ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಯತ್ನ: 'ಹಳೆ ಮೈಸೂರು' ಭಾಗದಲ್ಲಿ ಪ್ರಾಬಲ್ಯ ಮೆರೆಯಲು ಹಲವು ತಂತ್ರ!

ಕರ್ನಾಟಕದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹವಣಿಸುತ್ತಿದೆ. ಇತ್ತ ಅಧಿಕಾರರೂಢ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಮೆರೆಯಲು ನೋಡುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕರ್ನಾಟಕದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹವಣಿಸುತ್ತಿದೆ. ಇತ್ತ ಅಧಿಕಾರರೂಢ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಮೆರೆಯಲು ನೋಡುತ್ತಿದೆ. ದಕ್ಷಿಣದ ರಾಜ್ಯದಲ್ಲಿ ಮತ್ತೊಮ್ಮೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಅದಮ್ಯ ಬಯಕೆಯಲ್ಲಿ ಬಿಜೆಪಿ ಇದ್ದು ಒಕ್ಕಲಿಗ ಮತಗಳನ್ನು ಸೆಳೆಯಲು ತನ್ನದೇ ಆದ ತಂತ್ರ ರೂಪಿಸುತ್ತಿದೆ.

ದಕ್ಷಿಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಇದುರೆಗೆ ವಿಧಾನಸಭೆ ಚುನಾವಣೆಗಳಲ್ಲಿ ಸಿಕ್ಕಿದ್ದು ಸಿಹಿಗಿಂತ ಜಾಸ್ತಿ ಕಹಿಯೇ. ಇಲ್ಲಿನ ಸಾಂಪ್ರದಾಯಿಕ ಮತಗಳು ಜೆಡಿಎಸ್ ಪಾಲಾಗುತ್ತಿತ್ತು. ಇಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪ್ರಭಾವ ಒಕ್ಕಲಿಗ ಸಮುದಾಯದ ಮೇಲೆ ಹೆಚ್ಚಾಗಿದೆ. ಅದರ ನಂತರ ಜನರ ಮತಗಳು ಕಾಂಗ್ರೆಸ್ ಪಾಲಾಗುತ್ತಿವೆ.

ಈ ಬಾರಿ ಸ್ಥಳೀಯ ಹಲವು ಪ್ರಭಾವಿ ನಾಯಕರನ್ನು ತನ್ನ ತೆಕ್ಕೆಕೆ ತೆಗೆದುಕೊಂಡು ದಕ್ಷಿಣ ಕರ್ನಾಟಕದಲ್ಲಿ ಪ್ರಾಬಲ್ಯ ಸಾಧಿಸುವ ಯೋಜನೆ ಬಿಜೆಪಿಯದ್ದು. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಪ್ರಭಾವ ಸಾಧಿಸಲು ಸಾಧ್ಯವಾದ ಕಸರತ್ತುಗಳನ್ನೆಲ್ಲಾ ಮಾಡುತ್ತಿದೆ. ಇದರ ಭಾಗವೇ ಕೆಲ ದಿನಗಳ ಹಿಂದೆ ಅಮಿತ್ ಶಾ ಬಂದು ಮಂಡ್ಯದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿದ್ದು ಎನ್ನಬಹುದು. ಕಳೆದ ವಾರ ಬಂದ ಜೆ ಪಿ ನಡ್ಡಾ ಕೂಡ ಹಲವು ಮಠಗಳಿಗೆ ಭೇಟಿ ನೀಡಿದ್ದರು. 

ದಕ್ಷಿಣ ಕರ್ನಾಟಕ ಭಾಗದಲ್ಲಿ ಈ ಬಾರಿ ಬಿಜೆಪಿ ಉತ್ತಮ ಸಾಧನೆ ತೋರಿ ಖಂಡಿತಾ ರಾಜ್ಯದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳುತ್ತಾರೆ.

ಕಾಂಗ್ರೆಸ್ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ನಡೆಸಿದ ಭಾರತ್ ಜೋಡೋ ಯಾತ್ರೆಯಿಂದ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಬಹುದು ಎಂಬ ಯೋಚನೆಯಲ್ಲಿದೆ. ಆದರೆ ಅರುಣ್ ಸಿಂಗ್ ಅದರಿಂದ ಏನೂ ಪ್ರಯೋಜನವಾಗದು ಎನ್ನುತ್ತಾರೆ. ಚಾಮರಾಜನಗರ, ಬಿಜಾಪುರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿದೆ ಎನ್ನುತ್ತಾರೆ.

2021ರ ಜುಲೈ ತಿಂಗಳಲ್ಲಿ ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನ ತೊರೆದು ಬಸವರಾಜ ಬೊಮ್ಮಾಯಿಯವರಿಗೆ ಹುದ್ದೆ ಬಿಟ್ಟುಕೊಟ್ಟರು. ಈ ಬಾರಿ 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ.

ಬಿಜೆಪಿಯಲ್ಲಿ ಒಗ್ಗಟ್ಟು ಇದೆ. ಗುಂಪುಗಾರಿಕೆ ಇಲ್ಲ, ಮುಖ್ಯಮಂತ್ರಿಗಳಿಗೆ ಇಮೇಜ್ ಉತ್ತಮವಾಗಿದೆ. ಕಾಂಗ್ರೆಸ್ ಒಡೆದ ಮನೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರದ್ದು ವಿಭಿನ್ನ ಹಾದಿ ಹೀಗಾಗಿ ಬಿಜೆಪಿ ಗೆಲ್ಲುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಅರುಣ್ ಸಿಂಗ್.

ಕರ್ನಾಟಕ ವಿಧಾನಸಭೆಯಲ್ಲಿ ಗೆಲ್ಲುವ ಮಹತ್ವಾಕಾಂಕ್ಷೆಯಲ್ಲಿರುವ ಬಿಜೆಪಿಗೆ ಹಳೆ ಮೈಸೂರು ಭಾಗದ ಮೇಲೆ ಭರವಸೆ ಹೆಚ್ಚಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಕರ್ನಾಟಕದಿಂದ 25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿ ಹೋಗಿದ್ದಾರೆ.

ಪ್ರಸ್ತುತ ಬೊಮ್ಮಾಯಿ ಸಂಪುಟದಲ್ಲಿ 7 ಮಂದಿ ಒಕ್ಕಲಿಗ ಸಚಿವರಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗಿರುವ ಶೋಭಾ ಕರಂದ್ಲಾಜೆ ಕೂಡ ಒಕ್ಕಲಿಗ ಸಮುದಾಯದವರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.ಕರ್ನಾಟಕದಲ್ಲಿ ಚುನಾವಣೆಯಲ್ಲಿ ನಿರ್ಣಾಯಕವಾಗುವ ಜಾತಿಗಳು ಮೊದಲನೆ ಸ್ಥಾನದಲ್ಲಿ ಲಿಂಗಾಯತ ಸಮುದಾಯ ಎರಡನೆಯದ್ದು ಒಕ್ಕಲಿಗ ಸಮುದಾಯ.

ಬೆಂಗಳೂರು ಹೊರಗೆ ಹಳೆ ಮೈಸೂರು ಭಾಗದಲ್ಲಿ ಸುಮಾರು 64 ವಿಧಾನಸಭಾ ಸ್ಥಾನಗಳಿವೆ. ಕಳೆದ ಬಾರಿ ಬಿಜೆಪಿ ಬೆರಳೆಣಿಕೆಯ ಸೀಟುಗಳನ್ನು ಮಾತ್ರ ಇಲ್ಲಿ ಗೆದ್ದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಹೆಚ್ಚಿನ ಸ್ಥಾನಗಳು ಹೋಗಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com