ಎಪಿಎಂಸಿ ಮುಚ್ಚುವ ಪ್ರಶ್ನೆಯೇ ಇಲ್ಲ, ಮತ್ತಷ್ಟು ಬಲವರ್ಧನೆ; ಸಚಿವ ಎಸ್.ಟಿ. ಸೋಮಶೇಖರ್

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸ್ಲಂಗಳಿವೆಯೋ ಅಲ್ಲಲ್ಲಿ ಸ್ಲಂ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ಸಿಗಬೇಕಿದೆ. ಈ ಕೆಲಸವನ್ನು ಆದಿಚುಂಚನಗಿರಿ ಶ್ರೀಮಠದಿಂದ ಮಾಡಲಾಗುವುದು. ಸರ್ಕಾರದ ಕಡೆಯಿಂದ ಜಾಗವಿದ್ದರೆ ಸಾಕು ಎಂದು ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಹೇಳಿದ್ದಾರೆ.
ಸಚಿವ ಸೋಮಶೇಖರ್
ಸಚಿವ ಸೋಮಶೇಖರ್

ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸ್ಲಂಗಳಿವೆಯೋ ಅಲ್ಲಲ್ಲಿ ಸ್ಲಂ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ಸಿಗಬೇಕಿದೆ. ಈ ಕೆಲಸವನ್ನು ಆದಿಚುಂಚನಗಿರಿ ಶ್ರೀಮಠದಿಂದ ಮಾಡಲಾಗುವುದು. ಸರ್ಕಾರದ ಕಡೆಯಿಂದ ಜಾಗವಿದ್ದರೆ ಸಾಕು ಎಂದು ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಹೇಳಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ವಿಜಯನಗರದ ಆದಿಚುಂಚನಗಿರಿ ಶ್ರೀಮಠಕ್ಕೆ ಭೇಟಿ ನೀಡಿ, ಡಾ. ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಸಚಿವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಬೆಂಗಳೂರಿನ ಶೀಪೀಠದಲ್ಲಿದ್ದಾರೆಂದರೆ ಆಗಾಗ ಭೇಟಿ ಕೊಡುವ ಪರಿಪಾಠವನ್ನು ಹೊಂದಿದ್ದೇನೆ. ಇಂದು ಸಹ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದರು.

ಕೊರೋನಾ ಎರಡನೇ ಅಲೆ ಬಗ್ಗೆ ಭಯ ಪಡಬೇಕಾದ ಅಗತ್ಯವಿಲ್ಲ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸ್ ಬಳಕೆಮಾಡಬೇಕು. ಜೊತೆಗೆ ಕೇಂದ್ರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇನ್ನು ನಾಲ್ಕೈದು ತಿಂಗಳು ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕು ಎಂದು ಸಚಿವರು ಕರೆ ನೀಡಿದರು.

ಡಿಸೆಂಬರ್ 25ರಂದು ವಾಜಪೇಯಿ ಅವರ ಹುಟ್ಟುಹಬ್ಬ. ಅಂದು ರೈತರ ದಿನವನ್ನಾಗಿ ನಾವು ಆಚರಿಸುತ್ತಿದ್ದೇವೆ. ಅಂದು 30 ಜಿಲ್ಲವಗಳಲ್ಲೂ ಸುದ್ದಿಗೋಷ್ಠಿ ನಡೆಸಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಏನೆಲ್ಲ ಉಪಯೋಗವಾಗಲಿದೆ ಎಂಬ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು. ಇದು ಹೇಗೆ ರೈತರಿಗೆ ಉಪಕಾರಿ ಎನ್ನುವುದನ್ನು ಮನದಟ್ಟು ಮಾಡಲಾಗುವುದು ಎಂದು ತಿಳಿಸಿದರು.

ಎಪಿಎಂಸಿ ಮುಚ್ಚುವ ಪ್ರಶ್ನೆಯೇ ಇಲ್ಲ. ಯಾರಿಗೂ ಅದರಿಂದ ತೊಂದರೆಯಾಗದು. ಎಪಿಎಂಸಿಯನ್ನು ಇನ್ನೂ ಮೇಲ್ದರ್ಜೆಗೇರಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಇದಕ್ಕಾಗಿ ನಬಾರ್ಡ್ ನಿಂದ ಸಹ 205 ಕೋಟಿ ರೂಪಾಯಿ ಅನುದಾನ ನೀಡಿದೆ. ಅಲ್ಲದೆ, 35 ಪೈಸೆಗೆ ಇಳಿಸಿದ್ದ ಸೆಸ್ ಅನ್ನು ವರ್ತಕರು ಹಾಗೂ ಪ್ರತಿಪಕ್ಷಗಳ ಆಗ್ರಹದ ಮೇರೆಗೆ 1 ರೂಪಾಯಿಗೆ ಏರಿಸಿ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ಆದಾಯದಲ್ಲಿ ನಷ್ಟ ಎಂಬ ಮಾತೂ ಇನ್ನು ಬಾರದು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಮೈಸೂರು ಡಿಸಿ ವರ್ಗಾವಣೆಗೆ ಸಂಬಂಧಿಸಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೋನಾ ನಿಯಂತ್ರಣದಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ. ವರ್ಗಾವಣೆ ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಈ ಸಂದರ್ಭದಲ್ಲಿ ನಾನು ಏನನ್ನೂ ಹೇಳಲಾಗದು ಎಂದು ಸಚಿವರು ತಿಳಿಸಿದರು.

ಸಚಿವರ ಮಾತುಗಳನ್ನು ಜಿಲ್ಲಾಧಿಕಾರಿಗಳು ಕೇಳುತ್ತಿಲ್ಲ ಎಂಬ ಆರೋಪಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲ್ಲಿ ಸೋಮಶೇಖರ್ ಹೇಳುತ್ತಿದ್ದಾರೆ ಅಥವಾ ಇನ್ನಾವುದೇ ಸಚಿವರು ಹೇಳುತ್ತಿದ್ದಾರೆಂದರೆ ಅದು ವೈಯುಕ್ತಿಕ ಹೇಳಿಕೆಯಲ್ಲ. ಸರ್ಕಾರದ ಆದೇಶ. ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com