ಬರಗೆಟ್ಟ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಿಗೆಟ್ಟ ವರನಂತೆ ವರ್ತಿಸುತ್ತಿದೆ ಕಾಂಗ್ರೆಸ್!

ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಗಳು ಹಾಗೂ ದಿನ ನಿತ್ಯ ಬಳಕೆಯ ವಸ್ತು ಗಗನಕ್ಕೇರಿರುವುದರ ಸಂಬಂಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on: 

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಗಳು ಹಾಗೂ ದಿನ ನಿತ್ಯ ಬಳಕೆಯ ವಸ್ತು ಗಗನಕ್ಕೇರಿರುವುದರ ಸಂಬಂಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡರುವ ಅವರು,  ಕಾಂಗ್ರೆಸ್‌ ನಾಯಕರೇ ಸುಳ್ಳು ಹೇಳಿದ್ದು ಸಾಕು, ಇನ್ನಾದರೂ ಏರಿದ ಬೆಲೆ ಕಡಿತಕ್ಕೆ ಕ್ರಮ ಕೈಗೊಳ್ಳಲಿ. ಇಲ್ಲವಾದರೇ ರಾಜ್ಯದ ನಾರಿಶಕ್ತಿ ಆಕ್ರೋಶಕ್ಕೆ ನೀವು ನಾಮಾವಶೇಷ ಇಲ್ಲದಂತೆ ಹೋಗುತ್ತೀರಿ. ಎಚ್ಚರ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

