ಆಫ್ಘಾನ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಬೇಕು; ಸದಾ ಸುದ್ದಿಯಲ್ಲಿರಲು ಸಲ್ಲದ ಟೀಕೆ; ವಿನಯ್ ಜೊತೆ ನಾವಿದ್ದೇವೆ: ಡಿಕೆ ಶಿವಕುಮಾರ್

ಸಂಕಷ್ಟದಲ್ಲಿರುವ ಅಫ್ಘನ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆಫ್ಘನ್ ವಿದ್ಯಾರ್ಥಿಗಳನ್ನು ಭೇಟಿಯಾದ ಡಿಕೆ ಶಿವಕುಮಾರ್
ಆಫ್ಘನ್ ವಿದ್ಯಾರ್ಥಿಗಳನ್ನು ಭೇಟಿಯಾದ ಡಿಕೆ ಶಿವಕುಮಾರ್

ಬೆಂಗಳೂರು: ಸಂಕಷ್ಟದಲ್ಲಿರುವ ಅಫ್ಘನ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಆಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅಲ್ಲಿ ಹಾಲಿ ಚುನಾಯಿತ ಸರ್ಕಾರ ತಾನೇ ತಾನಾಗಿ ಪತನವಾಗಿದ್ದು ಅಲ್ಲಿ ಅತಂತ್ರಸ್ಥಿತಿ ನಿರ್ಮಾಣವಾಗಿದೆ. ತಾಲಿಬಾನ್ ದುರಾಡಳಿತಕ್ಕೆ ಹೆದರಿ ಜನ ದೇಶ ತೊರೆಯುತ್ತಿದ್ದು, ಅಲ್ಲದೆ ವಿದೇಶಗಳಲ್ಲಿರುವ ಆಪ್ಘನ್ ಪ್ರಜೆಗಳ ಭವಿಷ್ಯಕೂಡ ಡೋಲಾಯಮಾನವಾಗಿದೆ.

ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ನೆರವು ಕೋರಿ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬಳಿ ತೆರಳಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡ್ತಿರುವ ಆಫ್ಘನ್ ವಿದ್ಯಾರ್ಥಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ರಾಜ್ಯ ಸರ್ಕಾರದಿಂದ ತಮಗೆ ಸಹಕಾರ ಕೊಡಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್ ಅವರು, 'ಬೆಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಆಫ್ಘಾನಿಸ್ತಾನದ ವಿದ್ಯಾರ್ಥಿಗಳ ನಿಯೋಗ ಭೇಟಿಯಾಗಿ ತಮ್ಮ ದೇಶದಲ್ಲಿನ ಬೆಳವಣಿಗೆಗಳಿಂದ ಅಲ್ಲಿರುವ ತಮ್ಮ ಕುಟುಂಬ ಸದಸ್ಯರು, ಬಂಧುಗಳನ್ನು ಸಂಪರ್ಕಿಸಲು ಆಗದೆ, ಅವರ ಪರಿಸ್ಥಿತಿ ಬಗ್ಗೆ ತಮಗಾಗಿರುವ ಆತಂಕವನ್ನು ನಿವೇದಿಸಿಕೊಂಡರು ಎಂದು ಟ್ವೀಟ್ ಮಾಡಿದ್ದಾರೆ.

ಮೂಲಗಳ ಪ್ರಕಾರ 'ಸದ್ಯ ಆಫ್ಘನ್​​ನಲ್ಲಿ ಭಯದ ವಾತಾವರಣ ಇದೆ. ನಾವು ಅಲ್ಲಿಗೆ ವಾಪಸ್​ ಹೋಗೋದು ಸದ್ಯಕ್ಕೆ ಸಾಧ್ಯವಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರದಿಂದ ನಮಗೆ ಸಹಕಾರ ಕೊಡಿಸಿ ಎಂದು ಡಿಕೆಶಿ ಬಳಿ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು ಎನ್ನಲಾಗಿದೆ. 

ಧೈರ್ಯ ತುಂಬಬೇಕು
ಬೆಂಗಳೂರು ವಿವಿಯ ನಾಲ್ವರು ಎಂಬಿಎ ವಿದ್ಯಾರ್ಥಿಗಳ ಜತೆ ಭೇಟಿ ನಂತರ ಮಾತನಾಡಿದ ಡಿಕೆಶಿ, ಮಾನಸಿಕವಾಗಿ ಕುಗ್ಗಿರುವ ವಿದ್ಯಾರ್ಥಿಗಳಿಗೆ ಮಾನವೀಯತೆಯ ದೃಷ್ಟಿಯಿಂದ ರಕ್ಷಣೆ ಕೊಡಬೇಕಿದೆ ಎಂದರು.

'ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಪ್ರತಿನಿಧಿಗಳು ಬಂದು ನನ್ನ ಭೇಟಿ ಮಾಡಿದ್ದರು. ಅಲ್ಲಿನ ಬೆಳವಣಿಗೆಯಿಂದ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ನಮ್ಮ ರಾಜ್ಯದಲ್ಲಿ ಅವರಿಗೆ ಧೈರ್ಯ ನೀಡಬೇಕು. ಅವರ ದೇಹ ಮಾತ್ರ ಇಲ್ಲಿದ್ದು, ಅವರ ಮನಸ್ಸು ಅಲ್ಲಿರುವ ಪೋಷಕರ ಜತೆ ಇದೆ. ಬೆಂಗಳೂರು ನಗರ ಶಿಕ್ಷಣ ಕ್ಷೇತ್ರವಾಗಿದೆ. ಅನೇಕ ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಅವರಿಗೆ ಧೈರ್ಯ ತುಂಬಬೇಕು. ಧರ್ಮ ಯಾವುದೇ ಆಗಿರಲಿ, ಮಾನವೀಯತೆ ದೃಷ್ಟಿಯಿಂದ ಅವರಿಗೆ ಧೈರ್ಯ ತುಂಬಬೇಕು. ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರನ್ನು ವಾಪಸ್ ಕರೆತರುವುದು ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಈಗ ನಾನು ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಲಿ' ಎಂದು ತಿಳಿಸಿದರು.

ಸದಾ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹುಚ್ಚರು ಕಾಂಗ್ರೆಸ್ ನಾಯಕರ ಬಗ್ಗೆ ಮಾತಾಡುತ್ತಾರೆ
ಅಂತೆಯೇ ಸದಾಶಿವನಗರ ನಿವಾಸದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಜತೆ ಸೋಮವಾರ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪ್ರಮುಖ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಕುತಂತ್ರ ಅನುಸರಿಸುತ್ತಾರೆ. ಸದಾ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹುಚ್ಚರು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿರುತ್ತಾರೆ ಎಂದು ಹೇಳಿದರು.

ಇದೇ ವೇಳೆ, ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ದೇಶದಲ್ಲಿ ಕೋವಿಡ್ ಜತೆಗೆ ನಿರುದ್ಯೋಗ, ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಇನ್ನಿಲ್ಲದ ತೊಂದರೆ ಆಗುತ್ತಿದೆ. ಇದೆಲ್ಲವನ್ನು ಮರೆಸಲು ಈ ರೀತಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಇಂತಹ ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ' ಎಂದು ತಿರುಗೇಟು ನೀಡಿದರು.

'ಪಾಪಾ ಏನು ಮಾಡ್ತೀರಾ ಯತ್ನಾಳ್​ ನ್ಯೂಸ್ ನಲ್ಲಿ ಇರಬೇಕು, ಆ ಹುಚ್ಚ ನ್ಯೂಸ್ ನಲ್ಲಿ ಇರಬೇಕು. ಅದಕ್ಕೆ ಏನೇನೋ ಮಾತಾಡುತ್ತಾನೆ. ಪ್ರಚಾರದಲ್ಲಿ ಇರಬೇಕಲ್ಲ ಅದಕ್ಕೆ ಏನೇನಾದ್ರೂ ಮಾತಾಡುತ್ತಾನೆ ಎಂದು ಕಿಡಿಕಾರಿದರು. ಯತ್ನಾಳ್​ ಸದಾ ಸುದ್ದಿಯಲ್ಲಿರಬೇಕು ಎಂದು ಹೇಳಿಕೆಗಳನ್ನು ನೀಡುತ್ತಾರೆ. ನಿರುದ್ಯೋಗ, ಬೆಲೆ ಏರಿಕೆಯಿಂದ ತೊಂದರೆ ಆಗುತ್ತಿದೆ. ಅದನ್ನು ಮರೆಸಲು, ಜನರ ದಾರಿ ತಪ್ಪಿಸಲು ಈ ರೀತಿ ಮಾತಾಡುತ್ತಾರೆ. ಜನರ ಮೈಂಡ್ ಡೈವರ್ಟ್ ಮಾಡಲು ಹೇಳ್ತಾರೆ.. ಎಂದು ಡಿಕೆ ಶಿವಕುಮಾರ್​ ಆರೋಪಿಸಿದರು.

