'ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್' ಆಗಿ ಬದಲಾದ ಕೆಪಿಸಿಸಿ: ಸಿ.ಟಿ.ರವಿ

ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಬದಲಾಗಿದೆ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದ್ದಾರೆ. 
ಸಿಟಿ ರವಿ ಸುದ್ದಿಗೋಷ್ಠಿ
ಸಿಟಿ ರವಿ ಸುದ್ದಿಗೋಷ್ಠಿ
Updated on: 

ಬೆಂಗಳೂರು: ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಬದಲಾಗಿದೆ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದ್ದಾರೆ. 

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾಡಹಬ್ಬಕ್ಕೆ ಕಳಂಕ ತರುವ ರೀತಿಯಲ್ಲಿ ರಾಜ್ಯ ಸರ್ಕಾರದ ಹಗರಣಗಳು, ಭ್ರಷ್ಟಾಚಾರದ ಅಸ್ಥಿಪಂಜರಗಳು ಪ್ರತಿನಿತ್ಯ ಹೊರಕ್ಕೆ ಬರುತ್ತಿವೆ. ದಸರಾ ಉತ್ಸವದಲ್ಲಿ ಖ್ಯಾತ ಸರೋದ್ ವಾದಕ, ಪದ್ಮಶ್ರೀ ಪುರಸ್ಕತ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮ ಆಯೋಜಿಸಲು 5 ಲಕ್ಷ  ರೂ. ಲಂಚ 3 ಲಕ್ಷ ಎಂದಾದರೆ, ಶೇ 60 ಲಂಚ ಕೇಳಿದಂತಾಗಿದೆ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ಟೀಕಿಸಿದರು.

ಹಿರಿಯ ಸಂಸ್ಕೃತಿ ಪುತ್ರನ ಬಳಿ ಶೇಕಡಾ 60 ರಷ್ಟು ಲಂಚ ಕೇಳುವುದಾದರೆ ನಾಡಹಬ್ಬಕ್ಕೆ ಇದಕ್ಕಿಂತ ಕಳಂಕ ಬೇರೊಂದಿಲ್ಲ. ಇಷ್ಟು ಮಾತ್ರವಲ್ಲ; ಈ ಸರಕಾರದಡಿ ಕಲಾವಿದರನ್ನೂ ಬಿಡುತ್ತಿಲ್ಲ; ಇನ್ನು ಬೇರೆಯವರನ್ನು ಬಿಡುವರೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ನಮ್ಮದು ಭ್ರಷ್ಟಾಚಾರರಹಿತ ಆಡಳಿತ ಎಂದು ಅಬ್ಬರಿಸಿ ಬೊಬ್ಬಿರಿವ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಅವರ ಮೂಗಿನ ಕೆಳಗೇ ಇದು ನಡೆದಿದೆ. ಬೇರೆ ಜಿಲ್ಲೆಗಳಲ್ಲಿ ಇನ್ನು ಪರಿಸ್ಥಿತಿ ಹೇಗಿರಬಹುದು ಎಂದು ಪ್ರಶ್ನೆಯನ್ನು ಮುಂದಿಟ್ಟರು. ಒತ್ತಡದ ಮೂಲಕ ಪ್ರಕರಣ ಮುಚ್ಚಿಹಾಕಲು ಮುಂದಾದುದು ಇನ್ನಷ್ಟು ನಾಚಿಕೆಗೇಡಿನ ಸಂಗತಿ ಎಂದರು.

ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಬದಲಾಗಿದೆ. ಹಿಂದೆ ನಮ್ಮ ಸರಕಾರದ ಮೇಲೆ ಆರೋಪ ಮಾಡುತ್ತಿದ್ದರು. ಈಗ ಗುತ್ತಿಗೆದಾರ ಅಂಬಿಕಾಪತಿ ಕರೋಡ್‍ಪತಿಯಾಗಿದ್ದಾರೆ. ಅವರ ಮನೆಯಲ್ಲಿ 42 ಕೋಟಿ, ಇನ್ನೊಬ್ಬ ಬಿಲ್ಡರ್ ಕೇತಮಾರನಹಳ್ಳಿ ಸಂತೋಷ್ ಕೃಷ್ಣಪ್ಪ ಮನೆಯಲ್ಲಿ 40 ಕೋಟಿ- ಹೀಗೆ ಕೋಟಿ ಕೋಟಿ ಹೊರಕ್ಕೆ ಬರುತ್ತಿದೆ. ಇವರಿಬ್ಬರೂ ರಾಜ್ಯದ ನಂಬರ್ 1, ನಂಬರ್ 2 ಅವರ ಬೇನಾಮಿಗಳು ಎಂಬ ಮಾಹಿತಿ ನಮಗಿದೆ ಎಂದು ವಿವರ ನೀಡಿದರು. ಇದರ ಸಿಬಿಐ ತನಿಖೆ ಮಾಡಿ ಎಂದು ಆಗ್ರಹಿಸಿದರು.

