ಕೆಆರ್ ಪುರ ಕ್ಷೇತ್ರ: ಐಟಿ ಕಾರಿಡಾರ್ ನ ಮೂಲಭೂತ ಸೌಕರ್ಯ ಕೊರತೆಯೇ ಬೈರತಿ ಬಸವರಾಜ್ ಗೆಲುವಿಗೆ ಸಮಸ್ಯೆ?

ಕೆಆರ್ ಪುರವು ಬೆಂಗಳೂರಿನ ಪ್ರಮುಖ ಟೆಕ್ ಕಾರಿಡಾರ್‌ನ ಭಾಗವಾಗಿದ್ದು, ಹಲವಾರು ಐಟಿ ಕಂಪನಿಗಳನ್ನು ಹೊಂದಿದೆ. ಈ ಪ್ರದೇಶವು ಹಳೆಯ ಬೆಂಗಳೂರು ನಗರ ಮುನ್ಸಿಪಲ್ ಕಾರ್ಪೊರೇಶನ್‌ನ ಭಾಗವಾಗಿದ್ದು, ಅಭಿವೃದ್ಧಿ ಕಾರ್ಯಗಳು, ಟ್ರಾಫಿಕ್ ಅವ್ಯವಸ್ಥೆ, ಕೆಲವು ಕಡೆಗಳಲ್ಲಿ ಹದಗೆಟ್ಟ ರಸ್ತೆಗಳೇ ಈ ಕ್ಷೇತ್ರದ ಅಭ್ಯರ್ಥಿಗಳಿಗೆ ಸವಾಲಾಗಿದೆ.
ಬೈರತಿ ಬಸವರಾಜು ಮತ್ತು ಕೆಆರ್ ಪುರ ಕ್ಷೇತ್ರ
ಬೈರತಿ ಬಸವರಾಜು ಮತ್ತು ಕೆಆರ್ ಪುರ ಕ್ಷೇತ್ರ

ಬೆಂಗಳೂರು: ಕೆಆರ್ ಪುರವು ಬೆಂಗಳೂರಿನ ಪ್ರಮುಖ ಟೆಕ್ ಕಾರಿಡಾರ್‌ನ ಭಾಗವಾಗಿದ್ದು, ಹಲವಾರು ಐಟಿ ಕಂಪನಿಗಳನ್ನು ಹೊಂದಿದೆ. ಈ ಪ್ರದೇಶವು ಹಳೆಯ ಬೆಂಗಳೂರು ನಗರ ಮುನ್ಸಿಪಲ್ ಕಾರ್ಪೊರೇಶನ್‌ನ ಭಾಗವಾಗಿದ್ದು, ಅಭಿವೃದ್ಧಿ ಕಾರ್ಯಗಳು, ಟ್ರಾಫಿಕ್ ಅವ್ಯವಸ್ಥೆ, ಕೆಲವು ಕಡೆಗಳಲ್ಲಿ ಹದಗೆಟ್ಟ ರಸ್ತೆಗಳೇ ಈ ಕ್ಷೇತ್ರದ ಅಭ್ಯರ್ಥಿಗಳಿಗೆ ಸವಾಲಾಗಿದೆ.