ವಿನಯ್ ಜೊತೆ ನಾವಿದ್ದೇವೆ
ಇದೇ ವೇಳೆ ಜಿ.ಪ. ಸದಸ್ಯ ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮಾಜಿ ಸಚಿವ ವಿನಯ್​​ ಕುಲಕರ್ಣಿ ಜೈಲಿನಿಂದ ಬಿಡುಗಡೆ ಆದ ಬಳಿಕ ಇಂದು ಬೆಂಗಳೂರಿನ ಡಿಕೆ ಶಿವಕುಮಾರ್​​ ಮನೆಗೆ ಭೇಟಿ ನೀಡಿದರು. ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದರು. ಭೇಟಿ ಬಳಿಕ ಮಾತನಾಡಿದ ಡಿಕೆಶಿ, ವಿನಯ್ ಕುಲಕರ್ಣಿ ಪರ ಬ್ಯಾಟ್​ ಬೀಸಿದರು. ವಿನಯ್ ಕುಲಕರ್ಣಿ ಅವರು ಕಾಂಗ್ರೆಸ್​​ನ ಹಿರಿಯ ನಾಯಕರು. ನಾನು-ಅವರು ಎಲ್ಲಾ ಜೊತೆಗೆ ಮಂತ್ರಿಯಾಗಿ ಕೆಲಸ ಮಾಡಿದ್ದೇವೆ. ಅವರು ಈಗ ಚುನಾವಣೆಯಲ್ಲಿ ಸೋತಿರಬಹುದು. ಈಗ ರಾಜಕೀಯವಾಗಿ ನೋವು ಆಗಿದೆ. ಅವರ ಮೇಲೆ ಇರುವ ಕೇಸ್ ಯಾವ ಹಂತದಲ್ಲಿದೆ ಅನ್ನೋದು ನನಗೆ ಗೊತ್ತಿದೆ. ಅವರ ವಿರುದ್ಧ ಯಾವ ಯಾವ ನಾಯಕರು ಏನ್ ಮಾತಾಡಿದ್ದಾರೆ ಎಂದೂ ಗೊತ್ತಿದೆ ಇದಕ್ಕೆಲ್ಲ ಸೂಕ್ತ ಸಂದರ್ಭದಲ್ಲಿ ಉತ್ತರ ನೀಡುತ್ತೇವೆ ಎಂದು ಹೇಳಿದರು.

ಅಂತೆಯೇ ವಿನಯ್ ವಿರುದ್ಧವಾಗಿ ಚುನಾವಣೆಗೆ ಮೊದಲು ಹಾಗೂ ಚುನಾವಣೆ ನಂತರ ನಾಯಕರು ಮಾಡಿರುವ ಭಾಷಣದ ದಾಖಲೆ ನಿಮ್ಮಗಳ ಹತ್ತಿರ ಇದೆ. ಅವರಿಗೆ ನ್ಯಾಯ ಕೊಡಿಸಬೇಕು ಅಂದರೆ ಈಗ ನೀವು ರಿಪ್ಲೈ ಮಾಡಿ. ಅವರಿಗೆ ಆಗಿರುವ ನೋವನ್ನು ನನ್ನ ಜೊತೆಗೆ ಹಂಚಿಕೊಂಡಿದ್ದಾರೆ. ಅದು ಜೈಲು ಒಳಗೆ , ಹೊರಗೆ ಎಲ್ಲಾ ನೋವು ಹಂಚಿಕೊಂಡಿದ್ದಾರೆ.  ಈಗ ನಾನು ಆ ಕುರಿತು  ಮಾತಾಡಲ್ಲ, ಮುಂದೆ ಪಕ್ಷದಲ್ಲಿ ಕೆಲಸ ಮಾಡ್ಕೊಂಡು ಹೋಗ್ತಾರೆ. ಅವರ ಜೊತೆಗೆ ಕಾಂಗ್ರೆಸ್ ಪಕ್ಷದ ಇರುತ್ತೆ. ಅವರ ಕುಟುಂಬದ ಸದಸ್ಯರು , ಕಾರ್ಯಕರ್ತರ ಎಲ್ಲಾ ಇದ್ದಾರೆ. ನಮ್ಮಗೆ ನಂಬಿಕೆ ಇದೆ ಅವರು ತಪ್ಪು ಮಾಡಿಲ್ಲ, ಕಾನೂನಿನಲ್ಲಿ ಅವರಿಗೆ ನ್ಯಾಯ ಸಿಗಲಿದೆ. ಮುಂದಿನ ದಿನಗಳಲ್ಲಿ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಹೋಗುತ್ತಾರೆ. ಅವರ ಕುಟುಂಬ, ಕಾರ್ಯಕರ್ತರು, ಪಕ್ಷ ಅವರ ಬೆನ್ನಿಗೆ ನಿಲ್ಲಲಿದೆ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಅವರಿಗೆ ಹಾಗೂ ನನಗೆ ಅರಿವಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com