‘ನಾನು ಪ್ರಸ್ತಾಪಿಸಿದ್ದರಲ್ಲಿ ತಪ್ಪಿಲ್ಲ’: ಮೂವರು ಉಪಮುಖ್ಯಮಂತ್ರಿಗಳ ನೇಮಕ ಪರ ಸಚಿವ ಕೆಎನ್ ರಾಜಣ್ಣ ಮತ್ತೆ ಬ್ಯಾಟಿಂಗ್!

ಮೂವರು ಉಪಮುಖ್ಯಮಂತ್ರಿಗಳ ಆಯ್ಕೆಯ ತಮ್ಮ ನಿಲುವನ್ನು ಪುನರುಚ್ಚರಿಸಿದ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತಾವು ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ನನ್ನ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೆಎನ್ ರಾಜಣ್ಣ
ಕೆಎನ್ ರಾಜಣ್ಣ

ಬೆಂಗಳೂರು: ಮೂವರು ಉಪಮುಖ್ಯಮಂತ್ರಿಗಳ ನೇಮಿಸುವ ಬಗೆಗಿನ ತಮ್ಮ ನಿಲುವನ್ನು ಪುನರುಚ್ಚರಿಸಿದ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತಾವು ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ನನ್ನ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ವೀರಶೈವ-ಲಿಂಗಾಯತ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ ಅವರು, ಈ ಹೇಳಿಕೆಯಿಂದ ಸಿದ್ದರಾಮಯ್ಯ ಅವರಿದ್ದಾರೆ ಎನ್ನುವ ಊಹಾಪೋಹಗಳನ್ನು ತಳ್ಳಿಹಾಕಿದರು.

ಸೆಪ್ಟೆಂಬರ್ 16 ರಂದು ಈ ಬಗ್ಗೆ ಮೊದಲು ಮಾತನಾಡಿದ್ದ ಸಚಿವರು, ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ಹೇಳಿದ್ದರು.

'ಇನ್ನೂ ಮೂವರು ಡಿಸಿಎಂಗಳು ಜಾತಿ ಅಥವಾ ಸಮುದಾಯದ ಆಧಾರದ ಮೇಲೆ ನೇಮಕವಾಗಬೇಕೆಂದು ನಾನು ಸೂಚಿಸಿದ್ದೇನೆ. ಅದರಲ್ಲಿ ತಪ್ಪು ಏನಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಪಕ್ಷದ ಹಿತದೃಷ್ಟಿಯಿಂದ ನಾನು ಈ ನಿಟ್ಟಿನಲ್ಲಿ ಹೈಕಮಾಂಡ್‌ಗೆ ಒತ್ತಾಯಿಸಿದ್ದೇನೆ. ಅದು ಸರಿ ಎಂದು ಹೈಕಮಾಂಡ್ ಭಾವಿಸಿದರೆ, ಅವರು ಅದನ್ನು ಜಾರಿಗೆ ತರುತ್ತಾರೆ. ಇಲ್ಲವಾದರೆ, ಬಿಡುತ್ತಾರೆ. ನಾನು ಹೇಳಿದ್ದರಲ್ಲಿ ತಪ್ಪೇನಿಲ್ಲ' ಎಂದು ರಾಜಣ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ, ಮೂವರು ಡಿಸಿಎಂಗಳ ನೇಮಕವನ್ನು ಪ್ರಸ್ತಾಪಿಸುವ ನನ್ನ ಹೇಳಿಕೆಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ ಎಂದಿವೆ. ಆದರೆ, ಉಪಮುಖ್ಯಮಂತ್ರಿ ಆಯ್ಕೆ ಮಾಡಬೇಕು ಎಂಬ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನಿಂದ ಕೊಡಿದ್ದಾರೆ ಎಂಬುದು ತಪ್ಪು. ನಾನು ಸಿದ್ದರಾಮಯ್ಯನವರನ್ನು ಭೇಟಿ ಮಾಡಿಲ್ಲ, ಅವರ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿಲ್ಲ. ಈ ಕುರಿತು ಅವರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ' ಎಂದರು.

ಸದ್ಯ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಒಕ್ಕಲಿಗ ಸಮುದಾಯದ ಡಿಕೆ ಶಿವಕುಮಾರ್ ಮಾತ್ರ ಉಪಮುಖ್ಯಮಂತ್ರಿ ಆಗಿದ್ದಾರೆ. ಅಲ್ಲದೆ, ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದಾರೆ.

ಈ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳ ನಂತರ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ ಶಿವಕುಮಾರ್ ಅವರನ್ನು ಕಟ್ಟಿಹಾಕಲು ಮತ್ತು ಸರ್ಕಾರ ಮತ್ತು ಪಕ್ಷ ಎರಡರಲ್ಲೂ ಅವರ ಪ್ರಭಾವವನ್ನು ಕುಂದಿಸಲೆಂದೇ ಸಿದ್ದರಾಮಯ್ಯ ಪಾಳಯದ ಯೋಜನೆಯ ಭಾಗವಾಗಿ ರಾಜಣ್ಣ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್‌ನ ಒಂದು ವರ್ಗ ಅಭಿಪ್ರಾಯಪಟ್ಟಿದೆ.

ಈ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ತಮ್ಮ ಸಹಮತವೂ ಇಲ್ಲ, ವಿರೋಧವೂ ಇಲ್ಲ. ಮೂವರು ಉಪ ಮುಖ್ಯಮಂತ್ರಿಗಳನ್ನು ಮಾಡಿದರೆ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಅವರ ಪ್ರಾಮುಖ್ಯತೆಯು ತಗ್ಗುತ್ತದೆ ಎನ್ನುವುದು ತಪ್ಪು. ಇದರ ಹಿಂದೆ ಅಂತಹ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಇಂತಹ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಎಂದರು.

