

ಬೆಂಗಳೂರು: ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆ ಹಾಗೂ ಅವುಗಳ ಅನುಷ್ಠಾನದಲ್ಲಿನ ವಿಳಂಬ ಕುರಿತು ಪ್ರತಿಪಕ್ಷ ಬಿಜೆಪಿ ಬುಧವಾರ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿತು.
ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡಿದ ಬಿಜೆಪಿ ಶಾಸಕ ಆರ್.ಅಶೋಕ್ ಅವರು, ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಯಾವುದೇ ಷರತ್ತುಗಳಿಲ್ಲದೆ 5 ಗ್ಯಾರಂಟಿಗಳನ್ನು ನೀಡಿದ್ದರು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಈಡೇರಿಸುವುದಾಗಿ ಹೇಳಿದ್ದರು. ಈಗ ಷರತ್ತು ಹಾಕುತ್ತಿದ್ದಾರೆ. 60 ದಿನವಾದರೂ ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗಿಲ್ಲ. ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. 5 ಗ್ಯಾರಂಟಿಯನ್ನು ಜನರಿಗೆ ಕೊಟ್ಟ ಮೇಲೆ ಇಲ್ಲಿ ಕೂರಬೇಕು. ಅಲ್ಲಿಯವರೆಗೂ ಕೂರುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆಗಳು ರಾಜ್ಯದ ಪಾಲಿಗೆ ದೌರ್ಭಾಗ್ಯವಾಗಿದೆ. ಗೊಂದಲಗಳನ್ನು ಸೃಷ್ಟಿಸುತ್ತಿದೆ. ಕಾಂಗ್ರೆಸ್ 5 ಗ್ಯಾರಂಟಿ ಕೊಟ್ಟು ಮೋಸ ಮಾಡುತ್ತಿದೆ. ಎಲ್ಲ ಕಡೆ ಚೆಕ್‍ಪೋಸ್ಟ್ ಹಾಕಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿದ್ದೇನು? ಅನುಷ್ಠಾನ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದರು.
ಜನರಿಗೆ ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿ ಕೊಡುತ್ತೇವೆ ಎಂದು ಆಮಿಷವೊಡ್ಡಿ ಮರಳು ಮಾಡುವ ರೀತಿಯಲ್ಲಿ ಭರವಸೆ ನೀಡಿದರು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮನೆಬಾಗಿಲಿಗೆ ಗ್ಯಾರಂಟಿ ನೀಡುವುದಾಗಿ ಭರವಸೆ ನೀಡಿತ್ತು. ಈಗ ಸರ್ಕಾರಿ ಬಸ್‍ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಷರತ್ತು ಹಾಕಿದೆ. ಬಸ್ಸಿನ ಕಿಟಕಿ ಬಾಗಿಲುಗಳು ಕಿತ್ತು ಬರುತ್ತಿದೆ. ಹವಾನಿಯಂತ್ರಿತ ಬಸ್‍ನಲ್ಲಿ ಅವಕಾಶವಿಲ್ಲ. ಆದರೆ, ಎಲ್ಲ ಬಸ್‍ನಲ್ಲಿ ಉಚಿತ ಎಂದು ಹೇಳಿದ್ದರು. ಆಟೋದವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.
ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ್ದರು. ಈಗ ಷರತ್ತು ಹಾಕುತ್ತಿದ್ದಾರೆ. ಗ್ಯಾರಂಟಿಗೆ ವ್ಯಾರಂಟಿ ಇಲ್ಲದಂತಾಗಿದೆ. ಈಗ ಒಂದು ವರ್ಷದ ಸರಾಸರಿ ನೆಪ ಹೇಳುತ್ತಿದ್ದಾರೆ. ಉಚಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದು ಜನರಿಗೆ ಮಾಡುತ್ತಿರುವುದು ಮೋಸವಲ್ಲವೇ?
ನಿರುದ್ಯೋಗಿ ಪದವೀಧರ ಮತ್ತು ಡಿಫ್ಲೋಮೋದಾರರಿಗೆ ಯುವನಿಯಡಿ ಭತ್ಯೆ ಕೊಡುವುದು ಪ್ರಾರಂಭವೇ ಆಗಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರೂ. ಕೊಡುತ್ತೇವೆ ಎಂದು ಹೇಳಿದ್ದರು. ಈಗ ಅತ್ತೆಗಾ, ಸೊಸೆಗಾ ಎನ್ನುತ್ತಿದ್ದಾರೆ? ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿ ಹೊರತುಪಡಿಸಿ ನೀವು ಭರವಸೆ ನೀಡಿದಂತೆ 10 ಕೆಜಿ ನೀಡಬೇಕೆಂದು ಆಗ್ರಹಿಸಿದರು. ಈ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡುವಂತೆ ಮನವಿ ಮಾಡಿಕೊಂಡರು.
ಈ ವೇಳೆ ಇದು ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯವಲ್ಲವಾದ್ದರಿಂದ ಸ್ಪೀಕರ್ ಈ ಕುರಿತ ಚರ್ಚೆಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಶಾಸಕರು ಒತ್ತಾಯಿಸಿದರು.
ಬಿಜೆಪಿಯ ಮನವಿಯನ್ನು ತಿರಸ್ಕರಿಸುವಂತೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಸ್ಪೀಕರ್ ಅವರಿಗೆ ಮನವಿ ಮಾಡಿದರು.
ಈ ವೇಳೆ ಸ್ಪೀಕರ್ ಬಿಜೆಪಿಯ ಪ್ರಸ್ತಾಪವನ್ನು ಸ್ವೀಕರಿಸಿ ನಿಯಮ 69ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಿದರು.