ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ: ಬಿಜೆಪಿ-ಕಾಂಗ್ರೆಸ್ ನಡುವೆ ರಾಜಕೀಯ ಕೆಸರೆರಚಾಟ ಆರಂಭ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಯಲ್ಲಿನ ಅಗ್ನಿ ಅವಘಡ ಘಟನೆಗೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟ ಆರಂಭವಾಗಿದೆ.
ಅಗ್ನಿ ಅವಘಡ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್, ಇದೊಂದು ಪಿತೂರಿ ಎಂದು ಆರೋಪಿಸಿದೆ.
ಅಗ್ನಿ ಅವಘಡ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿದ್ದ ಕಾಂಗ್ರೆಸ್, ಬಿಬಿಎಂಪಿ ಕಚೇರಿಯ ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಪ್ರಯೋಗಲಯದಲ್ಲಿ ಕಾಮಗಾರಿಗಳ ದಾಖಲೆ ಇದ್ದಂತಹ ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ, ಷಡ್ಯಂತ್ರ ಎಂದು ಆರೋಪಿಸಿತ್ತು.
40 ಪರ್ಸೆಂಟ್ ಕಮಿಷನ್ನಿನ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ದಾಖಲೆಗಳಿದ್ದ ಕೊಠಡಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳನ್ನು ಮತ್ತು ಇದರ ಹಿಂದಿರುವ ಬಿಜೆಪಿಯ ಭ್ರಷ್ಟರನ್ನು ಹೆಡೆಮುರಿ ಕಟ್ಟುವುದು ನಿಶ್ಚಿತ ಎಂದು ಹೇಳಿತ್ತು.
ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಪ್ರಮುಖ ದಾಖಲೆಗಳನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಇದು ಅಸಮರ್ಥ ಸರ್ಕಾರ ಎಂಬುದನ್ನು ಬಹಿರಂಗಪಡಿಸಿದೆ ಎಂದು ವಾಗ್ದಾಳಿ ನಡೆಸಿದೆ.
40ರಷ್ಟು ಆರೋಪ ಸಾಬೀತು ಪಡಿಸಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ದಾಖಲೆಗಳಿಗೆ ಬೆಂಕಿ ಹಚ್ಚಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಿಮ್ಮ ಸರ್ಕಾರ , ನಿಮ್ಮ ಅಧಿಕಾರಿಗಳು ಹಾಗು ನಿಮ್ಮದೇ ಆಡಳಿತ. ಬೆಂಕಿ ಹಚ್ಚುವ ಕೆಲಸ ನಿಮ್ಮದೇ ಇರಬೇಕು? ನಿಮ್ಮ ಸರ್ಕಾರ ಕಡತಗಳನ್ನು ರಕ್ಷಿಸಲು ಆಗದ ಸರ್ಕಾರವೇ? ಶೇ.40 ಕಮಿಷನ್ ಆರೋಪ ಸಾಬೀತು ಮಾಡಲಾರದೆ, ನೀವೇ ಬೆಂಕಿ ಹಚ್ಚಿರಬೇಕು. ಬಿಬಿಎಂಪಿಗೆ ಬೆಂಕಿ ಬಿದ್ದಿದೆ ಎಂದರೆ ನಿಮ್ಮ ಕೈಲಾಗದ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