ಪಕ್ಷದಲ್ಲಿ ವ್ಯವಸ್ಥೆಯೇ ಸರಿ ಇಲ್ಲ: ಜೆಡಿಎಸ್ ನಾಯಕರ ವಿರುದ್ಧ ಮಧು ಬಂಗಾರಪ್ಪ ಟೀಕಾಪ್ರಹಾರ

ಜೆಡಿಎಸ್ ಪಕ್ಷ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದೆ. ಜೆಡಿಎಸ್, ನಾಯಕರನ್ನು ಸೃಷ್ಟಿ ಮಾಡುತ್ತಿದೆ, ಆದರೆ ಆ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂದು ಮಾಜಿ ಶಾಸಕ, ಜೆಡಿಎಸ್ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಪಕ್ಷದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕ ಮಧು ಬಂಗಾರಪ್ಪ ಮತ್ತು ಎಚ್ ಡಿ ಕುಮಾರಸ್ವಾಮಿ
ಶಾಸಕ ಮಧು ಬಂಗಾರಪ್ಪ ಮತ್ತು ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್ ಪಕ್ಷ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದೆ. ಜೆಡಿಎಸ್, ನಾಯಕರನ್ನು ಸೃಷ್ಟಿ ಮಾಡುತ್ತಿದೆ, ಆದರೆ ಆ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂದು ಮಾಜಿ ಶಾಸಕ, ಜೆಡಿಎಸ್ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಪಕ್ಷದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಲ್ಲಿ ವ್ಯವಸ್ಥೆ ಸರಿಯಿಲ್ಲ. ಆದರೆ ಪಕ್ಷ ಬಿಡುವಾಗ ಹೇಳಿಯೇ ಹೋಗುತ್ತೇನೆ. ಮಾಜಿ ಸಚಿವ ಎಚ್ ವಿಶ್ವನಾಥ್ ಅವರು ಜೆಡಿಎಸ್ ಪಕ್ಷ ಬಿಡುವಾಗ ಅವರೊಂದಿಗೆ ಇದ್ದೆ. ಅವರೊಂದಿಗೆ ಇದ್ದು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದೆ. ಅವರಿಗೆ ಜೆಡಿಎಸ್ ಪಕ್ಷ ತೊರೆಯುವಂತಹ ಸಂದರ್ಭ ಏನೂ ಬಂದಿತ್ತೋ ಗೊತ್ತಿಲ್ಲ. ಆದರೆ ಮಾಜಿ ಸಚಿವ ಎಚ್ ವಿಶ್ವನಾಥ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಧ್ಯೆ ಒಡಕು ತಂದಿಡುವ ಪ್ರಯತ್ನವನ್ನು ಪಕ್ಷದಲ್ಲಿಯೇ ಕೆಲವರು ಮಾಡಿದ್ದರು ಎಂಬ ಗಂಭೀರ ಆರೋಪ ಮಾಡಿದರು.

ನಾನು ನಿಷ್ಕ್ರಿಯ ಪಕ್ಷದ ನಿಷ್ಕ್ರಿಯ ಕಾರ್ಯಾಧ್ಯಕ್ಷ ಎಂದು ತಮ್ಮನ್ನು ಬಣ್ಣಿಸಿದ ಅವರು, ನಾನಾಗಿಯೆ ಜೆಡಿಎಸ್ ಕಾರ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ. ಬೇಕಾದರೆ ಅವರೇ ನನ್ನ ರಾಜೀನಾಮೆ ಕೇಳಬಹುದು. ಇಲ್ಲ‌ವೇ ನನ್ನನ್ನು ಹುದ್ದೆಯಿಂದ ತೆಗೆಯಬಹುದು ಎಂದು ಮಧು ಬಂಗಾರಪ್ಪ ಪಕ್ಷದ ನಾಯಕರಿಗೆ ಸವಾಲು ಹಾಕಿದರು. ನಾನು ಕಾರ್ಯಾಧ್ಯಕ್ಷನಾಗಿರಲಿ ಅಥವಾ ಸಾಮಾನ್ಯ ಕಾರ್ಯಕರ್ತನೇ ಆಗಿರಲಿ, ನನ್ನೊಂದಿಗೆ ಇರುವ ಬಂಗಾರಪ್ಪ ಅನ್ನುವ ಹಸರೇ ದೊಡ್ಡ ಹುದ್ದೆ ಎಂದು ವ್ಯಾಖ್ಯಾನಿಸಿದ ಮಧು ಬಂಗಾರಪ್ಪ, ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಲ್ಲಿನ ಕೆಲವರು ತಮ್ಮನ್ನು ತಪ್ಪಾಗಿ ನಡೆಸಿಕೊಂಡರು. ಅವರು ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನನ್ನ ಮನಸ್ಸಿಗೆ ನೋವಾಗಿದೆ ಹೀಗಾಗಿಯೇ ಲೋಕಸಭಾ ಚುನಾವಣೆ ಬಳಿಕ ನಾನು ಎಲ್ಲರಿಂದ ದೂರವೇ ಉಳಿದಿದ್ದೆ ಎಂದು ಸ್ಪಷ್ಟನೆ ನೀಡಿದರು.

