2023 ವಿಧಾನಸಭೆ ಚುನಾವಣೆ: ಪ್ರಮುಖ ಜಾತಿಗಳಷ್ಟೇ ಅಲ್ಲ, ಸಣ್ಣ-ಸಣ್ಣ ಸಮುದಾಯಗಳ ಮನಗೆಲ್ಲಲು ಬಿಜೆಪಿ ಮುಂದು!

ಇನ್ನು ಕೆಲವೇ ತಿಂಗಳುಗಳಲ್ಲಿ ಎದುರಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಪಕ್ಷ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಈ ಬಾರಿ ಪ್ರಮುಖ ಸಮುದಾಯಗಳಷ್ಟೇ ಅಲ್ಲದೆ, ಸಣ್ಣ ಸಣ್ಣ ಸಮುದಾಯಗಳ ಮನಗೆಲಲ್ಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇನ್ನು ಕೆಲವೇ ತಿಂಗಳುಗಳಲ್ಲಿ ಎದುರಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಪಕ್ಷ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಈ ಬಾರಿ ಪ್ರಮುಖ ಸಮುದಾಯಗಳಷ್ಟೇ ಅಲ್ಲದೆ, ಸಣ್ಣ ಸಣ್ಣ ಸಮುದಾಯಗಳ ಮನಗೆಲಲ್ಲು ಮುಂದಾಗಿದೆ.

ಅರೆ ಅಲೆಮಾರಿ ಹಾಗೂ ಸೂಕ್ಷ್ಮ ಅಲೆಮಾರಿಗಳು ಕೂಡ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂಬುದನ್ನು ಅರಿತ ರಾಜ್ಯ ಬಿಜೆಪಿಯು, ಸಮುದಾಯಗಳ ಸಂಘಟಿಸಲು ನಾನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವರ್ಚಸ್ಸನ್ನೂ ಆಡಳಿತ ಪಕ್ಷ ಬಳಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಚುನಾವಣೆ ಸಿದ್ಧತೆಯಾಗಿ ಬಿಜೆಪಿ, ಆರ್'ಎಸ್ಎಸ್ ಯಾವುದೇ ರಾಜಕೀಯ ಪ್ರಾತಿನಿಧ್ಯವಿಲ್ಲದ ಸುಮಾರು 130 ಸಮುದಾಯಗಳನ್ನು ಸೂಕ್ಷ್ಮವಾಗಿ ಸಂಘಟಿಸುತ್ತಿದೆ ಎಂದು ತಿಳಿದುಬಂದಿದೆ.

ಬಾಲಕೃಷ್ಣ ಸಿದ್ರಾಮ್ ರೆಂಕೆ ನೇತೃತ್ವದ ಡಿನೋಟಿಫೈಡ್, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ರಾಷ್ಟ್ರೀಯ ಆಯೋಗವು ಜೂನ್ 2006 ರಲ್ಲಿ ತನ್ನ ವರದಿಯೊಂದನ್ನು ನೀಡಿತ್ತು. ವರದಿಯಲ್ಲಿ ಈ ಸಮುದಾಯಗಳ ಶೇ.8-9ರಷ್ಟು ಜನಸಂಖ್ಯೆಯಲ್ಲಿ ಮಹಾರಾಷ್ಟ್ರ ನಂತರದ ಸ್ಥಾನ ಕರ್ನಾಟಕ ಪಡೆದುಕೊಂಡಿದೆ ಎಂದು ಹೇಳಿತ್ತು. ಹೀಗಾಗಿ ಈ ಸಮುದಾಯಗಳ ಮನಗೆಲ್ಲಲು ಬಿಜೆಪಿ ಮುಂದಾಗಿದೆ.

ಈ ಸಮುದಾಯದ ಶೇ.3-4 ರಷ್ಟು ಜನರ ಮನ ಗೆದ್ದಿದ್ದೇ ಆದರೆ, ಅದು ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ. ಅದಕ್ಕಾಗಿಯೇ ಕಳೆದ ಒಂದೂವರೆ ವರ್ಷಗಳಿಂದ ಅವರನ್ನು ಗುರುತಿಸುವ ಮತ್ತು ಬಿಜೆಪಿಗೆ ಸಂಘಟಿಸುವ ಕಾರ್ಯವನ್ನು ಆರ್‌ಎಸ್‌ಎಸ್ ಕಾರ್ಯಾಧ್ಯಕ್ಷ ವಾದಿರಾಜ್ ಸಮರಸ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖ ಜಾತಿಗಳ ಮತಗಳನ್ನು ಸೆಳೆಯಲು ಸಿದ್ಧತೆ ನಡೆಸುತ್ತಿದ್ದರೆ, ಬಿಜೆಪಿಯು ವೀರಶೈವ-ಲಿಂಗಾಯತರನ್ನು ಆಧಾರವಾಗಿ ಇಟ್ಟುಕೊಂಡು ಇದರ ಹೊರತಾಗಿಯೂ ಸಣ್ಣ ಸಣ್ಣ ಸಮುದಾಯಗಳ ಮನಗೆಲ್ಲಲು ಮುಂದಾಗಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಇತ್ತೀಚೆಗಷ್ಟೇ ಎಸ್ ಸಿ/ಎಸ್ ಟಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಂದಾಗಿದ್ದರು.

ಆದರೆ, ಸರ್ಕಾರ ಸಮುದಾಯಗಳ ಗುರುತಿಸಲು ಆಯೋಗವನ್ನು ಸ್ಥಾಪಿಸದ ಹೊರತು ಸರ್ಕಾರದ ಯಾವುದೇ ಪ್ರಯೋಜನಗಳು ಈ ಸಮುದಾಯಕ್ಕೆ ತಲುಪುವುದಿಲ್ಲ ಎಂದು ಕಾಂಗ್ರೆಸ್ ಸಾಮಾಜಿಕ ನ್ಯಾಯ ವಿಭಾಗದ ಮುಖ್ಯಸ್ಥರಾಗಿರುವ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ ಸಿಎಸ್ ದ್ವಾರಕಾನಾಥ್ ಹೇಳಿದ್ದಾರೆ.

ದ್ವಾರಕಾನಾಥ್ ಅವರು ಪಕ್ಷಕ್ಕಾಗಿ ಅತ್ಯಂತ ಹಿಂದುಳಿದ ವರ್ಗಗಳನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದು, ಚುನಾವಣೆಯಲ್ಲಿ ಹಿಂದುಳಿದ ಸಮುದಾಯಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ ಎಂದು ಒತ್ತಿ ಹೇಳಿದ್ದಾರೆ.

ರಾಜ್ಯದಲ್ಲಿ ಎಸ್‌ಸಿ ವರ್ಗದಲ್ಲಿ ಡೊಂಬಿಸದ, ಕೊರಮ, ಕೊರಚ, ಇರುಳಿಗ, ಬುಡ್ಗ ಜಂಗಮ ಸೇರಿದಂತೆ 45 ಅರೆ ಅಲೆಮಾರಿ ಸಮುದಾಯಗಳಿವೆ. ಅದೇ ರೀತಿ, ಎಸ್ಟಿಗಳು ಮತ್ತು ಒಬಿಸಿಗಳು 50 ಕ್ಕೂ ಹೆಚ್ಚು ಸಮುದಾಯಗಳನ್ನು ಹೊಂದಿವೆ. ಮುಸ್ಲಿಮರಲ್ಲಿಯೂ ಸಹ ರಾಜಕೀಯ ಪ್ರಾತಿನಿಧ್ಯವಿಲ್ಲದ ಪಿಂಜಾರರು ಮತ್ತು ಇತರರು ಇದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com