ಮುಂಬರುವ ಲೋಕಸಭೆ ಚುನಾವಣೆಯು ರಾಜ್ಯ, ದೇಶ ಮತ್ತು ಈ ಸರ್ಕಾರಕ್ಕೆ ಮಹತ್ವದ್ದಾಗಿದೆ. ಕರ್ನಾಟಕದಲ್ಲಿ ನಾವು (ಕಾಂಗ್ರೆಸ್) ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾಗಿದೆ. ನಾವು ಕಡಿಮೆ ಸ್ಥಾನಗಳನ್ನು ಗೆದ್ದರೆ, ಅವರು (ಬಿಜೆಪಿ) ಸೋತಿದ್ದಕ್ಕಾಗಿ ರಾಜೀನಾಮೆ ನೀಡಿ ಎಂಬ ಘೋಷಣೆಗಳೊಂದಿಗೆ ಬರುತ್ತಾರೆ. ನಾವು ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಅವಶ್ಯಕತೆಯಿದೆ. ಅದಕ್ಕಾಗಿ ನಾನು ಇನ್ನೂ ಮೂರು ಡಿಸಿಎಂಗಳ ನೇಮಕದ ಬಗ್ಗೆ ಹೇಳಿದ್ದೇನೆ. ಇದು ಯಾರನ್ನಾದರೂ ವೈಭವೀಕರಿಸುವ ಅಥವಾ ಖಂಡಿಸುವ ಅಥವಾ ಯಾರೊಬ್ಬರ ಪ್ರಚೋದನೆಯ ಆಧಾರದ ಮೇಲೆ ಹೇಳಿದ್ದಲ್ಲ ಎಂದು ರಾಜಣ್ಣ ತಿಳಿಸಿದರು.

'ವೀರಶೈವ, ಅಲ್ಪಸಂಖ್ಯಾತ, ಎಸ್‌ಸಿ/ಎಸ್‌ಟಿ ಸಮುದಾಯದಿಂದ ತಲಾ ಒಬ್ಬರಂತೆ ಡಿಸಿಎಂ ಮಾಡಿದರೆ ನಮಗೆ ಈಗ ಇರುವ ಬೆಂಬಲಕ್ಕಿಂತ ಹೆಚ್ಚಿನ ಬೆಂಬಲ ಸಿಗುತ್ತದೆ. ಇದನ್ನಷ್ಟೇ ನಾನು ಸೂಚಿಸಿದ್ದೇನೆ. ಯಾರನ್ನು ಡಿಸಿಎಂ ಮಾಡಬೇಕು ಎಂದು ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನೇನೂ ಡಿಸಿಎಂ ಹುದ್ದೆಯ ಆಕಾಂಕ್ಷಿಯಲ್ಲ' ಎಂದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲೆಂದೇ ಡಿಕೆ ಶಿವಕುಮಾರ್ ಅವರನ್ನು ಏಕೈಕ ಡಿಸಿಎಂ ಆಗಿ ಮಾಡಲಾಯಿತು ಎಂದು ಹೇಳಲಾಗಿದೆ.

ಶಿವಕುಮಾರ್ ಮಾತ್ರ ಡಿಸಿಎಂ ಆಗುವ ಬಗ್ಗೆ ಯಾವುದೇ ನಿರ್ಧಾರದ ಬಗ್ಗೆ ನನಗೆ ತಿಳಿದಿಲ್ಲ. ಯಾರೂ ಅದರ ಬಗ್ಗೆ ನನಗೆ ಹೇಳಿಲ್ಲ, ನನಗೆ ತಿಳಿದಿದ್ದರೆ, ನಾನು ಈ ವಿಚಾರವನ್ನು ಪ್ರಸ್ತಾಪಿಸುತ್ತಿರಲಿಲ್ಲ. ನಮಗೆ ಗೊತ್ತಿಲ್ಲದ ವಿಷಯದ ಮೇಲೆ, ನಾನು ಹೇಗೆ ಊಹಿಸಬಹುದು ಎಂದು ರಾಜಣ್ಣ ಪ್ರಶ್ನಿಸಿದರು.

ಮೂವರು ಡಿಸಿಎಂಗಳ ಬೇಡಿಕೆಗೆ ಸಂಬಂಧಿಸಿದಂತೆ ಎದುರಾಗುವ ರಾಜಕೀಯ ಸವಾಲುಗಳನ್ನು ಎದುರಿಸಲು ಸಿದ್ಧನಿದ್ದೇನೆ ಮತ್ತು ಜವಾಬ್ದಾರಿಯಿಂದ ಹೊರಗುಳಿಯುವುದಿಲ್ಲ. ಆದರೆ, ಈ ವಿಷಯದ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ. ಅಂತಿಮ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದರು. 

ರಾಜ್ಯದಲ್ಲಿ ಇನ್ನೂ ಮೂವರು ಡಿಸಿಎಂಗಳ ನೇಮಕಕ್ಕೆ ಸಂಪುಟದ ಒಳಗಿನಿಂದಲೇ ಧ್ವನಿ ಕೇಳಿಬರುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅಂತಿಮವಾಗಿ ಹೈಕಮಾಂಡ್ ಈ ಬಗ್ಗೆ ನಿರ್ಧರಿಸುತ್ತದೆ ಮತ್ತು ಆ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ ಎಂದು ಭಾನುವಾರ ಹೇಳಿದ್ದಾರೆ.

ಇನ್ನು ಮೂವರು ಡಿಸಿಎಂ ಆಯ್ಕೆಯಾಗಬೇಕು ಎಂಬ ರಾಜಣ್ಣ ಅವರ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಬೇಕು ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ಸೋಮವಾರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com