ನಗರಾಭಿವೃದ್ಧಿ ಸಚಿವರೂ ಆಗಿರುವ ಶಾಸಕ ಬೈರತಿ ಬಸವರಾಜ್ ಅವರು ತಮ್ಮ ಜನಪ್ರಿಯತೆಯ ಮೇಲೆ ಹಣಾಹಣಿ ನಡೆಸುತ್ತಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಇನ್ನೂ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಬೈರತಿ ಬಸವರಾಜ ಪ್ರತಿನಿಧಿಸುವ ಕೆ.ಆರ್.ಪುರ ಕ್ಷೇತ್ರದ ಪ್ರಮುಖ ಪ್ರದೇಶಗಳು ಅಭಿವೃದ್ಧಿಯ ಮಿಂಚು ಕಂಡಿದ್ದರೆ, 15 ವರ್ಷಗಳ ಹಿಂದೆ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳಿಗಿನ್ನೂ ಪೂರ್ಣಪ್ರಮಾಣದ ಅದೃಷ್ಟ ಒಲಿದಿಲ್ಲ. 2008ರಲ್ಲಿ ಹೊಸದಾಗಿ ಸೃಷ್ಟಿಯಾದ ಕ್ಷೇತ್ರದ ಪೈಕಿ ಒಂದಾದ, ಇಲ್ಲಿ ಮೊದಲ ಬಾರಿಗೆ ಬಿಜೆಪಿಯ ನಂದೀಶ್ ರೆಡ್ಡಿ ಗೆದ್ದಿದ್ದರು. ರೆಡ್ಡಿ ವಿರುದ್ಧ ಸತತ ಹೋರಾಟ ನಡೆಸುವ ಜತೆಗೆ, ಮತಗಳ ಮೇಲೆ ಕಣ್ಣಿಟ್ಟ ’ದಾನ’, ಕಾಂಗ್ರೆಸ್ ಅಲೆ, ಬಿಜೆಪಿ ವಿಭಜನೆಯಾಗಿದ್ದರ ಲಾಭಪಡೆದ ಬೈರತಿ 2013ರಲ್ಲಿ ನಿರಾಯಾಸವಾಗಿ ಗೆದ್ದು ಬಂದರು. ಆ ಬಳಿಕ, ತಮ್ಮ ದಾನ, ಭೇದ, ಕೊಡುಗೆಗಳ ಕಾರಣಕ್ಕೆ ಕ್ಷೇತ್ರವನ್ನು ಭದ್ರಮುಷ್ಟಿಯಡಿ ಹಿಡಿದುಕೊಂಡ ಅವರು, ಎದುರಾಳಿಗಳೇ ಇಲ್ಲದಂತೆ ನೋಡಿಕೊಂಡರು.

2018ರಲ್ಲಿ ಮರು ಆಯ್ಕೆಯಾದ ಅವರು, 2019ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ, ಉಪಚುನಾವಣೆಯಲ್ಲಿ ಮತ್ತೆ ಗೆಲುವುಪಡೆದರು. ಕ್ಷೇತ್ರದಲ್ಲಿ ಬಲಿಷ್ಠ ಎದುರಾಳಿಯಾಗಬಹುದಾಗಿದ್ದ ‍ಪೂರ್ಣಿಮಾ ಅವರು 2018ರಲ್ಲಿ ಬಿಜೆಪಿ ಸೇರಿ, ಹಿರಿಯೂರಿನಿಂದ ಶಾಸಕರಾಗಿ ಆಯ್ಕೆಯಾದರು. ಬೈರತಿ ಬಿಜೆಪಿ ಸೇರಿ ಅಲ್ಲಿ ತನ್ನ ಹಿಡಿತ ಭದ್ರಗೊಳಿಸಿಕೊಂಡಿದ್ದರಿಂದಾಗಿ, ಮೂರು ಬಾರಿ ಪ್ರತಿಸ್ಪರ್ಧಿಯಾಗಿದ್ದ ನಂದೀಶ್ ರೆಡ್ಡಿ, ಅವರ ಜತೆಗೆ ನಿಲ್ಲಬೇಕಾಯಿತು. ಕೆಲವು ತಿಂಗಳುಗಳಿಂದ ನಂದೀಶ್ ರೆಡ್ಡಿ ಪಕ್ಷದ ಚಟುವಟಿಕೆಗಳಿಂದ ಹೊರಗೆ ಉಳಿದಿದ್ದರು. ಈಗ ರಾಜ್ಯ ಉಪಾಧ್ಯಕ್ಷ ಜವಾಬ್ದಾರಿಯನ್ನು ಅವರಿಗೆ ಪಕ್ಷ ವಹಿಸಿರುವುದರಿಂದ ಬೈರತಿ ಬಸವರಾಜ ಅವರ ಉಮೇದುವಾರಿಕೆ ಬಹುತೇಕ ಖಚಿತ. ನಂದೀಶ್ ರೆಡ್ಡಿ ಬೆಂಬಲಿಸುವ ಕಾರ್ಯಕರ್ತರಿಗೆ ಇರುವ ಅಸಮಾಧಾನವನ್ನು ‘ಒಳಏಟು’ ಎಂದು ಕಾಂಗ್ರೆಸ್‌ ಟಿಕೆಟ್‌ನ ಕನಸು ಕಾಣುತ್ತಿರುವವರು ಭಾವಿಸಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ, ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್‌ನ ಮಾಲೀಕ ಡಿ.ಕೆ. ಮೋಹನ್‌ಬಾಬು, ಮಾಜಿ ಶಾಸಕ ಎ.ಕೃಷ್ಣಪ್ಪ ಅವರ ಸಹೋದರ ಡಿ.ಎ. ಗೋಪಾಲ, ವಿಧಾನಪರಿಷತ್ ಮಾಜಿ ಸದಸ್ಯ ಎ.ನಾರಾಯಣಸ್ವಾಮಿ ಇಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಡಿ.ಎ. ಗೋಪಾಲ ಸ್ಪರ್ಧಿಸಿದ್ದರು. ಈ ಸಲ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿ ಅವರಾಗಿರುವುದರಿಂದ ಜೆಡಿಎಸ್‌ನಿಂದ ಯಾವ ಆಕಾಂಕ್ಷಿಯ ಹೆಸರೂ ಪ್ರಸ್ತಾಪವಾಗುತ್ತಿಲ್ಲ.

