ಖಾತೆ ವಹಿಸಿಕೊಂಡ ಆನಂದ್ ಸಿಂಗ್ ನಾಳೆ ದೆಹಲಿಗೆ ಭೇಟಿ: ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗಲಿದೆಯೇ?

ಕೊನೆಗೂ ನೀಡಿದ ಖಾತೆಯಲ್ಲಿ ಕೆಲಸ ಮಾಡಲು ಮುಂದಾಗಿರುವ ಸಚಿವ ಆನಂದ್ ಸಿಂಗ್, ನಾಳೆ ದೆಹಲಿಗೆ ವರಿಷ್ಠರ ಭೇಟಿಗೆ ತೆರಳಲಿದ್ದಾರೆ.
ಆನಂದ್ ಸಿಂಗ್
ಆನಂದ್ ಸಿಂಗ್
Updated on

ಬೆಂಗಳೂರು: ಕೊನೆಗೂ ನೀಡಿದ ಖಾತೆಯಲ್ಲಿ ಕೆಲಸ ಮಾಡಲು ಮುಂದಾಗಿರುವ ಸಚಿವ ಆನಂದ್ ಸಿಂಗ್, ನಾಳೆ ದೆಹಲಿಗೆ ವರಿಷ್ಠರ ಭೇಟಿಗೆ ತೆರಳಲಿದ್ದಾರೆ. ಪ್ರವಾಸೋದ್ಯಮ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಆನಂದ್ ಸಿಂಗ್ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದು, ಇದಕ್ಕಾಗಿಯೇ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ನೀಡಿರುವ ಪ್ರವಾಸೋದ್ಯಮ ಖಾತೆಯಿಂದ ತೀವ್ರ ಅಸಮಾಧಾನಗೊಂಡು ರಾಜಕೀಯ ಬದುಕಿನ ಕೊನೆಯ ತಿರುವು ಎಂತೆಲ್ಲ ಹೇಳಿ ಖಾತೆ ಹಂಚಿಕೆ ಬಳಿಕ ತೆರೆಮರೆಯಲ್ಲಿಯೇ ಬದಲಾವಣೆಗೆ ಕಸರತ್ತು ನಡೆಸಿದ್ದರು.

ಅಲ್ಲದೇ ರಾಜೀನಾಮೆ ಸುಳಿವು ನೀಡಿ ಸ್ಪೀಕರ್ ಭೇಟಿಗೆ ಸಮಯಾವಾಕಾಶ ಕೇಳಿದ ಹೈಡ್ರಾಮಾವೂ ಈ ಮಧ್ಯೆ ನಡೆಸಿದ್ದರು. ಖಾತೆ ಹಂಚಿಕೆಯಾಗಿ ಸುಮಾರು 20 ದಿನಗಳಾದ ಬಳಿಕ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಿಎಂ ಭೇಟಿ ಬಳಿಕ ಸ್ವಲ್ಪ ಸಮಾಧಾನಗೊಂಡಂತೆ ಕಂಡ ಆನಂದ್‌ ಸಿಂಗ್ ಇಂದು ವಿಕಾಸಸೌಧದಲ್ಲಿ ನಿಗದಿಪಡಿಸಿರುವ ಕಚೇರಿಗೆ ಬಂದು ಕಾರ್ಯಾರಂಭ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಮುಖ್ಯಮಂತ್ರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೊದಲು ಖಾತೆಯನ್ನು ನಿಭಾಯಿಸಿ ಎಂದು ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಕಿವಿಮಾತು ಹೇಳಿದ್ದಾರೆ ಎಂದರು. ಆನಂದ್ ಸಿಂಗ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ನಾನು ಯಾವ ನಾಟಕವನ್ನೂ ಆಡುತ್ತಿಲ್ಲ. ಬೀದಿ ನಾಟಕವನ್ನೂ ಮಾಡುತ್ತಿಲ್ಲ. ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ನನ್ನ ಮನವಿ ಬಗ್ಗೆ ಯಾರಿಗೆ ಹೇಳಬೇಕೋ ಅವರಿಗೆ ಹೇಳಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

