'ಯಾರೊಬ್ಬರ ಹೇಳಿಕೆಯಿಂದ ಕಾಂಗ್ರೆಸ್ ನಲ್ಲಿ ಸಿಎಂ ಆಗಲ್ಲ'; ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್

ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ವಿಚಾರವಾಗಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಡುವಿನ ವಾಕ್ಸಮರ ತಾರಕಕ್ಕೇರಿರುವಂತೆಯೇ ವಿವಾದಕ್ಕೆ ಇತಿಶ್ರೀ ಹಾಡುವ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿದೆ.
ಜಮೀರ್ vs ಡಿಕೆ ಶಿವಕುಮಾರ್
ಜಮೀರ್ vs ಡಿಕೆ ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ವಿಚಾರವಾಗಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಡುವಿನ ವಾಕ್ಸಮರ ತಾರಕಕ್ಕೇರಿರುವಂತೆಯೇ ವಿವಾದಕ್ಕೆ ಇತಿಶ್ರೀ ಹಾಡುವ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿದೆ.

ಮುಂದಿನ ಮುಖ್ಯಮಂತ್ರಿ ಯಾರೆಂಬ ಬಗ್ಗೆ ಕಾಂಗ್ರೆಸ್ನೊಳಗೆ ಜಟಾಪಟಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರಾ? ಅಥವಾ ಡಿ ಕೆ ಶಿವಕುಮಾರ್? ಅನ್ನೋ ಬಗ್ಗೆ ಕಾಂಗ್ರೆಸ್ನ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಂದೆಡೆ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಜಮೀರ್ ಅಹ್ಮದ್ ಖಾನ್ ಹೇಳುತ್ತಿದ್ದರೆ.. ಮತ್ತೊಂದೆಡೆ ತಾವೇ ಮುಂದಿನ ಸಿಎಂ ಅಭ್ಯರ್ಥಿ ಎನ್ನುವ ಧಾಟಿಯಲ್ಲಿ ಡಿಕೆ ಶಿವಕುಮಾರ್ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್ ಒಳ ಜಗಳವನ್ನು ಜಗಜ್ಜಾಹಿರು ಮಾಡುತ್ತಿದ್ದು, ಪಕ್ಷಕ್ಕೆ ತೀವ್ರ ಇರುಸು-ಮುರುಸು ಉಂಟು ಮಾಡುತ್ತಿದೆ.

ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷಹದ ಮುಖಂಡರು ವಿವಾದವನ್ನು ಅಂತ್ಯಗೊಳಿಸಲು ಮುಂದಾಗಿದ್ದು, ಈ ಬೆಳವಣಿಗೆಗಳ ಮಧ್ಯೆ ಯಾರೊಬ್ಬರ ಹೇಳಿಕೆಯಿಂದ ಕಾಂಗ್ರೆಸ್ ನಲ್ಲಿ ಸಿಎಂ ಆಗಲ್ಲ ಎಂದು ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ನಮ್ಮ ನಾಯಕರ ಹೇಳಿಕೆಯನ್ನು ನಾವು ಪರಿಶಿಲಿಸುತ್ತೇವೆ. ಶಿಸ್ತು ಉಲ್ಲಂಘಿಸಿದ್ದರೆ ನಾವು ನೋಟಿಸ್ ಕೊಡ್ತಿವಿ. ಇದು ಒಂದು ಕಾನೂನಾತ್ಮಕ ಪ್ರೋಸೆಸ್. ಕೆಲವೊಮ್ಮೆ ಕಾರ್ಯಕರ್ತರು ನಮಗೆ ಪತ್ರ ಬರಿತಾರೆ. ಕೆಲವೊಮ್ಮೆ ನಾವೇ ಸ್ವಯಂ ಪ್ರೇರಣೆಯಿಂದ ವಿಚಾರಿಸ್ತಿವಿ ಎಂದರು.

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬ ಜಮೀರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಹೇಳಿದ್ದಾರೆ. ಅದನ್ನ‌ ನಾವು ಪರಿಶಿಲಿಸಿದ್ದೇವೆ. ಈ ಹಿಂದೆಯೂ ಜಮೀರ್ ಗೆ ಎಚ್ಚರಿಕೆ ಮಾಡಿದ್ವಿ. ಈ ರೀತಿ ಮಾಡಬಾರದು ಅಂತಾ ಸಲಹೆ ನೀಡಿದ್ವಿ. ಈಗ ಮತ್ತೆ ಕರೆದು ಮಾತನಾಡ್ತಿವಿ. ಯಾರೇ ಆಗಲಿ.. ಅದು ಶಾಸಕರೇ ಆಗಲಿ ಈ ರೀತಿ ವಿಚಾರ ವ್ಯಕ್ತಪಡಿಸಬಾರದು. ಯಾರೋ ಒಬ್ಬರ ಹೇಳಿಕೆಯಿಂದ ಯಾರು ಸಿಎಂ ಆಗೋದಿಲ್ಲ. ಹೇಳುವವರಿಗೂ ಒಂದು ಬೆಲೆ ಆಗಬೇಕಲ್ಲಾ? ಅದು ಅವರ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಹೈಕಮಾಂಡ್ ಒಂದೇ ಅತ್ಯಂತ ಪ್ರಭಾವಿ. ಚುನಾವಣೆ ಬಳಿಕ ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ರೆಹಮಾನ್ ಖಾನ್ ಹೇಳಿದರು.

