ಕೊರೋನಾ ನಿರ್ವಹಣೆ: ಬೆಂಗಳೂರು ಶಾಸಕಾಂಗ ಸಭೆಯಲ್ಲಿ ವಿಪಕ್ಷ-ಆಡಳಿತ ಪಕ್ಷ ನಾಯಕರ ನಡುವೆ ತೀವ್ರ ವಾಗ್ವಾದ!

ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ನಾಯಕರು ಸೋಮವಾರ ತೀವ್ರವಾಗಿ ಕಿಡಿಕಾರಿದರು. 
ಬೆಂಗಳೂರಿನಲ್ಲಿ ಸೋಮವಾರ ನಡೆದ ಶಾಸಕಾಂಗ ಸಭೆ
ಬೆಂಗಳೂರಿನಲ್ಲಿ ಸೋಮವಾರ ನಡೆದ ಶಾಸಕಾಂಗ ಸಭೆ

ಬೆಂಗಳೂರು: ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ನಾಯಕರು ಸೋಮವಾರ ತೀವ್ರವಾಗಿ ಕಿಡಿಕಾರಿದರು. 

ಕೊರೋನಾ ಪರಿಸ್ಥಿತಿ ಕುರಿತು ನಿನ್ನೆ ನಗರದಲ್ಲಿ ಶಾಸಕಾಂಗ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಮುಗಿಬಿದ್ದ ಘಟನೆ ನಡೆಯಿತು. 

ಕೊರೋನಾ ಪರಿಸ್ಥಿತಿ ಎದುರಿಸಲು ಸರ್ಕಾರ ಹಾಸಿಗೆ ವ್ಯವಸ್ಥೆ, ಆಕ್ಸಿಜನ್, ಔಷಧಗಳು ಸೇರಿದಂತೆ ಯಾವುದೇ ವ್ಯವಸ್ಥೆ ಮಾಡಿಕೊಂಡಿಲ್ಲ ಹೀಗಾಗಿಯೇ ಜನ ಬೀದಿಗಳಲ್ಲಿ ಯಾಯುತ್ತಿದ್ದಾರೆಂದು ಕಾಂಗ್ರೆಸ್ ಸದಸ್ಯರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. 

ಪ್ರತೀ ದಿನ ನಮಗೆ ದೂರವಾಣಿ ಕರೆಗಳು ಬರುತ್ತಿವೆ. ಆಸ್ಪತ್ರೆಯಲ್ಲಿ ಹಾಸಿಗೆ ದೊರಕಿಸಿಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಶಾಸಕನಾಗಿದ್ದರೂ ನನಗೆ ಒಂದು ಸಿಂಗಲ್ ಬೆಡ್ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನಾಗಬೇಕೆಂದು ಶಿವಾಜಿನಗರ ಶಾಸಕ ರಿಜ್ವಾನ್ ಅವರು ಪ್ರಶ್ನಿಸಿದ್ದಾರೆ. 

ವಿಪಕ್ಷಗಳ ಆರೋಪಗಳಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾದ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತೀವ್ರವಾಗಿ ಕೆಂಡಾಮಂಡಲಗೊಂಡರು. ನಿಮ್ಮಂತಹವರನ್ನು ಸಾಕಷ್ಟು ಜನರನ್ನು ನೋಡಿದ್ದೇವೆ. ಸುಮ್ಮನೆ ಕುಳಿತುಕೊಳ್ಳಿ ಎಂದರು. 

ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕರು ಎಷ್ಟು ಜನರನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದರು. ಬಳಿಕ ಮಾತಿನ ಚಕಮಕಿ ವೈಯಕ್ತಿಕ ವಿಚಾರಗಳಿಗೆ ತಿರುಗಿತು. ಶಾಸಕರು ಹಾಗೂ ಸಚಿವರು ತಾವಿರುವ ಸ್ಥಳವನ್ನೇ ಮರೆದು ಮಾತಿನ ಚಕಮಕಿಗೆ ಇಳಿದ್ದರು. 

ಕೊರೋನಾ ನಿರ್ವಹಿಸುವಲ್ಲಿ ನಿಮ್ಮ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಸೇರ್ಪಡೆಗೊಳ್ಳದೇ ಹೋಗಿದ್ದರೆ, ಇಂದು ರಾಜ್ಯ ಪರಿಸ್ಥಿತಿ ಉತ್ತಮವಾಗಿರುತ್ತಿತ್ತು ಎಂದು ಬಿಜೆಪಿಗೆ ಸೇರ್ಪಡೆಗೊಂಡ ನಾಯಕರ ಗುರಿ ಮಾಡಿ ಕಾಂಗ್ರೆಸ್ ನಾಯಕರು ಕಿಡಿಕಾಡಿದರು. 

ಅಲ್ಲದೆ, ಕೊರೋನಾ ನಿರ್ವಹಣೆ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಕಳೆದ ಒಂದು ವರ್ಷದಿಂದ ಕಾಲಾವಕಾಶವಿದ್ದರೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಪರಿಸ್ಥಿತಿ ಕೈ ಮೀರಿದ ಬಳಿಕ ಸಭೆ ಕರೆದಿದ್ದೀರಿ. ಲಾಕ್ಡೌನ್ ಮಾಡಬೇಡಿ ಮಾಡಿದರೆ ಕುಟುಂಬಕ್ಕೆ ತಲಾ ರೂ.25 ಸಾವಿರ ಪರಿಹಾರ ನೀಡಿ ಎಂದು ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಸಿಎಂ. ಇಬ್ರಾಹಿಂ ಮತ್ತಿತರರು ಇದೇ ವೇಳೆ ಒತ್ತಾಯಿಸಿದರು. 

ಬಳಿಕ ಸರ್ಕಾರದ ಸಾವಿನ ಅಂಕಿಅಂಶಗಳಲ್ಲಿ ಲೋಪಗಳು ಕಂಡು ಬರುತ್ತಿವೆ ಎಂದು ಕಾಂಗ್ರೆಸ್ ನಾಯಕರು ಸರ್ಕಾರವನ್ನು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಸುಧಾಕರ್ ಅವರು, ಅಂಕಿಅಂಶಗಳು ಸರಿಯಾಗಿಲ್ಲ. ಇದನ್ನು ಶೀಘ್ರಗತಿಯಲ್ಲಿ ಸರಿಪಡಿಸಲಾಗುತ್ತದೆ ಒಪ್ಪಿಕೊಂಡರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com