ಪಕ್ಷದ ವರಿಷ್ಠರ ಆದೇಶದಂತೆ ನಾನು ಇಂದು ಕೆಲಸಕ್ಕೆ ಬಂದಿದ್ದೇನೆ. ಆದಾಗ್ಯೂ, ಈ ಹಿಂದೆ ಸಲ್ಲಿಸಿದ್ದ ಮನವಿಯನ್ನೇ ಇಂದೂ ಸಲ್ಲಿಸಿರುವೆ. ನನ್ನ ಮನವಿಯನ್ನು ಪರಿಗಣಿಸುವುದಾಗಿ ಸಿಎಂ ಹೇಳಿದ್ದಾರೆ. ವರಿಷ್ಠರ ಗಮನಕ್ಕೆ ತಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಇಂದು ನಾನು ನನ್ನ ಖಾತೆಯನ್ನ ವಹಿಸಿಕೊಳ್ಳುತ್ತೇನೆ. ಇಂದು ಬೆಳಗ್ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಭೇಟಿ ನನ್ನ ಮನವಿಗಳನ್ನು ಅಧ್ಯಕ್ಷರಿಗೆ ತಿಳಿಸಿದ್ದೇನೆ. ಮೊದಲು ಖಾತೆಯನ್ನು ನಿಭಾಯಿಸಿ ಎಂದು ಹೇಳಿರುವುದಾಗಿ ಸಚಿವ ಆನಂದ್ ಸಿಂಗ್ ಹೇಳಿದರು.

ಸಿಎಂ ನಾಳೆ ದೆಹಲಿಗೆ ತೆರಳುತ್ತಿದ್ದು, ಬೊಮ್ಮಾಯಿ ಜೊತೆ ತೆರಳದೇ ಪ್ರತ್ಯೇಕವಾಗಿ ನಾಳೆ ದೆಹಲಿಗೆ ಆನಂದ್ ಸಿಂಗ್ ತೆರಳಲಿದ್ದಾರೆ. ದೆಹಲಿಯಲ್ಲಿ ಪಕ್ಷದ ವರಿಷ್ಠರ ಜೊತೆ ಅಸಮಾಧಾನ ವಿಚಾರವನ್ನು ಚರ್ಚಿಸಲಿದ್ದು, ಅದರ ಬಳಿಕವೇ ಆನಂದ್ ಸಿಂಗ್ ಸಮಸ್ಯೆಗೆ ತಾರ್ಕಿಕ ಅಂತ್ಯವೊಂದು ಸಿಗಲಿದೆ.

ಆನಂದ್‌ ಸಿಂಗ್ ಯಾರಿಗೂ ಬ್ಲಾಕ್ ಮೇಲ್ ಮಾಡಿಲ್ಲ: 

ಸಚಿವ ಆನಂದ್ ಸಿಂಗ್ ಖಾತೆ ಬದಲಾವಣೆಗೆ ಯಾರನ್ನೂ ಬ್ಲಾಕ್ಮೇಲ್ ಮಾಡಿಲ್ಲ ಎಂದು ಇನ್ನೋರ್ವ ಸಚಿವಕಾಂಕ್ಷಿ ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ. ಇಂಧನ ಖಾತೆಗಾಗಿ ಪಟ್ಟುಹಿಡಿದಿರುವ ಆನಂದ್ ಸಿಂಗ್ ರಾಜೀನಾಮೆ ನೀಡುವ ಬ್ಲಾಕ್ ಮೇಲ್  ಮಾಡುತ್ತಿದ್ದಾರೆಂಬ ಸುದ್ದಿಗಾರರ ಆರೋಪಕ್ಕೆ ರಾಜುಗೌಡ ಪ್ರತಿಕ್ರಿಯಿಸಿದರು.

ಆನಂದ್ ಸಿಂಗ್ ಯಾರಿಗೂ ಬ್ಲಾಕ್ ಮೇಲ್ ಮಾಡಿಲ್ಲ. ಈಗ ನೀಡಿರುವ ಖಾತೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸಿಎಂ ನಾಳೆ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತಾರಾದರೂ ಸಿಎಂ ಬೊಮ್ಮಾಯಿ ಜತೆ ಆನಂದ್ ಸಿಂಗ್ ಹೋಗುವುದಿಲ್ಲ ಎಂದರು. ಆನಂದ್ ಸಿಂಗ್‌ಗೆ ಅಸಮಾಧಾನ ಎಲ್ಲಾ ಶಮನ ಆಗಿದೆ. ಇಷ್ಟು ದಿನ ಇಲಾಖೆ ಜವಾಬ್ದಾರಿ ಹೊತ್ತುಕೊಂಡಿಲ್ಲ. ಈಗ ಸಿಎಂ ಹಾಗೂ ರಾಜ್ಯಾಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ ಬಳಿಕ ಖಾತೆ ವಹಿಸಿ ಕೆಲಸವನ್ನು ಆರಂಭಿಸಿದ್ದಾರೆ‌. ಒಂದುವೇಳೆ ಖಾತೆ ಸ್ವೀಕರಿಸಿ ವಿಳಂಬವಾಗಿ ಕೆಲಸ ಮಾಡಿದ್ದರಿಂದ ಇಲಾಖೆಗೆ ನಷ್ಟ ಆಗಿದ್ರೆ ಸರಿದೂಗಿಸುವ ಕೆಲಸ ಮಾಡುತ್ತಾರೆಂದು ರಾಜುಗೌಡ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com