ಬಿಎಸ್ ಯಡಿಯೂರಪ್ಪ: ನಾಲ್ಕು ಬಾರಿ ಸಿಎಂ, ಆದರೂ ಒಮ್ಮೆಯೂ ಅಧಿಕಾರಾವಧಿ ಪೂರ್ಣಗೊಳಿಸದ 'ರಾಜಾಹುಲಿ'

ಬಿಜೆಪಿ ಪಾಳಯದಲ್ಲಿ ರಾಜಾಹುಲಿ ಎಂದೇ ಖ್ಯಾತರಾಗಿದ್ದ ಬಿಎಸ್ ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರೂ ನಾಲ್ಕು ಬಾರಿಯೂ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಬಿಎಸ್ ಯಡಿಯೂರಪ್ಪ: ನಾಲ್ಕು ಬಾರಿ ಸಿಎಂ, ಆದರೂ ಒಮ್ಮೆಯೂ ಅಧಿಕಾರಾವಧಿ ಪೂರ್ಣಗೊಳಿಸದ 'ರಾಜಾಹುಲಿ'

ಬೆಂಗಳೂರು: ಬಿಜೆಪಿ ಪಾಳಯದಲ್ಲಿ ರಾಜಾಹುಲಿ ಎಂದೇ ಖ್ಯಾತರಾಗಿದ್ದ ಬಿಎಸ್ ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರೂ ನಾಲ್ಕು ಬಾರಿಯೂ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಬಿಎಸ್ ಯಡಿಯೂರಪ್ಪ 4 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ನಾಲ್ಕು ಬಾರಿಯೂ ಪೂರ್ಣಾವಧಿ ಪೂರೈಸಿಲ್ಲ ಎಂಬುದು ಅವರ ಅಭಿಯಾನಿಗಳಿಗೆ ಬೇಸರದ ಸಂಗತಿಯಾಗಿದೆ. ನಾಲ್ಕು ಬಾರಿ ಸೇರಿಸಿದರೆ ಅವರ ಅಧಿಕಾರಾವಧಿ 5 ವರ್ಷ ಆಗುತ್ತದೆ.

ವಿಧಾನಸಭೆ ಚುನಾವಣೆ ಬಳಿಕ ಸರ್ಕಾರ ರಚನೆ ಮಾಡುವಷ್ಟು ಅಗತ್ಯ ಬಹುಮತ ಪಕ್ಷಕ್ಕೆ ಇಲ್ಲದ ಸಂದರ್ಭದಲ್ಲೇ ಕಸರತ್ತು ನಡೆಸಿ ಮುಖ್ಯಮಂತ್ರಿ ಹುದ್ದೆಗೇರಿದ ಯಡಿಯೂರಪ್ಪ ಪಕ್ಷವನ್ನು ಅಧಿಕಾರಕ್ಕೆ ತಂದರಾದರೂ ನಾಲ್ಕು ಬಾರಿಯೂ ಬಿಕ್ಕಟ್ಟಿನಲ್ಲಿಯೇ ರಾಜೀನಾಮೆ ಕೊಟ್ಟಿದ್ದಾರೆ.

2006ರ ಸಮ್ಮಿಶ್ರ ಸರ್ಕಾರ, ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬೆಂಬಲ ಹಿಂಪಡೆದ ಜೆಡಿಎಸ್
2006ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಿತು. 20 ತಿಂಗಳ ಅವಧಿಗೆ ಅಧಿಕಾರ ಹಂಚಿಕೆ ಒಪ್ಪಂದವಾಯಿತು. ಮೊದಲ ಅವಧಿ ಪೂರೈಸಿದ ಎಚ್. ಡಿ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡಲು ಹಿಂದೇಟು ಹಾಕಿದರು. ಆಗ ಯಡಿಯೂರಪ್ಪ ರಾಜ್ಯ  ಪ್ರವಾಸಕ್ಕೆ ಮುಂದಾಗಿದ್ದರು. ಆದರೆ ಅಧಿಕಾರ ಹಸ್ತಾಂತರದ ಭರವಸೆ ಸಿಕ್ಕಿದ್ದರಿಂದ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ 8 ದಿನಗಳ ಬಳಿಕ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಜೆಡಿಎಸ್ ಬೆಂಬಲ ನೀಡದ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2008ರ ಚುನಾವಣೆ: ಕಂಟಕವಾದ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ
2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಮಾತ್ರ ಪಡೆಯಿತು. ಪಕ್ಷೇತರ ಶಾಸಕರನ್ನು ಸೆಳೆದು ಬಿಜೆಪಿ ಸರ್ಕಾರ ರಚನೆಗೊಂಡಿತು. ಯಡಿಯೂರಪ್ಪ 2ನೇ ಬಾರಿಗೆ ಮುಖ್ಯಮಂತ್ರಿಯಾದರು. ಆದರೆ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ಮತ್ತು ಅವರ ಕುಟುಂಬ  ಸದಸ್ಯರ ವಿರುದ್ಧ ಆರೋಪಗಳಿದ್ದವು. ಹೈಕಮಾಂಡ್ ರಾಜೀನಾಮೆ ನೀಡುವಂತೆ ಯಡಿಯೂರಪ್ಪಗೆ ಸೂಚನೆ ನೀಡಿತು. 2011ರ ಜುಲೈ 11ರಂದು ಅವರು ರಾಜೀನಾಮೆ ನೀಡಿದರು. ಆ ಮೂಲಕ ಬಿಎಸ್ ವೈ ಸಿಎಂ ಪಟ್ಟ 3 ವರ್ಷ 66 ದಿನಗಳಿಗೆ ಕೊನೆಗೊಂಡಿತು.

2018ರ ವಿಧಾನಸಭೆ ಚುನಾವಣೆ; ಮತ್ತೆ ವಿಶ್ವಾಸಮತ ಸೋತ ಬಿಎಸ್ ವೈ
2018ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಜಯಗಳಿಸಿತು. ಅತಿ ದೊಡ್ಡ ಪಕ್ಷವಾದ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನ ನೀಡಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದವು.  ಸುಪ್ರೀಂಕೋರ್ಟ್ ಆದೇಶದಂತೆ ವಿಧಾನಸಭೆಯಲ್ಲಿ ಬಹುಮತಯಾಚನೆ ಮಾಡುವಾಗ ಅಗತ್ಯ ಸಂಖ್ಯಾಬಲ ಸಿಗದೇ ಕೇವಲ 6 ದಿನಗಳ ಅಂತರದಲ್ಲಿ ಸರ್ಕಾರ ಪತನಗೊಂಡಿತು. ಯಡಿಯೂರಪ್ಪ 3ನೇ ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2019ರಲ್ಲಿ ಆಪರೇಷನ್ ಕಮಲ ಮೂಲಕ ಮತ್ತೆ ಮುಖ್ಯಮಂತ್ರಿ
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರು ರಾಜೀನಾಮೆ ನೀಡಿದರು. ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಂಡಿತ್ತು. ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದರು. 2021ರ ಜುಲೈ 26ಕ್ಕೆ  ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಸಂಭ್ರಮದಲ್ಲಿದ್ದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com