ರಮೇಶಗೌಡ ಅಂಥವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿರುವುದು ಬೇಸರದ ಸಂಗತಿ. ಅವರಂತಹ ಉಪಯೋಗಕ್ಕೆ ಬಾರದವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಬಾರದಿತ್ತು. ಧರ್ಮೇಗೌಡ, ಫಾರೂಕ್‌ ಅಂಥವರು ಪಕ್ಷ ಬೆಳೆಸಿದವರಲ್ಲ, ಅವರು ಪಕ್ಷ ಬಿಡಲು ತಯಾರಾಗಿದ್ದರು.  ರಮೇಶ್ ಗೌಡ ವಿಧಾನ ಪರಿಷತ್ ಸದಸ್ಯನಾಗಲು ಯೋಗ್ಯನಲ್ಲ.  ಅವರಿಂದ ರಾಜೀನಾಮೆ ಪಡೆದು ಒಳ್ಳೆಯವರಿಗೆ ಕೊಡಲಿ. ಇನ್ನು ಯೋಗ್ಯತೆ ಇಲ್ಲದ ರಮೇಶ್‌ಗೌಡನಿಗೆ ಎಂಎಲ್‌ಸಿ ಸ್ಥಾನ ನೀಡಿರುವುದು ಯಾರ ನಿರ್ಧಾರ ? ಎಂದು ನೇರವಾಗಿಯೇ ಪಕ್ಷದ ಹೈಕಮಾಂಡ್ ವಿರುದ್ಧ ಗುಟುರು ಹಾಕಿದರು.

ವಯಸ್ಸಾಗುತ್ತಿದ್ದಂತೆ ಜವಾಬ್ದಾರಿಗಳು ಹೆಚ್ಚುತ್ತವೆ. ಲೋಕಸಭಾ ಚುನಾವಣೆಯ ಬಳಿಕ ನಾನು ಮಾಧ್ಯಮಗಳಿಂದ ದೂರ ಉಳಿದೆ. ಇದು ಪಕ್ಷದ ಕಾರಣಕ್ಕಾಗಿ ಅಲ್ಲ. ವೈಯಕ್ತಿಕ ಕಾರಣದಿಂದ ದೂರ ಇದ್ದೆ. ಮನಸ್ಸಿಗೆ ನೋವಾಗಿದೆ. ಕಾರ್ಯಕರ್ತರಿಗೂ ನೋವಾಗಿದೆ. ಪಕ್ಷದಲ್ಲಿ ಕಾರ್ಯಕರ್ತರಿಗೆ ಸ್ಪಂದನೆ ಇರದೇ ಇರುವುದು ಬೇಸರದ ಸಂಗತಿ,. ಜೆಡಿಎಸ್ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದೆ ಎಂದು ಮಧು ಹೇಳಿದರು.

ಪಕ್ಷ ಬಿಟ್ಟು ಹೋಗಿ ಏನನ್ನೊ ಸಾಧನೆ ಮಾಡುತ್ತೇನೆ ಎನ್ನುವವರು ಹೋಗಿ ಸಾಧನೆ ಮಾಡಲಿ.  ನಾನು ಎಷ್ಟು ಬಾರಿ ಅವರೊಂದಿಗೆ ಮಾತನಾಡಲಿ ಎಂದು ಕುಮಾರಸ್ವಾಮಿ ಇತ್ತೀಚೆಗೆ ಪಕ್ಷದ  ಬಿಡುವವರ ಬಗ್ಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮಧು ಬಂಗಾರಪ್ಪ ಕುಮಾರಸ್ವಾಮಿ ವಿರುದ್ಧ ಪರೋಕ್ಷ  ವಾಗ್ದಾಳಿ ನಡೆಸಿದ್ದು, ಪಕ್ಷದಿಂದ ಹೊರನಡೆಯುವ ಎಲ್ಲಾ ಸಾಧ್ಯತೆಗಳು ನಿಚ್ಛಳವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com