

ಬೆಂಗಳೂರು: ಎರಡು ಕಡೆ ವರಿಷ್ಠರು ಟಿಕೆಟ್ ಕೊಡುತ್ತಾರೆ ಎಂದು ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ವಿಧಿ ನಿಯಮ, ವರಿಷ್ಠರ ತೀರ್ಮಾನ ಎಂದು ಸಚಿವ ವಿ. ಸೋಮಣ್ಣ ಇಂದು ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಿಂದರಾಜನಗರ ನನ್ನ ಜನ್ಮ ಭೂಮಿ. ವರುಣಾ, ಚಾಮರಾಜನಗರ ನನ್ನ ಕರ್ಮ ಭೂಮಿಯಾಗಿದೆ. ಭಗವಂತನ ಇಚ್ಛೆ ಹೇಗಿದಿಯೊ ನೋಡೋಣ. ನಾಳೆಯಿಂದ ವರುಣಾ, ಚಾಮರಾಜನಗರದಲ್ಲಿ ಪ್ರಚಾರ ಆರಂಭಿಸುತ್ತೇನೆ ಎಂದು ಹೇಳಿದರು.
ಗುಬ್ಬಿ, ಗೋವಿಂದರಾಜನಗರ ಟಿಕೆಟ್ ಮಗನಿಗೆ ಕೇಳಿದ್ದೇನೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆಗೂ ಮಾತನಾಡಿದ್ದೇನೆ. ಮಗನಿಗೆ ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್‍ಗೆ ಬಿಟ್ಟದ್ದು, ಬೆಂಬಲಿಗರು ಸಂಯಮದಿಂದ ಇರಬೇಕು ಎಂದರು.
ಗೋವಿಂದರಾಜನಗರ ಕ್ಷೇತ್ರ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸೋಮಣ್ಣನ ಮನೆ ಮುಂದೆ ನೂರಾರು ಕಾರ್ಯಕರ್ತರು ಜಮಾಯಿಸಿದರು. ಸೋಮಣ್ಣ ಮಗ ಡಾ. ಅರುಣ್ ಸೋಮಣ್ಣರಿಗೆ ಗೋವಿಂದರಾಜನಗರದಿಂದಲೇ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದರು. ಬೇರೆವರಿಗೆ ಟಿಕೆಟ್ ನೀಡಿದ್ರೆ ನಮ್ಮ ಬೆಂಬಲಿಗರಿಗೆ ಕೆಲಸ ಮಾಡಲ್ಲ ಎಂದು ಆಕ್ರೋಶ ಹೊರಹಾಕಿದರು.
ಕಳೆದ 40 ವರ್ಷಗಳಿಂದ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಗರಪಾಲಿಕೆ ಸದಸ್ಯ, ಶಾಸಕ ಮತ್ತು ಸಚಿವನಾಗಿ ಕೆಲಸ ಮಾಡಿದ್ದೇನೆ. ಇಂತಹ ಸಂದರ್ಭ ಬರುತ್ತದೆ ಎಂದು ಕನಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ. ಯಾರೂ ಕೂಡ ಧೃತಿಗೆಡಬೇಕಿಲ್ಲ. ನಿರೀಕ್ಷೆ ಮಾಡಿರಲಿಲ್ಲ, ಎಲ್ಲವೂ ವಿಧಿ ನಿಯಮ. ಭಗವಂತ ಯಾರಿಗೆ ಏನು ಕೊಡಬೇಕು ಅದನ್ನು ಕೊಡುತ್ತಿದ್ದಾನೆ ಎಂದು ಹೇಳಿದರು.
ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧವೇ ಸೋಮಣ್ಣ ಕಣಕ್ಕೆ ಇಳಿಯುತ್ತಿರುವ ಕಾರಣ ಚಾಮರಾಜನಗರದಲ್ಲಿ ಸೋಮಣ್ಣ ಅವರನ್ನು ಕಟ್ಟಿ ಹಾಕಲು ಬಂಡಾಯ ಬಿಜೆಪಿ ನಾಯಕರನ್ನು ನಿಲ್ಲಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ.