

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್, ಈಗಾಗಲೇ ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರ ಪ್ರತಿಕ್ರಿಯೆಯನ್ನು ಪರಿಶೀಲನೆ ನಡೆಸಲು ಸಮೀಕ್ಷೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಸಮೀಕ್ಷೆಯ ವರದಿಯನ್ನು ಆಧರಿಸಿ ಮುಂಬರುವ ಇತರೆ ರಾಜ್ಯಗಳ ಚುನಾವಣಾ ಪ್ರಣಾಳಿಕೆಯಲ್ಲಿ ಇವುಗಳನ್ನು ಅಳವಡಿಸಲು ಆ ಮೂಲಕ ಗೆಲುವು ಸಾಧಿಸಲು ತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಗೃಹ ಲಕ್ಷ್ಮೀ (ಕುಟುಂಬದ ಮಹಿಳೆಗೆ ತಿಂಗಳಿಗೆ ರೂ 2000), ಅನ್ನ ಭಾಗ್ಯ (10 ಕೆಜಿ ಉಚಿತ ಅಕ್ಕಿ), ಗೃಹ ಜ್ಯೋತಿ (200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್) ಮತ್ತು ಶಕ್ತಿ (ಮಹಿಳೆಯರಿಗೆ ಪ್ರಯಾಣ ಉಚಿತ ಬಸ್ ಪ್ರಯಾಣ) ಎಂಬ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಯುವ ನಿಧಿ (ನಿರುದ್ಯೋಗಿ ಯುವಕರಿಗೆ ಮಾಸಿಕ ಆರ್ಥಿಕ ನೆರವು) ಇನ್ನೂ ಪ್ರಾರಂಭವಾಗಿಲ್ಲ.
ಗ್ಯಾರಂಟಿ ಯೋಜನೆಗಳ ಘೋಷಣೆ ಬಳಿಕ ಕಾಂಗ್ರೆಸ್ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ನಮ್ಮ ಈ ಯೋಜನೆಗಳು ಮುಂದಿನ ಕೆಲವು ವಾರಗಳಲ್ಲಿ ನಡೆಯಲಿರುವ ಇತರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಮಾನದಂಡವಾಗಿದೆ. ಈ ಯೋಜನೆಗಳನ್ನು ಆ ರಾಜ್ಯಗಳಲ್ಲಿಯೂ ಘೋಷಣೆ ಮಾಡಲಾಗುತ್ತಿದೆ. ಘೋಷಣೆಗೂ ಮುನ್ನ ಯೋಜನೆ ಫಲಾನುಭವಿಗಳಿಗೆ ಹೇಗೆ ತಲುಪುತ್ತಿದೆ ಎಂಬುದನ್ನು ತಿಳಿಯುವುದು, ಅದನ್ನು ಮತಗಳಾಗಿ ಪರಿವರ್ತನೆ ಮಾಡುವುದು ಹೇಗೆ ಎಂಬುದು ತಿಳಿಯುವುದು ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದಲೇ ಗೆಲವು ಸಾಧಿಸಿದ್ದೇವೆಂದು ಕಾಂಗ್ರೆಸ್ ಪಕ್ಷ ಹೇಳುತ್ತಿದೆ. ಆದರೆ, ಕೆಲವು ನಾಯಕರು ಅದರಿಂದಲೇ ಗೆಲುವು ಸಾಧಿಸಿದ್ದೇವೆಂಬುದರ ಕುರಿತು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಯೋಜನೆ ಜಾರಿಗೆ ತರುವಾಗ ಪಕ್ಷ ಕೆಲವು ಷರತ್ತುಗಳನ್ನು ವಿಧಿಸಿದ್ದು, ಅದು ನಮಗಿರುವ ಗೆಲ್ಲುವ ಅವಕಾಶಗಳನ್ನು ಹಾಳು ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಪಕ್ಷ ಮೊದಲು ವಾಸ್ತವವನ್ನು ಅರಿಯಬೇಕಿದೆ. ಹೀಗಾಗಿ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಮೀಕ್ಷೆ ಆರಂಭಿಸುತ್ತಿದ್ದೇವೆ. ಬದಲಾವಣೆ ಮಾಡಬೇಕಾದ ಪ್ರತಿಕ್ರಿಯೆಗಳು ಬಂದರೆ, ಆ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಗ್ಯಾರಂಟಿ ಯೋಜನೆಗಳ ಕುರಿತು ಅಷ್ಟೇ ಅಲ್ಲದೆ, ಪಕ್ಷವು ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಗುರುತಿಸಲು ಮತ್ತೊಂದು ಸಮೀಕ್ಷೆಗೂ ಸಜ್ಜಾಗಿದೆ.
ನೇಮಕಗೊಂಡಿರುವ ವೀಕ್ಷಕರು ಮುಂದಿನ 15 ದಿನಗಳಲ್ಲಿ ಆಕಾಂಕ್ಷಿಗಳ ಪಟ್ಟಿಯನ್ನು ನೀಡುವ ನಿರೀಕ್ಷೆಯಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದ್ದಾರೆ.
ಈ ಪಟ್ಟಿಯಲ್ಲಿರುವ ನಾಯಕರ ಕುರಿತು ಸಮೀಕ್ಷೆಯನ್ನು ನಡೆಸುತ್ತೇವೆ. ಬಳಿಕ ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತೇವೆಂದು ತಿಳಿಸಿದ್ದಾರೆ.
ನಂತರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಯಲ್ಲಿರುವ ಹೈಕಮಾಂಡ್ ಮುಂದಿಡಲಿದ್ದಾರೆ ಡಿಸೆಂಬರ್ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ಅಂತಿಮ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.