

ಬೆಂಗಳೂರು: ಅತಂತ್ರವಾಗಿರುವ ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿವೆ. ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶುವಕುಮಾರ್ ಅವರು ಶಾಸಕ ಪ್ರಿಯಾಂಕ್ ಖರ್ಗೆಯವರನ್ನು ಭೇಟಿಯಾಗಿದ್ದರೆ, ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಸಚಿವ ಅಶೋಕ್ ಅವರು ಚರ್ಚೆ ನಡೆಸಿದ್ದಾರೆ.
55 ಸದಸ್ಯ ಬಲವಿರುವ ಪಾಲಿಕೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ 27 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಬಿಜೆಪಿ 23 ಸ್ಥಾನಗಳಲ್ಲಿ ಗೆದ್ದಿದೆ. ಬಹುಮತಕ್ಕೆ 28 ಮತಗಳ ಅಗತ್ಯವಿದ್ದು, ಇದೀಗ ಯಾರೇ ಅಧಿಕಾರ ಹಿಡಿಯುವುದಿದ್ದರೂ 4 ಸ್ಥಾನಗಳಿಸಿರುವ ಜೆಡಿಎಸ್ ಬೆಂಬಲ ಪಡೆಯಲೇಬೇಕಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್ ವರಿಷ್ಠರಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ಈಗಾಗಲೇ ಕರೆ ಮಾಡಿ ಬೆಂಬಲ ಕೋರಿದ್ದು, ಇದೀಗ ಕೆಂದಾಯ ಸಚಿವ ಆರ್.ಅಶೋಕ್ ಅವರೂ ಕೂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮೈತ್ರಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಶಾಸಕ ಪ್ರಿಯಾಂಕ್ ಖರ್ಗೆ ಕೂಡ ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸದಸ್ಯದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ.
ಜೆಡಿಎಸ್ ನಾಯಕ ಸಾ.ರಾ. ಮಹೇಶ್ ಆಹ್ವಾನದ ಮೇರೆಗೆ ಕುಮಾರಸ್ವಾಮಿಯವರನ್ನು ಅವರ ಬಿಡದಿ ತೋಟದ ಮನೆಯಲ್ಲಿ ಭೇಟಿ ಮಾಡಿದ ಅಶೋಕ್ ಅವರು, ದೊಡ್ಡಬಳ್ಳಾಪುರ ನಗರಸಭೆ ಮತ್ತು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಬೆಂಬಲ ಕೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅಶೋಕ್ ಅವರು, ದೊಡ್ಡ ಬಳ್ಳಾಪುರದಲ್ಲಿ ಜೆಡಿಎಸ್ ಜತೆ ಮೈತ್ರಿ ಬಹುತೇಕ ಖಚಿತವಾಗಿದ್ದು, ಕಲಬುರಗಿ ವಿಚಾರವಾಗಿ ಸೋಮವಾರ ಸಂಜೆ ದೇವೇಗೌಡ ಅವರೊಂದಿಗೆ ಸಭೆ ನಡೆಸಿದ ಬಳಿಕ ನಿರ್ಣಯವನ್ನು ತಿಳಿಸುವುದಾಗಿ ಹೇಳಿದ್ದಾರೆ ಎಂದರು.
ಈ ನಡುವೆ ಡಿಕೆ.ಶಿವಕುಮಾರ್ ಅವರೂ ಕೂಡ ಸುದ್ದಿಕಾರರೊಂದಿಗೆ ಮಾತನಾಡಿದ್ದು, ಮಲ್ಲಿಕಾರ್ಜುನ ಖರ್ಗೆಯವರು ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕಳೆದ ಬಾರಿಗಿಂತಲೂ ಈ ಬಾರಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ನೀವು ದೇವೇಗೌಡ ಹಾಗೂ ಕುಮಾರಸ್ವಾಮಿಯವರೊಂದಿಗೆ ಮಾತುಕತೆ ನಡೆಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಏನು ಬೇಕಾದಲೂ ಮಾಡುತ್ತೇನೆ. ಮೇಯರ್ ಸ್ಥಾನಕ್ಕಾಗಿ ಈವರೆಗೂ ಯಾರೊಬ್ಬರೂ ಬೇಡಿಕೆ ಇಟ್ಟಿಲ್ಲ. ಉತ್ತಮ ಆಡಳಿತ ನೀಡುವುದಷ್ಟೇ ನಮ್ಮ ಗುರಿಯಾಗಿದೆ ಎಂದಿದ್ದಾರೆ.
ಕಲಬುರಗಿ ಜೆಡಿಎಸ್ ಮುಖಂಡ ನಾಸಿರ್ ಹುಸೇನ್ ಉಸ್ತಾದ್ ಅವರು ಮಾತನಾಡಿ, ನಮ್ಮ ಪಕ್ಷವು ಪಕ್ಷವು ಬಿಜೆಪಿ ಅಥವಾ ಕಾಂಗ್ರೆಸ್‌ನೊಂದಿಗೆ ಐದು ವರ್ಷಗಳ ದೀರ್ಘಾವಧಿಯ ಒಪ್ಪಂದವನ್ನು ಬಯಸುತ್ತಿದೆ. ನಮ್ಮ ಪಕ್ಷವು ಮೊದಲ ಅವಧಿಯನ್ನೂ ಒಳಗೊಂಡಂತೆ ಮೂರು ಅವಧಿಗೆ ಮೇಯರ್ ಸ್ಥಾನವನ್ನು ಬಯಸುತ್ತದೆ ಎಂದು ಹೇಳಿದ್ದಾರೆ.
ವಿಶಾಲ್ ದರ್ಗೆ ಮಾತನಾಡಿ, ಉಪ ಮೇಯರ್ ಸ್ಥಾನ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಗೆ ನೀಡಲು ಪಕ್ಷ ಒಪ್ಪಿಕೊಳ್ಳಬಹುದು. ನಮ್ಮ ಈ ಆಫರ್'ನ್ನು ಜೆಡಿಎಸ್ ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕೌನ್ಸಿಲರ್ ಯಲ್ಲಪ್ಪ ನಾಯಿಕೊಡೆ ಮಾತನಾಡಿ, ನಮ್ಮ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
Advertisement