ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣಗೊಳಿಸಿದ ಒಂದು ದಿನದ ನಂತರ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಗಳು ಮುಂದುವರೆದಿವೆ.
108 ಅಡಿ ಎತ್ತರದ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರನ್ನು ಆಹ್ವಾನಿಸದ ಬಿಜೆಪಿ ವಿರುದ್ಧ ಜೆಡಿಎಸ್ ನಾಯಕರು ವಾಗ್ದಾಳಿ ನಡೆಸಿದೆ. ಆದರೆ, ಬಿಜೆಪಿ ತನ್ನ ಸಮರ್ಥನ್ನು ಸಮರ್ಥಿಸಿಕೊಂಡಿದ್ದು, ಸಿಎಂ ಬೊಮ್ಮಾಯಿ ಅವರು ಆಹ್ವಾನ ನೀಡಿದ್ದರು ಎಂದು ಹೇಳಿದೆ.
ಶುಕ್ರವಾರ ಮಧ್ಯಾಹ್ನ ಕಾರ್ಯಕ್ರಮಕ್ಕಾಗಿ ಗುರುವಾರ ರಾತ್ರಿ 9 ಗಂಟೆಗೆ ಸಿಎಂ ಬೊಮ್ಮಾಯಿ ಅವರು ದೇವೇಗೌಡ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಮಧ್ಯರಾತ್ರಿ 12.30ಕ್ಕೆ ಪತ್ರವನ್ನು ಕಳುಹಿಸಲಾಗಿದೆ ಎಂದು ಜೆಡಿಎಸ್ ಹೇಳಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸರ್ಕಾರ ಆದೇಶ ನೀಡಿದ್ದರೆ ವಿಮಾನ ನಿಲ್ದಾಣ ನಿರ್ವಾಹಕರು ಪ್ರತಿಮೆ ನಿರ್ಮಿಸುತ್ತಿದ್ದರು. ಆದರೆ, ಸರ್ಕಾರವೇ ಪ್ರತಿಮೆ ನಿರ್ಮಿಸಲು ಮುಂದಾಗಿದೆ, ಬಹುಶಃ ಕಮಿಷನ್ ಬಯಸಿದ್ದರೇನೋ ಅಥವಾ ಬೇರೆ ಕಾರಣಕ್ಕಾಗಿ ಇಂತಹ ನಿರ್ಧಾರ ಕೈಗೊಂಡಿದೆ. ಬಿಜೆಪಿ ಎಲ್ಲದರಲ್ಲೂ ರಾಜಕೀಯ ಲಾಭ ನೋಡುತ್ತಿದೆ ಎಂದಿದ್ದಾರೆ.
ಈ ನಡುವೆ ಪ್ರತಿಮೆ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಬಿಜೆಪಿ ತಿರುಗೇಟು ನೀಡಿದೆ.
ದೇವೇಗೌಡರಿಗೆ ಗೌರವಯುತವಾಗಿ ಆಹ್ವಾನ ನೀಡಿಲ್ಲ ಎಂದ ಜೆಡಿಎಸ್ ಟೀಕೆಗೆ ಪ್ರತಿಕ್ರಿಯೆ ನೀಡಿ, ಒಕ್ಕಲಿಗ ಸಮುದಾಯದ ಬೆಂಬಲ ಕಳೆದುಕೊಂಡಿದ್ದರಿಂದ ವಿಚಲಿತರಾಗಿರುವ ಪ್ರಾದೇಶಿಕ ಪಕ್ಷ ಸುಳ್ಳು ಪ್ರಚಾರಕ್ಕೆ ಕೈಹಾಕಿದೆ ಎಂದು ಹೇಳಿದೆ.
ಸಿಎಂ ದೇವೇಗೌಡರಿಗೆ ಪತ್ರ ಬರೆದಿದ್ದು, ದೂರವಾಣಿ ಮೂಲಕ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಟ್ವೀಟ್ ಮಾಡಿದೆ.
ಕಾರ್ಯಕ್ರಮಕ್ಕೆ ಆಹ್ವಾನಿತರೆಲ್ಲರ ಹೆಸರಿಗೆ ಪ್ರಧಾನಮಂತ್ರಿಗಳ ಕಚೇರಿ ಒಪ್ಪಿಗೆ ನೀಡಿದ ಬಳಿಕ ಬೊಮ್ಮಾಯಿ ಅವರು ಗುರುವಾರ ಸಂಜೆ ದೇವೇಗೌಡ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಹ್ವಾನ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
Advertisement