5 ಗ್ಯಾರಂಟಿಗಳಿಂದ ಜನೋದ್ಧಾರ ಗ್ಯಾರಂಟಿ ಎಂದು ಹಸಿ ಸುಳ್ಳು ಹೇಳಿದ್ದ ಕಾಂಗ್ರೆಸ್‌ ಸರ್ಕಾರ ಬರಗೆಟ್ಟ ಈ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಿಗೆಟ್ಟ ವರನಂತೆ ವರ್ತಿಸುತ್ತಿದೆ. ಬೆಲೆ ಏರಿಕೆ ಹೊಡೆತಕ್ಕೆ ಜನ ತತ್ತರಿಸುತ್ತಿರುವುದು ಅದರ ಕಣ್ಣಿಗೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನಗೂ ಫ್ರೀ, ನಿನಗೂ ಫ್ರೀ ಎಂದು ಗ್ಯಾರಂಟಿ ಜಾಗಟೆ ಹೊಡೆದ ಈ ಸರ್ಕಾರಕ್ಕೆ ಮಾರುಕಟ್ಟೆಯಲ್ಲಿ ಗಗನಮುಖಿಯಾದ ಆಹಾರ ಪದಾರ್ಥಗಳ ಬೆಲೆ ಮೇಲೆ ನಿಯಂತ್ರಣವೇ ಇಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳು ಜನರ ಕಣ್ಣೀರಿನಲ್ಲಿ ಗೆಣಸು ಬೇಯಿಸಿಕೊಳ್ಳುತ್ತಿವೆ. ಅವರಿಗೆ ಬೆಲೆ ಇಳಿಕೆ ಬಗ್ಗೆ ಚಿಂತನೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಈ ಸರ್ಕಾರ ಬಂದು ತಿಂಗಳ ಮೇಲಾಯಿತು. ಅಧಿಕಾರ ಸಿಕ್ಕ ಕೂಡಲೇ ವರ್ಗಾವಣೆ ದಂಧೆಯ ದಾಸ್ಯಕ್ಕೆ ಬಿದ್ದ ಸರಕಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಲೇ ಹೋಗುತ್ತಿರುವ ಬೆಲೆಗಳ ಬಗ್ಗೆ, ಆಹಾರ ಪದಾರ್ಥಗಳ ದುಬಾರಿ ಬಗ್ಗೆ ಗಮನ ಹೋಗಲೇ ಇಲ್ಲ. ಹಣದ ಹಪಾಹಪಿ ಭಾಗ್ಯಗಳನ್ನು ಬಲಿ ತೆಗೆದುಕೊಳ್ಳುವ ದುಸ್ಥಿತಿಗೆ ದೂಡಿದೆ. ಬೆಲೆ ಏರಿಕೆ ಪಟ್ಟಿ ಓದಿದರೆ ಎದೆ ನಡುಗುತ್ತದೆ. ಅಕ್ಕಿ ಬೆಲೆ ಕೆಜಿಗೆ ಸರಾಸರಿ 20 ರೂ. ಏರಿದ್ದರೆ ,ಕೆಜಿ ಟೊಮ್ಯಾಟೋ ಬೆಲೆ 100 ರೂ. ಮುಟ್ಟಿದೆ. ಈ ಏರಿಕೆ ಲಾಭ ಅತ್ತ ರೈತನಿಗೂ ಇಲ್ಲ, ಇತ್ತ ಗ್ರಾಹಕನಿಗೂ ಇಲ್ಲ. ಜನ ಬೆಲೆ ಬೆಂಕಿಯಲ್ಲಿ ಬೇಯುತ್ತಿದ್ದರೆ ಈ ಸರ್ಕಾರ ಆ ಬೇಗೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದೆ, ಹೊಸ ಹುಂಡಿಗಳಿಗೆ ಜಾಗ ಹುಡುಕುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್‌ ತಾನು ಕೊಟ್ಟ ಭರವಸೆಗಳ ಬಗ್ಗೆ ಉತ್ತರ ಹೇಳಲಿ? ಬೆಲೆಗಳ ಇಳಿಕೆಯ ಬಗ್ಗೆ ಹೇಳಿದ್ದೆಲ್ಲ ಎಲ್ಲಿ ಹೋಯಿತು? ಮತ ಪಡೆದ ಮೇಲೆ ಎಲ್ಲಾ ಮರೆತು ಹೋಯಿತಾ? 135 ಸೀಟು ಸಿಕ್ಕಿದ ಮೇಲೆ ಪ್ರಣಾಳಿಕೆ ಪುಸ್ತಕಕ್ಕೆ ಮೂವತ್ತೇ ದಿನದಲ್ಲಿ ಗೆದ್ದಲು ಹಿಡಿಯಿತಾ? ನುಡಿದಂತೆ ನಡೆದಿದ್ದೇವೆ ಎಂದಿರಿ, ನುಡಿದಂತೆ ಎಲ್ಲಿ ನಡೆದಿದ್ದೀರಿ? ನುಡಿದಂತೆ ನಡೆದಿದ್ದೇವೆ ಎಂದರೆ ಲಂಗೂ ಲಗಾಮು ಇಲ್ಲದೆ ಬೆಲೆಗಳನ್ನು ಆಕಾಶಕ್ಕೆ ಜಿಗಿಸುವುದಾ? ಮಾರುಕಟ್ಟೆಯ ದಲ್ಲಾಳಿಗಳಿಗೆ ಶಕ್ತಿ ತುಂಬುವುದಾ? ಶಕ್ತಿ ಯೋಜನೆ ಮೂಲಕ ಮಹಿಳೆಯರ ಗಮನ ಬೇರೆಡೆಗೆ ಸೆಳೆದು, ಅವರ ಅಡುಗೆ ಮನೆ ಬಜೆಟ್‌ಗೆ ಕೊಳ್ಳಿ ಇಡುವುದಾ? ಎಂದು ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇನ್ನು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆಯೂ ವ್ಯಂಗ್ಯ ಮಾಡಿರುವ ಎಚ್‌ಡಿ ಕುಮಾರಸ್ವಾಮಿ, ಹೊಸ ಹೆಸರುಗಳನ್ನು ನೀಡಿದ್ದಾರೆ. ಅಕ್ಕಿಭಾಗ್ಯ ಹಗಲು ಕನಸು, ಬೆಲೆ ಏರಿಕೆ ಕನಸು ನನಸು! ಗೃಹಜ್ಯೋತಿ ಈಗ ಸುಡುಜ್ಯೋತಿ,  ಶಕ್ತಿ ಯೋಜನೆಯಿಂದ ಸಾರಿಗೆ ವ್ಯವಸ್ಥೆಯಲ್ಲಿ ಅರಾಜಕತೆ, ಗೃಹಲಕ್ಷ್ಮಿಗೆ ಗ್ರಹಣ, ನಿದಿರೆಗೆ ಜಾರಿದೆ ಯುವನಿಧಿ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com