4 ಬಾರಿ ಸಿಎಂ ಆದರೂ ಒಮ್ಮೆಯೂ ಪೂರ್ಣಾವಧಿ ಇಲ್ಲ; ಹೆಸರು ತಿದ್ದುಪಡಿಯೂ 'ಬಿಎಸ್ ವೈ' ಕೈ ಹಿಡಿಯಲಿಲ್ಲ

ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜಿನಾಮೆ ನೀಡಿದ್ದು, ಆ ಮೂಲಕ ಸತತ ನಾಲ್ಕನೇ ಬಾರಿಯೂ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಸಿಎಂ ಯಡಿಯೂರಪ್ಪ (ಸಂಗ್ರಹ ಚಿತ್ರ)
ಸಿಎಂ ಯಡಿಯೂರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜಿನಾಮೆ ನೀಡಿದ್ದು, ಆ ಮೂಲಕ ಸತತ ನಾಲ್ಕನೇ ಬಾರಿಯೂ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸಿದ ಸಂಭ್ರಮವಿತ್ತು. ಸಾಧನಾ ಸಮಾವೇಶದ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಸೋಮವಾರ ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರು  ರಾಜೀನಾಮೆ ಅಂಗೀಕರಿಸಿದ್ದು, ಹೊಸ ಮುಖ್ಯಮಂತ್ರಿ ಆಯ್ಕೆಯಾಗುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.

ಬಿಎಸ್ ಯಡಿಯೂರಪ್ಪ 4 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ನಾಲ್ಕು ಬಾರಿಯೂ ಪೂರ್ಣಾವಧಿ ಪೂರೈಸಿಲ್ಲ. ಈ ನಾಲ್ಕು ಬಾರಿ ಸೇರಿಸಿದರೆ ಅವರ ಅಧಿಕಾರಾವಧಿ 5 ವರ್ಷ ಆಗುತ್ತದೆ ಎಂಬುದು ವಿಶೇಷ.

ಹೆಸರು ತಿದ್ದುಪಡಿಯೂ 'ಬಿಎಸ್ ವೈ' ಕೈ ಹಿಡಿಯಲಿಲ್ಲ
2007ರಲ್ಲಿ ಬಿಎಸ್ ಯಡಿಯೂರಪ್ಪ ಅವರು ಜ್ಯೋತಿಷಿಗಳ ಸಲಹೆ ಮೇರೆಗೆ ತಮ್ಮ ಹೆಸರು (Yeddyurappa) ತಿದ್ದುಪಡಿ ಮಾಡಿಕೊಂಡಿದ್ದರು. ಆದರೆ ಜುಲೈ 26 2019ರಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮತ್ತೆ ಮತ್ತೆ ಜ್ಯೋತಿಷಿಗಳ ಸಲಹೆ ಮೇರೆಗೆ ತಮ್ಮ ಹೆಸರನ್ನು ತಿದ್ದುಪಡಿ  (Yediyurappa) ಮಾಡಿಕೊಂಡರು. ಎರಡೂ ಬಾರಿಯೂ ಬಿಎಸ್ ವೈ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲಿಲ್ಲ. ವಿಧಾನಸಭೆ ಚುನಾವಣೆ ಬಳಿಕ ಸರ್ಕಾರ ರಚನೆ ಮಾಡುವಷ್ಟು ಅಗತ್ಯ ಬಹುಮತ ಪಕ್ಷಕ್ಕೆ ಇಲ್ಲದ ಸಂದರ್ಭದಲ್ಲೇ ಕಸರತ್ತು ನಡೆಸಿ ಮುಖ್ಯಮಂತ್ರಿ ಹುದ್ದೆಗೇರಿದ ಯಡಿಯೂರಪ್ಪ ನಾಲ್ಕು  ಬಾರಿಯೂ ಬಿಕ್ಕಟ್ಟಿನಲ್ಲಿಯೇ ರಾಜೀನಾಮೆ ಕೊಟ್ಟಿದ್ದರು.

ಇದೀಗ ಮತ್ತೆ ಯಡಿಯೂರಪ್ಪ ಅವರ ಸತತ ನಾಲ್ಕನೇ ಬಾರಿಗೆ ಸಿಎಂ ಸ್ಥಾನದಿಂದ ಕೆಳಗಿಳಿಯುವಂತಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com