ನೂತನ ಸಚಿವರಿಗೆ ಖಾತೆ ಹಂಚಿಕೆ; ಹೊಸಬರಿಗೆ ಪ್ರಮುಖ ಖಾತೆ, ಭುಗಿಲೆದ್ದ ಭಿನ್ನಮತ

ಶನಿವಾರ ಬೊಮ್ಮಾಯಿ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಮೊದಲ ಬಾರಿಗೆ ಸಂಪುಟಕ್ಕೆ ಸೇರಿದ ನೂತನ ಸಚಿವರಿಗೆ ಪ್ರಮುಖ ಖಾತೆಗಳ ನಿರ್ವಹಣೆ ನೀಡಿರುವುದು ಮತ್ತು ಕೆಲ ಸಚಿವರಿಗೆ ನೀಡಿರುವ ಖಾತೆಗಳ ಕುರಿತು ಹಲವು ಸಚಿವರು ಅಸಮಾಧಾನಗೊಂಡಿದ್ದಾರೆ.
ನೂತನ ಸಚಿವರೊಂದಿಗೆ ಸಿಎಂ ಬೊಮ್ಮಾಯಿ
ನೂತನ ಸಚಿವರೊಂದಿಗೆ ಸಿಎಂ ಬೊಮ್ಮಾಯಿ

ಬೆಂಗಳೂರು: ಶನಿವಾರ ಬೊಮ್ಮಾಯಿ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಮೊದಲ ಬಾರಿಗೆ ಸಂಪುಟಕ್ಕೆ ಸೇರಿದ ನೂತನ ಸಚಿವರಿಗೆ ಪ್ರಮುಖ ಖಾತೆಗಳ ನಿರ್ವಹಣೆ ನೀಡಿರುವುದು ಮತ್ತು ಕೆಲ ಸಚಿವರಿಗೆ ನೀಡಿರುವ ಖಾತೆಗಳ ಕುರಿತು ಹಲವು ಸಚಿವರು ಅಸಮಾಧಾನಗೊಂಡಿದ್ದಾರೆ.

ಬೊಮ್ಮಾಯಿ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿರುವ ಆರಗ ಜ್ಞಾನೇಂದ್ರ ಮತ್ತು ವಿ ಸುನೀಲ್ ಕುಮಾರ್ ಪ್ರಮುಖ ಖಾತೆಗಳ ನಿರ್ವಹಣೆ ಹೊತ್ತಿದ್ದಾರೆ. ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ನೀಡಲಾಗಿದೆ. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು, ಡಿಪಿಎಆರ್, ಗೃಹ ಖಾತೆಯ ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಮತ್ತು ಹಂಚಿಕೆಯಾಗದ ಇತರೆ ಎಲ್ಲ ಖಾತೆಗಳನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ.

ಸಿಎಂ ಬೊಮ್ಮಾಯಿ ಖಾತೆ ಹಂಚಿಕೆ ಪ್ರಕ್ರಿಯೆಯು ಸೈದ್ಧಾಂತಿಕ ಒಳಗಿನವರು (ಮೂಲ ಬಿಜೆಪಿಗರು) ಮತ್ತು ಹೊರಗಿನವರು (ವಲಸಿಗರು), ಪಕ್ಷದ ನಿಷ್ಠಾವಂತರು ಮತ್ತು ಬಿಎಸ್ ಯಡಿಯೂರಪ್ಪ ಬೆಂಬಲಿಗರು, ಹಿರಿಯರು ಮತ್ತು ಹೊಸಬರ ನಡುವೆ ಉತ್ತಮ ಸಮತೋಲನ ಸಾಧಿಸಲು ಪ್ರಯತ್ನಿಸಿದೆಯಾದರೂ ನಿರೀಕ್ಷೆಯಂತೆಯೇ ಖಾತೆ ಹಂಚಿಕೆ ಕೆಲವರಲ್ಲಿನ ಅಸಮಾಧಾನಕ್ಕೆ ಕಾರಣವಾಗಿದೆ.  

ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದು, ಬಿ ಶ್ರೀರಾಮುಲು ಅವರಂತಹ ಹಲವರು ನಾಯಕರು ಒಳಗೊಳಗೇ ಕುದಿಯುತ್ತಿದ್ದು ತಮ್ಮ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. 

ಹಿಂದಿನ ಸಿಎಂ ಬಿಎಸ್‌ವೈ ಮತ್ತು ಪ್ರಸ್ತುತ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಮಂಜೂರು ಮಾಡಲಾದ ಖಾತೆಯಿಂದ ನನಗೆ ಸಂತೋಷವಾಗಿಲ್ಲ. 2-3 ದಿನಗಳಲ್ಲಿ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮುನ್ಸಿಪಲ್ ಕಾರ್ಪೊರೇಶನ್, ಸಾರ್ವಜನಿಕ ವಲಯದ ಕೈಗಾರಿಕೆಗಳು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಖಾತೆಗಳ ನಿರ್ವಹಣೆ ಪಡೆದಿರುವ ಎಂಟಿಬಿ ನಾಗರಾಜ್ ಟ್ವೀಟ್ ಮಾಡಿದ್ದಾರೆ. 

2019 ರಲ್ಲಿ ಜನತಾದಳ ಜಾತ್ಯತೀತ-ಕಾಂಗ್ರೆಸ್ ಮೈತ್ರಿ ಸರ್ಕಾರ ತೊರೆದು 17 ಶಾಸಕರಲ್ಲಿ ಒಬ್ಬರಾಗಿದ್ದ ನಾಗರಾಜ್ ಅವರು ಸಮ್ಮಿಶ್ರ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದರು. ಈ ಬಾರಿಯೂ ಅದೇ ಖಾತೆಯನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು, ಆದರೆ ಹೊಸ ಖಾತೆಯಿಂದ ನಿರಾಶೆಗೊಂಡಿದ್ದಾರೆ. 

ಅಂತೆಯೇ ಮತ್ತೋರ್ವ ರೆಬೆಲ್ ಸಚಿವ ಆನಂದ್ ಸಿಂಗ್ ಕೂಡ ತಮ್ಮ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ದೊಡ್ಡ ಖಾತೆಗಳನ್ನು ನಿರ್ವಹಿಸಲು ನಾನು ಅಸಮರ್ಥನೇ ಎಂದು  ಪ್ರಶ್ನಿಸಿದ್ದಾರೆ. ಅಲ್ಲದೆ ಈ ಕುರಿತು ಸಿಎಂ ಜೊತೆ ಚರ್ಚೆ ನಡೆಸುತ್ತೇನೆ. ನಿರ್ಲಕ್ಷಿಸಿದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

"ನನಗೆ ದೊಡ್ಡ ಖಾತೆಗಳನ್ನು ನೀಡದಿರಲು ಕಾರಣವೇನು? ನಾನು ಭ್ರಷ್ಟನಾ? ನಾನು ಹಗರಣಗಳಲ್ಲಿ ಭಾಗಿಯಾಗಿದ್ದೇನೆಯೇ? ನಾನು ಅಸಮರ್ಥನೇ? ಈ ಖಾತೆಯನ್ನು ನನಗೆ ಏಕೆ ನೀಡಲಾಗಿದೆ? ಎಂದು ಪ್ರಶ್ನಿಸಿದ್ದಾರೆ. ಈ ಆನಂದ್ ಸಿಂಗ್ ಕೂಡ ಮೈತ್ರಿ ಸರ್ಕಾರ ತೊರೆದ 17 ಶಾಸಕರಲ್ಲಿ ಒಬ್ಬರಾಗಿದ್ದರು.

ಇನ್ನು ಸಚಿವರ ಆಯ್ಕೆ ಮತ್ತು ಖಾತೆ ಹಂಚಿಕೆಯಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವವು ಸಂಘ ಪರಿವಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವಂತೆ ತೋರುತ್ತಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com