ಸಮಸ್ಯೆಗಳ ಆಗರ ಕೆಆರ್ ಪುರ
ಗ್ರೇಟರ್ ಬೆಂಗಳೂರು ಭಾಗಗಳನ್ನು ಹೊಂದಿದ ದೊಡ್ಡ ವಿಧಾನಸಭಾ ಕ್ಷೇತ್ರ ಕೆ.ಆರ್. ಪುರ. ಮೇಡಹಳ್ಳಿ, ಸಣ್ಣ ತಿಮ್ಮನಹಳ್ಳಿ, ಭಟ್ಟರಹಳ್ಳಿ, ಕೆ.ಆರ್. ಪುರ, ರಾಮಮೂರ್ತಿನಗರ, ಚಿಕ್ಕಬಸವನಪುರ, ದೂರವಾಣಿ ನಗರ, ವಿಜ್ಞಾನಪುರ, ದೇವಸಂದ್ರ, ಕೆ. ನಾರಾಯಣಪುರ, ಸಿಂಗಯ್ಯನಪಾಳ್ಯ, ವಿಮಾನಪುರ ಮೊದಲಾದ ಪ್ರದೇಶಗಳನ್ನು ಇದು ಒಳಗೊಂಡಿದೆ. ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗಿನ ಟ್ರಾಫಿಕ್ ಸಮಸ್ಯೆಗೆ ಇನ್ನೂ ಮುಕ್ತಿ ದೊರೆತಿಲ್ಲ. ರಾಜಕಾಲುವೆ, ಚರಂಡಿ ಸಮಸ್ಯೆಗಳು ಕೂಡ ಹಾಗೆಯೇ ಇವೆ. ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕೆಲಸದ ಕುರಿತು ಅಲ್ಲಲ್ಲಿ ತಗಾದೆಗಳು ಉಳಿದುಕೊಂಡಿವೆ. ಭ್ರಷ್ಟಾಚಾರದ ಬಗೆಗೆ ಮುಕ್ತವಾಗಿ ಮಾತನಾಡುವ ಮತದಾರರೂ ಇಲ್ಲಿದ್ದಾರೆ.

ಮಹದೇವಪುರ ಹಾಗೂ ಕೆ.ಆರ್. ಪುರ ವ್ಯಾಪ್ತಿಗಳನ್ನು ಒಳಗೊಳ್ಳುವ ಸರ್ಕಾರಿ ಆಸ್ಪತ್ರೆಯನ್ನು 100  ಹಾಸಿಗೆ ಸಾಮರ್ಥ್ಯದಿಂದ 150 ಹಾಸಿಗೆಗಳಿಗೆ ಹೆಚ್ಚಿಸುವ ಪ್ರಕ್ರಿಯೆ ನಡೆದಿರುವುದರ ಕುರಿತು ಸ್ಥಳೀಯರಿಗೆ ಸಂತಸವಿದೆ. ಕೆ.ಆರ್. ಪುರದ ಪ್ರಥಮ ದರ್ಜೆಕಾಲೇಜಿನ ಕ್ರೀಡಾಂಗಣ, ಸಭಾಂಗಣದ ಕಾಮಗಾರಿ ಇನ್ನೂ ಮುಗಿದಿಲ್ಲ ಎನ್ನುವುದರ ಕುರಿತು ಅಸಮಾಧಾನವೂ ಇದೆ. ಕಿರಿದಾದ ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿರುವುದರ ಕಡೆಗೆ ಬೆರಳು ತೋರುತ್ತಿರುವ ಮತದಾರರಿಗೆ ತಮ್ಮ ಎದುರು ಇನ್ನೂ ಯಾರ್ಯಾರು ನಿಲ್ಲುವರೋ ಎಂಬ ಕುತೂಹಲ ಇದೆ.

