ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ ಎಂಬ ಹೇಳಿಕೆ ಬಾಲಿಶತನದ್ದು: ಸಿದ್ದರಾಮಯ್ಯ

ರಾಜ್ಯದ ಆರ್ಥಿಕ ಪರಿಸ್ಥಿತಿ ಅತ್ಯಂತ ಸುಭದ್ರವಾಗಿದ್ದು, ದೇಶದಲ್ಲೇ ಉತ್ತಮ ಸ್ಥಿತಿಯಲ್ಲಿದೆ. 2004ರಿಂದಲೂ ರಾಜ್ಯ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿದೆ. ಆದರೆ ರಾಜ್ಯ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ ಎಂಬ ಕೆಲವರ ಹೇಳಿಕೆ ಬಾಲಿಶ ಹೇಳಿಕೆಯಾಗಿದೆ. ಅಂತಹವರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಗೊತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆ ಅಧಿವೇಶನ
ವಿಧಾನಸಭೆ ಅಧಿವೇಶನ

ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಅತ್ಯಂತ ಸುಭದ್ರವಾಗಿದ್ದು, ದೇಶದಲ್ಲೇ ಉತ್ತಮ ಸ್ಥಿತಿಯಲ್ಲಿದೆ. 2004ರಿಂದಲೂ ರಾಜ್ಯ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿದೆ. ಆದರೆ ರಾಜ್ಯ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ ಎಂಬ ಕೆಲವರ ಹೇಳಿಕೆ ಬಾಲಿಶ ಹೇಳಿಕೆಯಾಗಿದೆ. ಅಂತಹವರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಗೊತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಹಣಕಾಸು ಲೇಖಾನುದಾನ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದ ಹಣಕಾಸಿನ ಸ್ಥಿತಿ ಸರಿಯಾಗಿಯೇ ಇದೆ. ಮೋಟಾರು ವಾಹನ ತೆರಿಗೆ ಮಾತ್ರ ಕೊರತೆ ಆಗಿದೆ, ಉಳಿದೆಲ್ಲ ತೆರಿಗೆ ಸಂಗ್ರಹ ಸರಿಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಸರಿಯಲ್ಲ. ಅವರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಶಾಸಕರೊಬ್ಬರು ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೇಳಿದರು, ನಾನು ದುಡ್ಡು ಖಾಲಿ ಎಂದೆ ಅಷ್ಟೆ ಖಜಾನೆ ಖಾಲಿ ಎಂದು ಹೇಳಿಲ್ಲ. ಇದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.

ಮಾತು ಮುಂದುವರಿಸಿದ ಸಿದ್ದರಾಮಯ್ಯ, ರಾಜ್ಯದ ಬಜೆಟ್‌ 2,34,153 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇನ್ನು ಮುಂದಿನ ನಾಲ್ಕೈದು ವರ್ಷಗಳಲ್ಲಿ ಇದು ಶೇಕಡಾ 9-10ರಷ್ಟು ಹೆಚ್ಚಳವಾಗಲಿದೆ. ಸುಮಾರು 3 ಲಕ್ಷ ಕೋಟಿ ರೂಪಾಯಿಗೆ ಬಜೆಟ್‌ಗೆ ಏರುವ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಹಿಂದಿನ ಹಣಕಾಸು ಸಚಿವ ದಿ.ಅರುಣ್ ಜೇಟ್ಲಿಯವರೇ ತಮಗೆ ಹೇಳಿದ್ದರು ಎಂದು ಹೇಳಿದ ಸಿದ್ದರಾಮಯ್ಯ, ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಜಿಎಸ್‌ಟಿಯ ನಮ್ಮ ಪಾಲು ಕಡಿಮೆಯಾಗಿದೆ. ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದಾಗ ರಾಜ್ಯದ ತೆರಿಗೆಯಲ್ಲಿ ನಮ್ಮ ಪಾಲು 39 ಸಾವಿರ ಕೋಟಿ ರೂ.ಕೇಂದ್ರದಿಂದ ಬಂದಿತ್ತು. ಆದರೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿದ್ದಾಗ 1,672 ಕೋಟಿ ರೂ. ಕಡಿಮೆ ಆಯಿತು. ಇದು ಮಧ್ಯಂತರ ಪರಿಶೀಲನಾ ವರದಿಯಲ್ಲಿ ಪ್ರಕಟವಾಗಿದೆ. ಮುಂದೆ ಇನ್ನಷ್ಟು ಅನುದಾನ ಕಡಿಮೆಯಾಗಬಹುದು. ಆದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರದ ಮೇಲೆ ಒತ್ತಡ ತಂದು ಇನ್ನಷ್ಟು ಹೆಚ್ಚಿನ ಪಾಲು ಪಡೆಯಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಕನಿಷ್ಠ 10 ಸಾವಿರ ಕೋಟಿ ಪ್ರವಾಹ ಪರಿಹಾರ ತರಬೇಕು. ರಾಜ್ಯದಿಂದಲೂ 10 ಸಾವಿರ ಕೋಟಿ ರೂಪಾಯಿ ಹಣವನ್ನು ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ಖರ್ಚು ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಅನ್ನಭಾಗ್ಯ ಯೋಜನೆಯಡಿ ಯಾವುದೇ ಕಾರಣಕ್ಕೂ ಅಕ್ಕಿ ಕಡಿತ ಮಾಡಬಾರದು. ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡುತ್ತಿರುವ ಹಾಲನ್ನು ನಿಲ್ಲಿಸಬಾರದು. ರೈತರ ಅನುಕೂಲಕ್ಕಾಗಿ ಜಾರಿಗೆ ತಂದ ಕೃಷಿ ಹೊಂಡ ಯೋಜನೆಯನ್ನು ನಿಲ್ಲಿಸಬಾರದು. ಇದೊಂದು ಉತ್ತಮ ಯೋಜನೆಯಾಗಿದ್ದು, ರೈತರು ಈ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಕ್ರಮ ನಡೆದಿದೆ ಎಂಬ ಆರೋಪ ಮುಂದಿಟ್ಟು ಯೋಜನೆಗೆ ತಡೆ ನೀಡಲಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಮುಖ್ಯಮಂತ್ರಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಹಾಲು ಉತ್ಪಾದಿಸುವ ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ನಿಲ್ಲಿಸಬಾರದು. ಬೇರೆ ದೇಶಗಳಿಂದ ಹಾಲು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದರಿಂದ ರಾಜ್ಯದ ರೈತರಿಗೆ ತೊಂದರೆಯಾಗಲಿದೆ. ಆದ್ದರಿಂದ ಈ ಬಗ್ಗೆ  ಕೇಂದ್ರದ ಗಮನಕ್ಕೆ ತಂದು ರಾಜ್ಯದಲ್ಲಿ ಆಮದು ಹಾಲು ಬೇಡ ಎಂದು ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿದರು.

ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಜನಪ್ರಿಯವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಈ ಯೋಜನೆಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಬಿಬಿಎಂಪಿ ಆಯುಕ್ತರೇ ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ 198 ಹಾಗೂ ರಾಜ್ಯದ ಇತರೆಡೆ 200 ಇಂದಿರಾ ಕ್ಯಾಂಟೀನ್‌ಗಳಿವೆ. ಇದಕ್ಕೆ ಒಟ್ಟು 100 ಕೋಟಿ ಅನುದಾನ ಸಾಗಾಗುತ್ತದೆ. 2.34 ಲಕ್ಷ ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಯೋಜನೆಗೆ 100 ಕೋಟಿ ನೀಡುವುದು ದೊಡ್ಡ ವಿಷಯ ಅಲ್ಲ. ಇದು ದೊಡ್ಡ ಹೊರೆಯೂ ಅಲ್ಲ. ಆದ್ದರಿಂದ ರಾಜ್ಯ ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸದೆ ಅಲ್ಲಿ ಗುಣಮಟ್ಟದ ಆಹಾರ ನೀಡಬೇಕು. ಸಾಧ್ಯವಾದರೆ ಇನ್ನಷ್ಟು ವಿಧದ ಆಹಾರವನ್ನು ನೀಡಲು ಪ್ರಯತ್ನಿಸಬೇಕು. ಅದೇ ರೀತಿ ವಿದ್ಯಾಸಿರಿ ಯೋಜನೆಯನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಯಡಿಯೂರಪ್ಪ ಕಾಲೆಳೆದ ಸಿದ್ದರಾಮಯ್ಯ
ಕೇಂದ್ರದಿಂದ ಹೆಚ್ಚಿನ ಅನುದಾನ ತರಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಸಲಹೆ ನೀಡಿ ಮಾತನಾಡುವಾಗ, ಹಿಂದೆಲ್ಲಾ  ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುತ್ತಿದ್ದರು. ಆದರೆ ಈಗ ಗುಡುಗೂ ಇಲ್ಲ ಮಿಂಚೂ ಇಲ್ಲ. ಯಡಿಯೂರಪ್ಪ ಮೆತ್ತಗಾಗಿ ಬಿಟ್ಟಿದ್ದಾರೆ. ಅವರ ಹಿಂದಿನ ಜೋರುತನ ಈಗ ಇಲ್ಲ. ಅದನ್ನು ಈಗ ಇಲ್ಲದಂತೆ ಮಾಡಿಬಿಟ್ಟಿದ್ದಾರೆ... ನೀವು ಹಿಂದಿನ ಯಡಿಯೂರಪ್ಪ ಆಗಿ ಉಳಿದೇ ಇಲ್ಲ ಎಂದು ಕಾಲೆಳೆದರು. ಇದಕ್ಕೆ ಯಡಿಯೂರಪ್ಪ ಮುಗುಳ್ನಗೆಯೇ ಉತ್ತರವಾಗಿತ್ತು.

ಈ ವೇಳೆ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ ಅವರು, ನೀವೂ ಹಿಂದೆ ಹೇಗಿದ್ದಿರಿ ದಾಡಿ ಬಿಟ್ಟುಕೊಂಡು ರೆಬೆಲ್ ಆಗಿದ್ರಿ...ಈಗ ಮೆತ್ತಗಾಗಿ ಬಿಟ್ರಲ್ಲಾ ಎಂದು ಸಿದ್ದರಾಮಯ್ಯ ಕಾಲೆಳೆಯಲು ಪ್ರಯತ್ನಿಸಿದರು.

ಆದರೆ ನೀನು ಮಾತ್ರ ರೆಬೆಲ್ಲೂ ಆಗಲಿಲ್ಲ, ಮೆತ್ತಗೂ ಆಗಿಲ್ಲ ಎಂಬುದೇ ಚಿಂತೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಇದರಂತೆ ನಿನ್ನೆ ನಡೆದ ಕಲಾಪ ಹಲವು ಸಾರಸ್ಯಕರ ಚರ್ಚೆಗೆ ಸಾಕ್ಷಿಯಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com