ಬೆಂಗಳೂರು: ವಿಪಕ್ಷ ಒಕ್ಕೂಟದ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭಾಗಿ ಸಾಧ್ಯತೆ!

ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿರೋಧ ಪಕ್ಷಗಳ 2ನೇ ಸುತ್ತಿನ ಸಭೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಳ್ಳುವ ಸುಳಿವನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರು ಸೋಮವಾರ ನೀಡಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ಬೆಂಗಳೂರು: ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿರೋಧ ಪಕ್ಷಗಳ 2ನೇ ಸುತ್ತಿನ ಸಭೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಳ್ಳುವ ಸುಳಿವನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರು ಸೋಮವಾರ ನೀಡಿದ್ದಾರೆ.

ಈ ನಡುವೆ ಲೋಕಸಭೆ ಸದಸ್ಯರಾಗಿ ರಾಹುಲ್ ಗಾಂಧಿಯವರ ಅನರ್ಹತೆಗೊಳಿಸಿರುವುದರ ವಿರುದ್ಧ ಜುಲೈ.12ರಂದು ಮೌನ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದ್ದು, ಇದು ಬಿಜೆಪಿಯ ಪಿತೂರಿ ಎಂದು ಆರೋಪಿಸಿದೆ.

ರಾಹುಲ್ ಗಾಂಧಿ ವಿರುದ್ಧ ನಡೆಸಲಾಗಿರುವ ಷಡ್ಯಂತ್ರವನ್ನು ಒಗ್ಗಟ್ಟಿನಿಂದ ಖಂಡಿಸುತ್ತೇವೆ. ರಾಹುಲ್ ಗಾಂಧಿ ವಿರುದ್ಧ ನಾವು ಮತ್ತು ಇಡೀ ದೇಶ ಇದೆ ಎಂಬ ಸಂದೇಶವನ್ನು ನಾವು ಸಾರಬೇಕಿದೆ ಎಂದು ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಸಂಪುಟ ಸಚಿವರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಂಸದರು, ಶಾಸಕರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಬುಧವಾರ ಬೆಳಗ್ಗೆ 10 ಗಂಟೆಯಿಂದ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಲಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಎಲ್ಲ ಪ್ರಮುಖ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ರಾಜ್ಯದ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆಂದು ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಮೇಲೆ ಜನರು ತೋರಿದ ಪ್ರೀತಿ ಮತ್ತು ವಾತ್ಸಲ್ಯವನ್ನು ನೋಡಿ ಬಿಜೆಪಿ ಅಸೂಯೆ ಪಟ್ಟಿದೆ. ಅದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರನ್ನು ರಾತ್ರೋರಾತ್ರಿ ಅನರ್ಹಗೊಳಿಸಲುವ ಕೆಲಸ ಮಾಡಲಾಯಿತು ಎಂದು ಆರೋಪಿಸಿದರು.

ಮೊದಲ ಯಾತ್ರೆ ಯಶಸ್ವಿಯಾಗಿದ್ದರಿದ ಪೂರ್ವದಿಂದ ಪಶ್ಚಿಮಕ್ಕೆ ಮತ್ತೊಂದು ಯಾತ್ರೆ ಕೈಗೊಳ್ಳುವಂತೆ ರಾಜಕೀಯ ಸಲಹೆಗಾರರು ಸಲಹೆ ನೀಡಿದ್ದಾರೆ. ಹೀಗಾಗಿ ಅವರ ಯಶಸ್ಸು ಹಾಗೂ ಜನಪ್ರಿಯತೆ ಸಹಿಸಲಾರದೆ ಬಿಜೆಪಿ ಸಂಚು ರೂಪಿಸಿತು ಎಂದರು.

ಇದೇ ವೇಳೆ ಮುಸ್ಲಿಮರ ಮೀಸಲಾತಿ ರದ್ದು ವಿಚಾರ ಕುರಿತು ಮಾತನಾಡಿ, ಈ ವಿಚಾರ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗುವುದು. ಸಂಪೂರ್ಣ ಮಾಹಿತಿ ಪಡೆದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆಂದು ಹೇಳಿದರು.

ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಯಿಂದ ಅಕ್ಕಿ ಖರೀದಿಸಲು ಹಲವು ರಾಜ್ಯಗಳು ಮುಂದೆ ಬಂದಿಲ್ಲ. ಆದರೆ, ನಾವು ಖರೀದಿ ಮಾಡುತ್ತೇವೆಂದು ಹೇಳಿದರೂ, ಎಫ್'ಸಿಐ ನೀಡುತ್ತಿಲ್ಲ. ನಾವೇನೂ ಉಚಿತವಾಗಿ ಕೊಡಿ ಎಂದು ಕೇಳುತ್ತಿಲ್ಲ. ಆದರೂ, ಅವರು ಅಕ್ಕಿ ನೀಡಲು ಸಿದ್ಧರಿಲ್ಲ ಎಂದು ಕಿಡಿಕಾರಿದರು.

ಭಾನುವಾರ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, "ಎಲ್ಲಾ ಶಾಸಕರು ವಾರಕ್ಕೊಮ್ಮೆಯಾದರೂ ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ, ಕ್ಯಾಂಟೀನ್ ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನೋಡಬೇಕು ಎಂದು ಮನವಿ ಮಾಡಿದರು,

ಜೈನ ಮುನಿ ಹತ್ಯೆ ಕುರಿತು ಮಾತನಾಡಿ, ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಲಿದ್ದಾರೆಂದು ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com