ಕೆಆರ್ ಪುರ ಕ್ಷೇತ್ರವು ತನ್ನ ಹದಗೆಟ್ಟ ರಸ್ತೆಗಳು, ಗುಂಡಿಗಳು, ಬೀದಿದೀಪಗಳು, ಕಲುಷಿತ ಕೆರೆಗಳು, ತಗ್ಗು ಪ್ರದೇಶಗಳಲ್ಲಿನ ಮಳೆ ನೀರು ಪ್ರವಾಹ, ಟ್ರಾಫಿಕ್ ಜಾಮ್, ಕಸ ತೆರವು ಸಮಸ್ಯೆಗಳು ಮತ್ತು ಇನ್ನೂ ಹೆಚ್ಚಿನವುಗಳಿಗೆ ಗಮನ ಸೆಳೆಯುತ್ತದೆ, ಇದು ನಿರ್ಣಾಯಕ ಅಂಶವನ್ನು ವಹಿಸುತ್ತದೆ. ಇದಲ್ಲದೆ ಬೀದಿ ನಾಯಿಗಳ ಕಾಟ ಹಾಗೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ. ಈ ಪ್ರದೇಶವು ಕರ್ನಾಟಕದ ಹೊರಗಿನ ಮತದಾರರು ಹಾಗೂ ಹಳೆಯ CMC ಪ್ರದೇಶದ ನಿವಾಸಿಗಳನ್ನು ಹೊಂದಿದೆ. ಬಿಬಿಎಂಪಿ ಕೌನ್ಸಿಲ್ ಇಲ್ಲದಿರುವುದರಿಂದ ಈ ಸಮಸ್ಯೆಗಳು ಸ್ವಲ್ಪ ಮಟ್ಟಿನ ಆಡಳಿತ ವಿರೋಧಿ ನಿಲುವನ್ನು ಎದುರಿಸುತ್ತಿರುವ ಬೈರತಿ ಬಸವರಾಜ್‌ಗೆ ಹಿನ್ನಡೆಯಾಗಬಹುದು.

ಕ್ಷೇತ್ರವು ಹೆಚ್ಚಿನ ಸಂಖ್ಯೆಯ ಹಿಂದೂಗಳನ್ನು ಹೊಂದಿದೆ ಮತ್ತು ಕೆಲವು ಕ್ರಿಶ್ಚಿಯನ್ನರು, ತಮಿಳು ಜನಸಂಖ್ಯೆಯನ್ನು ಹೊರತುಪಡಿಸಿ ಉತ್ತಮ ಸಂಖ್ಯೆಯ ಮುಸ್ಲಿಂ ಮತದಾರರನ್ನು ಕೂಡ ಹೊಂದಿದೆ, ಕುತೂಹಲಕಾರಿಯಾಗಿ ಎಲ್ಲ ಸಮುದಾಯಗಳು ಬಸವರಾಜ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿವೆ. ಬಿಬಿಎಂಪಿ ಕೌನ್ಸಿಲರ್ ಆಗಿರುವ ಶಾಸಕರು ಒಂದು ಕಾಲದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರು 2013 ಮತ್ತು 2018 ರಲ್ಲಿ ಕಾಂಗ್ರೆಸ್ ನಿಂದ ಗೆದ್ದರು, ಆದರೆ 2019 ರಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. 

