಆಗಿದ್ದೇನು? ಎಂದು ಪ್ರಶ್ನಿಸಿದ್ದಾರೆ.
ನಾನು ಸಿದ್ದರಾಮಯ್ಯ ಕಾಂಗ್ರೆಸ್ ನ ಸದಸ್ಯನಲ್ಲ
ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿದ್ದೇನೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ನಲ್ಲಿ ಇಲ್ಲ. ಸತ್ಯ ಹೇಳಿದ ಕಾರಣಕ್ಕೆ ನನ್ನ ವಿರುದ್ಧ ಕ್ರಮ ಕೈಗೊಂಡಿದ್ದೇ ಆದರೆ, ತುಮಕೂರು, ಕೋಲಾರ, ಮಂಡ್ಯ ಭಾಗದ ನಾಯಕರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ?.  ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಿಸ್ತಿನಿ ಸಿಪಾಯಿ. ನನ್ನ ಮಿತ್ರರು, ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು, ಹಿತೈಷಿಗಳ ಜೊತೆ ಚರ್ಚೆ ನಡೆಸಿ ನಾನು ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ. ನಾನು ಪಕ್ಷದ ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ, ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತೇನೆ. ಬಳಿಕ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಕುರಿತು ತೀರ್ಮಾನ ಮಾಡುತ್ತೇನೆ' ಎಂದು ರೋಷನ್ ಬೇಗ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com