ನಂಬರ್ 1, ನಂಬರ್ 2 ಅವರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ನೂರಾರು ಬೇನಾಮಿಗಳನ್ನು ನೇಮಿಸಿದ್ದಾರೆ. ಇಬ್ಬರು ಬೇನಾಮಿಗಳು ಮಾತ್ರ ಸಿಕ್ಕಿದ್ದಾರೆ. ಈ ಹಣವೇ ಬೇನಾಮಿಗಳ ನೇಮಕಕ್ಕೆ ಸಾಕ್ಷಿ. ಕರ್ನಾಟಕವನ್ನು ಇವರು ಎಟಿಎಂ ಮಾಡಿಕೊಂಡಿದ್ದಾರೆ.  ಐಟಿ ದಾಳಿ ಹಿಂದೆ ರಾಜಕೀಯ ಇರುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದರೆ, ಎಲ್ಲ ಖಾತೆ ತಮ್ಮ ಕೈಯಲ್ಲಿ ಇರುವಂತೆ ವರ್ತಿಸುವ ಪ್ರಿಯಾಂಕ್ ಖರ್ಗೆಯವರು ದಾಳಿ ವಿರುದ್ಧ ಅಣಿಮುತ್ತು ಉದುರಿಸುತ್ತಾರೆ. ಏಕ್ ತರಫ್ ಸೆ ಆ ಲೂ ಡಾಲ್‍ನ, ದೂಸ್‍ರಾ ತರಫ್ ಸೆ ಸೋನಾ ನಿಕಾಲ್‍ನ ಎಂಬಂತೆ ದುಡ್ಡು ತೆಗೆದಿದ್ದಾರಾ ಎಂದು ವ್ಯಂಗ್ಯವಾಡಿದರು.

ಅಬಕಾರಿ ಸುಂಕ, ವಿದ್ಯುತ್ ದರ, ಸ್ಟ್ಯಾಂಪ್ ಶುಲ್ಕ ಹೀಗೆ ಎಲ್ಲ ಬೆಲೆಏರಿಸಿದ ಬಳಿಕ ಬಾಕಿ ಬಿಲ್ ನೀಡಲು ನೀವು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದೀರಿ. ಬಹುಶಃ ಪಂಜಾಬ್ ಬಳಿಕ ಕರ್ನಾಟಕದ ಸಿಎಂ ಕೂಡ ತನ್ನ ರಾಜ್ಯ ದಿವಾಳಿ ಆಗುತ್ತಿದೆ ಎಂದು ಮುನ್ಸೂಚನೆ ಕೊಟ್ಟಿದ್ದಾರೆ. ಇಷ್ಟಾದರೂ ಇವರು ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ಕೊಡುವುದನ್ನು ನಿಲ್ಲಿಸಿಲ್ಲ ಎಂದು ಟೀಕಿಸಿದರು.

ಬ್ರ್ಯಾಂಡ್ ಬೆಂಗಳೂರು ಎಂದರೆ ಭ್ರಷ್ಟ ಬೆಂಗಳೂರು: ಸಿಎಂ ಕುರ್ಚಿಗೆ ಟವೆಲ್ ಹಾಕಿದವರೊಬ್ಬರು ಚುನಾವಣೆ ಖರ್ಚಿಗೆ 2 ಸಾವಿರ ಕೋಟಿ ಕೊಡುವುದಾಗಿ ಹೇಳಿದ ಮಾಹಿತಿ ಇದೆ. ಹಾಲಿ ಮುಖ್ಯಮಂತ್ರಿಗಳು ಕಷ್ಟಪಟ್ಟು ಅದರ ಅರ್ಧ ವ್ಯವಸ್ಥೆ ಮಾಡುವುದಾಗಿ ಹೇಳಿದ ಮಾಹಿತಿ ಸಿಕ್ಕಿದೆ. ಇದು ಒಳಗಿನ ಸುದ್ದಿ. ಸತ್ಯವನ್ನು ಅವರೇ ಹೇಳಬೇಕು. ಇದನ್ನು ನೋಡಿದರೆ ಬ್ರ್ಯಾಂಡ್ ಬೆಂಗಳೂರು ಎಂದರೆ ಭ್ರಷ್ಟ ಬೆಂಗಳೂರು ಎಂದು ಅರ್ಥವಾಗುತ್ತದೆ ಎಂದರು.

ಈ ಸರಕಾರ ವಸೂಲಿ ಸರಕಾರ ಎಂದು ಟ್ಯಾಗ್‍ಲೈನ್ ಕೊಟ್ಟರೆ ತಪ್ಪಾಗದು. ಹಾಗಾಗಿ ವಸೂಲಿಗೆ ಸಂಬಂಧಿಸಿ ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಮತ್ತು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮುಖಂಡ ಭಾಸ್ಕರ ರಾವ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com