'ಮೂರ್ನಾಲ್ಕು ತಲೆಮಾರಿಗಾಗುವಷ್ಟು ಹಣ': ರಮೇಶ್ ಕುಮಾರ್ ಅವರದ್ದು ಭಾವನಾತ್ಮಕ ಹೇಳಿಕೆ
ಇದೇ ವೇಳೆ ಗಾಂಧಿ ಕುಟುಂಬದ ಹೆಸರು ಹೇಳಿಕೊಂಡು ಮೂರ್ನಾಲ್ಕು ತಲೆಮಾರಿಗಾಗುವಷ್ಟು ಹಣ ಮಾಡಿಕೊಂಡಿದ್ದಾರೆಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಭಾವನಾತ್ಮಕವಾಗಿ ಹೇಳಿದ್ದಾರೆ. ಅದರಲ್ಲಿ‌ ಯಾವ ತಪ್ಪು ಇಲ್ಲ. ಸೋನಿಯಾ ಅವಕಾಶ ನೀಡಿದ್ದಕ್ಕೆ ನಾವು ದೊಡ್ಡವರಾಗಿದ್ದೇವೆ ಅಂತಾ ಹೇಳಿದ್ದಾರೆ ಹೊರತು ಭ್ರಷ್ಟಾಚಾರದ ವಿಷಯವಾಗಿ ಹೇಳಿಲ್ಲ ಎಂದು ಸಮರ್ಥಿಸಿಕೊಂಡರು.

ಶಿಸ್ತು ಸಮಿತಿ ಒಂದು ಕಾನೂನಾತ್ಮಕವಾದ ಪಕ್ಷದ ಸಮಿತಿ. ನಾವು ಕೊಡುವ ಎಚ್ಚರಿಕೆ ಸಹ ಒಂದು ಶಿಕ್ಷೆಯೇ. ಒಂದೊಂದು ರೀತಿಯಲ್ಲಿ ನಾವು ಶಿಕ್ಷೆ ನೀಡಬೇಕಾಗುತ್ತೆ. ನಮ್ಮ ಬಳಿ ಬಂದ ಪ್ರತಿ ದೂರಿಗೂ ನಾವು ಕ್ರಮ ಕೈಗೊಂಡಿದ್ದಿವಿ. ನಾವು ಕೆಲವರಿಗೆ ಎಚ್ಚರಿಕೆ ನೀಡಿದ್ದಿವಿ. ಮತ್ತೆ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ತಿವಿ. ಕಾಂಗ್ರೆಸ್ ದೇಶಕ್ಕೆ ದುಡಿಯುವ ಪಕ್ಷ. ಅಧಿಕಾರಕ್ಕೆ ಹುಟ್ಟಿರುವ ಪಕ್ಷ ಅಲ್ಲ. ಯಾರೇ ಆಗಲಿ ಶಿಸ್ತಿನ ಚೌಕಟ್ಟಿನಲ್ಲಿರಬೇಕು. ನಾವು ಯಾವ ರೀತಿ ವರ್ತಿಸುತ್ತೇವೆ ಅನ್ನೋದನ್ನ ಜನ ನೋಡ್ತಾರೆ. ನಮ್ಮಿಂದಾನೇ ಅಧಿಕಾರಕ್ಕೆ ಬರ್ತಿವಿ ಅಂದರೆ ಅದು ಸರಿ ಅಲ್ಲ. ಪ್ರಜಾಪ್ರಭುತ್ವದಲ್ಲಿ ಪಕ್ಷ ಮುಖ್ಯ.. ವ್ಯಕ್ತಿ ಅಲ್ಲ. ವ್ಯಕ್ತಿ ಮುಖ್ಯ ಆಗಬಹುದು ಆದರೆ ಅದು ಎರಡನೇ ಪ್ರಾಶಸ್ತ್ಯ. ಅಧ್ಯಕ್ಷರು, ನಾಯಕರಿಗೆ ನಾವು ಬೆಲೆ ಕೊಡಬೇಕು. ಇದು ಕಾಂಗ್ರೆಸ್ ಹಿರಿಯನಾಗಿ ನಾನು ಹೇಳುವುದಿಷ್ಟೇ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com