

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲಿನ ಜಾರಿ ನಿರ್ದೇಶನಾಲಯದ ದಾಳಿ ಕುರಿತು ಬಿಜೆಪಿ ಮಾಡಿದ್ದ ಟ್ವೀಟ್ ವೊಂದು ಕಾಂಗ್ರೆಸ್ ನಾಯಕರು ಕೆರಳುವಂತೆ ಮಾಡಿದೆ.
ಇಡಿ ದಾಳಿ ಕುರಿತು ನಿನ್ನೆಯಷ್ಟೇ ಟ್ವೀಟ್ ಮಾಡಿದ್ದ ರಾಜ್ಯ ಬಿಜೆಪಿಯು, ನೂರಾರು ಕೋಟಿ ಲೂಟಿ ಹೊಡೆದು ಅಕ್ರಮ ಸಂಪತ್ತು ಗಳಿಸಿರುವ ಜಮೀರ್ ಈಗ ಜಾರಿ ನಿರ್ದೇಶನಾಲಯದ ಬಲೆಗೆ ಬಿದ್ದಿರುವುದು ಯಾರಿಗೆ ಲಾಭ ತರಬಹುದೆಂಬುದಕ್ಕೆ ಉತ್ತರ ಲಭಿಸಿದೆ. ಮುಂದಿನ ಚುನಾವಣೆಗಾಗಿ ಸುರಕ್ಷಿತ ಕ್ಷೇತ್ರ ಅರಸುತ್ತಿರುವ ಸಿದ್ದರಾಮಯ್ಯ ಅವರೇ ಇದರ ಸಂಪೂರ್ಣ ಫಲಾನುಭವಿಯಾಗಿದ್ದಾರೆ. ನೆಪ ಮಾತ್ರಕ್ಕೆ ಖಂಡಿಸುತ್ತಿದ್ದಾರೆ.
ಸಿದ್ದರಾಮಯ್ಯ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಕಾಲಿಟ್ಟ ಕ್ಷಣದಲ್ಲೇ, ಪ್ರತಿಪಕ್ಷ ಸ್ಥಾನದಿಂದ ಖರ್ಗೆಯವರನ್ನು ಖಾಲಿ ಮಾಡಿಸಿದರು. ನಂತರ ಸಿಎಂ ರೇಸ್‌ನಲ್ಲಿದ್ದ ದಲಿತ ನಾಯಕನನ್ನು ಸೋಲಿಸಿದರು. ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣು ಹಾಯಿಸಿದ ಕೂಡಲೇ ಜಮೀರ್ ಅಕ್ರಮ ಬೆಳಕಿಗೆ ಬಂದು ಸಂಕಟಕ್ಕೆ ಸಿಲುಕಿಕೊಂಡರು ಎಂದು ಹೇಳಿತ್ತು.
ಈ ಹೇಳಿಕೆ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಮಾಜಿ ಸಭಾಪತಿ ವಿ ಆರ್ ಸುದರ್ಶನ್ ಅವರು ಮಾತನಾಡಿ, ಬಿಜೆಪಿಯ ಟ್ವೀಟ್‌ಗಳು ಸೂಕ್ಷ್ಮವಲ್ಲದ, ಅಮಾನವೀಯವಾದದ್ದಾಗಿದೆ. ಸಿದ್ದರಾಮಯ್ಯರಂತಹ ಸಾಮೂಹಿಕ ನಾಯಕನ ಬಗ್ಗೆ ಈ ರೀತಿ ಕಳಪೆ ಮಟ್ಟದಲ್ಲಿ ಮಾತನಾಡುವುದು ಮತ್ತು ವೈಯಕ್ತಿಕವಾಗಿ ಅವರನ್ನು ನಿಂದಿಸುವುದು ಪಕ್ಷಕ್ಕೆ ಒಳ್ಳೆಯದಲ್ಲ. ಚಾಮರಾಜಪೇಟೆಯಿಂದ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆ ಜಮೀರ್ ಅವರೇ ಹೇಳಿದ್ದಾರೆ. ಹೀಗಾಗಿ ಅಂತಹ ಟೀಕೆಗಳ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಮಾತನಾಡಿ, ಸಿದ್ದರಾಮಯ್ಯ ಸಾಮೂಹಿಕ ನಾಯಕರಾಗಿರುವ ಕಾರಣ ಬಿಜೆಪಿಗೆ ಭಯ ಶುರುವಾಗಿದೆ. ಹೀಗಾಗಿ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸೂಕ್ತ ಸಮಯಕ್ಕೆ ಜನರೇ ಬಿಜೆಪಿಗೆ ಪಾಠ ಕಲಿಸಲಿದ್ದಾರೆಂದು. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಶ್ವನಾಥ್ ಅವರೇ ಸ್ವಪಕ್ಷದವರಾಗಿರುವ ಯಡಿಯೂರಪ್ಪ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಡಿಯೂರಪ್ಪ ಮೇಲೇಕೆ ಇಡಿ, ಐಟಿ ದಾಳಿಗಳಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.