

ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೋಮವಾರ ದೆಹಲಿಯಲ್ಲಿ ಕರ್ನಾಟಕ ಘಟಕದ ಪಕ್ಷದ ಮುಖಂಡರ ಸಭೆ ಕರೆದಿದ್ದು, ಆಂತರಿಕ ಭಿನ್ನಾಭಿಪ್ರಾಯದಿಂದ ಚುನಾವಣೆ ಗೆಲ್ಲುವ ತಂತ್ರಗಳವರೆಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.
“ಟಿಕೆಟ್ ಹಂಚಿಕೆ ಪಕ್ಷಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಅಭ್ಯರ್ಥಿಗಳನ್ನು ನಿರ್ಧರಿಸುವ ಅಧಿಕಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಿದೆ ಎಂದು ಮೂಲವೊಂದು ತಿಳಿಸಿದೆ.
ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಸೋನಿಯಾ, ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಭೆಯಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್ ಮತ್ತಿತರರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಗಳ ಅಭ್ಯರ್ಥಿ ವಿಚಾರ, ಗುಂಪುಗಾರಿಕೆ ಗೊಂದಲವನ್ನು ಸೃಷ್ಟಿಸಿದ್ದು, ಈ ಗೊಂದಲಗಳ ಕುರಿತು ಸಭೆಯಲ್ಲಿ ಚರ್ಚೆಗಳಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಜನವರಿ 3 ರಿಂದ ಸಿದ್ದರಾಮಯ್ಯ ಅವರು ಯಾತ್ರೆಯೊಂದರನ್ನು ಆರಂಭಿಸಲು ಮುಂದಾಗಿದ್ದು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರು ಉತ್ತರ ಕರ್ನಾಟಕದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದಾರೆಂದು ತಿಳಿದುಬಂದಿದೆ. ಇದರಂತೆ ಕೆಪಿಸಿಸಿ ಮುಖ್ಯಸ್ಥ ಡಿ.ಕೆ.ಶಿವಕುಮಾರ್ ಅವರು ಹಳೆಗದ್ದೆಯಿಂದ ಮತ್ತೊಂದು ಯಾತ್ರೆ ಆರಂಭಿಸಲು ಮುಂದಾಗಿದ್ದಾರೆ.
ಜನವರಿ 8 ರಂದು ಚಿತ್ರದುರ್ಗದಲ್ಲಿ ಎಸ್‌ಸಿ/ಎಸ್‌ಟಿ 'ಐಕ್ಯತಾ ಸಮಾವೇಶ' ನಡೆಯಲಿದ್ದು, ಈ ಸಮಾವೇಶದ ಬಳಿಕವೇ ಯಾತ್ರೆ ಆರಂಭಿಸುವಂತೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.