ಕೆಆರ್ ಪುರ ಕ್ಷೇತ್ರದಲ್ಲಿ ಉತ್ತಮ ಸಂಖ್ಯೆಯ ಕುರುಬ ಮತದಾರರಿದ್ದು, ಕುರುಬ ಜನಾಂಗದ ಬೈರತಿ ಪರವಾಗಿಯೂ ಮತ ಹಾಕುವ ಸಾಧ್ಯತೆ ಇದೆ. ಆದರೆ ಇಲ್ಲಿ ಸಮಸ್ಯೆ ಎಂದರೆ, ಬಸವರಾಜ್ ಅವರನ್ನು ಬಿಜೆಪಿ ಕಾರ್ಯಕರ್ತರು ಇನ್ನೂ ಸಂಪೂರ್ಣವಾಗಿ ತಮ್ಮ ನಾಯಕರೆಂದು ಸ್ವೀಕರಿಸಿಲ್ಲ. ಈ ಕ್ಷೇತ್ರ ಹೆಚ್ಚು ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರನ್ನು ಹೊಂದಿದೆ ಮತ್ತು ಪಕ್ಷದ ಕಾರ್ಯಕರ್ತರು ಇದರ ಹೆಚ್ಚಿನ ಲಾಭವನ್ನು ಪಡೆಯಲು ಆಶಿಸುತ್ತಿದ್ದಾರೆ. 1985ರಿಂದ ಕಾಂಗ್ರೆಸ್‌ನಲ್ಲಿರುವ ನನಗೆ ಟಿಕೆಟ್ ಸಿಗುವ ಭರವಸೆ ಇದೆ, ಕೆ.ಆರ್.ಪುರ ಪಾಲಿಕೆ ಸದಸ್ಯನಾಗಿದ್ದ ನನಗೆ ಈ ಸಭೆ ಒಳಗೆ ಮತ್ತು ಹೊರಗೆ ತಿಳಿದಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗೋಪಾಲ್ ಹೇಳಿದ್ದಾರೆ. ಮುಸ್ಲಿಮರು ಮತ್ತು SC/ST ಮತಗಳು ನಿರ್ಣಾಯಕ ಅಂಶಗಳಾಗಿವೆ ಮತ್ತು ಇವರು ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರು ಕೂಡ ಎಂಬುದು ವಿಶೇಷ. ಬಸವರಾಜ್ ಅವರು ಮುಸ್ಲಿಮರೊಂದಿಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದಾರೆ. 

2008ರಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಾಗ ಎಚ್‌ಎಎಲ್‌, ವಿಜಿನಾಪುರ ಮತ್ತು ದೇವಸಂದ್ರದಂತಹ ವಾರ್ಡ್‌ಗಳಲ್ಲಿ ಬಿಜೆಪಿಗೆ ಅಲ್ಪಸಂಖ್ಯಾತರ ಮತಗಳು ಕಡಿಮೆಯಾಗಿತ್ತು. ಆದರೆ 2019 ರ ಉಪಚುನಾವಣೆಯಲ್ಲಿ ಬೈರತಿ ಬಸವರಾಜ್ 60,000 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆಯೊಂದಿಗೆ ಗೆದ್ದಿದ್ದಾರೆ ಮತ್ತು ಎಲ್ಲಾ ಮುಸ್ಲಿಂ ಭಾಗದಲ್ಲಿ ಬಸವರಾಜ್ ಪರವಾಗಿ ಉತ್ತಮ ಸಂಖ್ಯೆಯ ಮತಗಳು ಬಂದಿವೆ ಎಂದು ಕೆಆರ್ ಪುರದ ಮುಸ್ಲಿಂ ಮುಖಂಡ ಮಹಮ್ಮದ್ ಹಸನ್ ಹೇಳಿದ್ದಾರೆ.

ವಿವರ:
ಹಾಲಿ ಶಾಸಕ: 
ಬೈರತಿ ಬಸವರಾಜ (ಬಿಜೆಪಿ)

2019ರ ಉಪಚುನಾವಣೆ
ಬೈರತಿ ಬಸವರಾಜ (ಬಿಜೆಪಿ)–1,39,879
ಎಂ. ನಾರಾಯಣಸ್ವಾಮಿ (ಕಾಂಗ್ರೆಸ್)–76,436
ಸಿ. ಕೃಷ್ಣಮೂರ್ತಿ (ಜೆಡಿಎಸ್‌)–2.048

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com