ನೀವು ಗೋ ಹತ್ಯೆ ಸಮರ್ಥಿಸಲು ಸಾಧ್ಯವೇ?, ತಂದೆಯ ಆತ್ಮಕ್ಕೆ ಶಾಂತಿ ಸಿಗುತ್ತದಾ?: ಶೆಟ್ಟರ್ ಗೆ ಈಶ್ವರಪ್ಪ ಬಹಿರಂಗ ಪತ್ರ!

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆಯದ  ಹಿನ್ನಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವ ಜಗದೀಶ್ ಶೆಟ್ಟರ್ ಅವರಿಗೆ ಮಾಜಿ ಸಚಿವ, ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಬಹಿರಂಗ ಭಾವನಾತ್ಮಕ ಪತ್ರ ಬರೆದು ಪಕ್ಷಕ್ಕೆ ಮರಳುವಂತೆ ಮನವಿ ಮಾಡಿದ್ದಾರೆ.
ಶೆಟ್ಟರ್ ಗೆ ಈಶ್ವರಪ್ಪ ಬಹಿರಂಗ ಪತ್ರ
ಶೆಟ್ಟರ್ ಗೆ ಈಶ್ವರಪ್ಪ ಬಹಿರಂಗ ಪತ್ರ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆಯದ  ಹಿನ್ನಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವ ಜಗದೀಶ್ ಶೆಟ್ಟರ್ ಅವರಿಗೆ ಮಾಜಿ ಸಚಿವ, ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಬಹಿರಂಗ ಭಾವನಾತ್ಮಕ ಪತ್ರ ಬರೆದು ಪಕ್ಷಕ್ಕೆ ಮರಳುವಂತೆ ಮನವಿ ಮಾಡಿದ್ದಾರೆ.

ಜಗದೀಶ್ ಶೆಟ್ಟರ್ 40 ವರ್ಷ ಬಿಜೆಪಿಯಲ್ಲಿ ಕೆಲಸ ಮಾಡಿದ ವ್ಯಕ್ತಿ. ಅವರೊಬ್ಬ ಸಿದ್ದಾಂತವಾದಿ ಅಂದುಕೊಂಡಿದ್ದೆ, ಅವರ ತಂದೆ ಶಿವಪ್ಪ ಶೆಟ್ಟರ್ ಮೇಯರ್ ಆಗಿದ್ದರು. ಜನಸಂಘದಿಂದ ಬಂದವರಾಗಿದ್ದರು. ಈ ಪಕ್ಷದ ವಿಚಾರ ಸಿದ್ದಾಂತ ಅರ್ಥ ಮಾಡಿಕೊಂಡವರು. ಅವರ ತಂದೆ ರಾಜಕಾರಣಕ್ಕೆ ಬಂದಾಗ ನಾವು ಅಧಿಕಾರಕ್ಕೆ ಬರ್ತೇವೆ ಎಂಬ ಕನಸು ಕಂಡಿರಲಿಲ್ಲ. ಬಿಜೆಪಿಗೆ ಅಭ್ಯರ್ಥಿಗಳೇ ಇರಲಿಲ್ಲ ಅಂತಹ ಕಾಲ. ಅಧಿಕಾರ ಬಂದಾಗ ಬೇರೆ ಬೇರೆ ಪಕ್ಷದಿಂದ ಬಂದರು, ಕೆಲವರಿಗೆ ಅಧಿಕಾರ ಸಿಗಲಿಲ್ಲ ಬಿಟ್ಟು ಹೋದರು. ಅಧಿಕಾರಕ್ಕೆ ಬಂದವರು ಅಧಿಕಾರ ಸಿಗಲಿಲ್ಲ ಎಂದು ಹೋದರು ಅಂತಹವರ ಬಗ್ಗೆ ‌ಮಾತನಾಡಲ್ಲ. ಆದರೆ ಶೆಟ್ಟರ್ ಹೋರಾಟ ಮಾಡಿಕೊಂಡು ಬಂದ ವ್ಯಕ್ತಿ. ಹುಬ್ಬಳ್ಳಿಯಲ್ಲಿ ತಿರಂಗ ಧ್ವಜದ ಹೋರಾಟ ಮಾಡಿದ್ದರು. ರಾಷ್ಟ್ರಧ್ವಜ ಹಾರಿಸುವವರೆಗೂ ಬಿಡಲಿಲ್ಲ ಹೋರಾಟ ಮಾಡಿದವರು ಅವರು ಎಂದು ಈಶ್ವರಪ್ಪ ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ನನಗೆ ಟಿಕೆಟ್ ಕೊಡಲಿಲ್ಲ, ಸರಿಯಾಗಿ ನಡೆಸಿಕೊಡಲಿಲ್ಲ ಎಂದಿದ್ದಾರೆ. ಅವರ ಮಾತು ಕೇಳಿ ನೋವಾಯ್ತು, ಕಾಂಗ್ರೆಸ್ ನಲ್ಲೇ ಹಲವು ಗುಂಪು ಇದ್ದಾವೆ. ಇವರು ಯಾವ ಗುಂಪಿಗೆ ಹೋಗ್ತಾರೋ ಗೊತ್ತಿಲ್ಲ. ಶೆಟ್ಟರ್ ಹೋರಾಟದ ಭೂಮಿಯಿಂದ ಬಂದವರು ಕಾಂಗ್ರೆಸ್ ಗೆ ಸೇರಿದ್ದಾರೆ. ಹೋರಾಟ ನಿಮಗೆ ರಕ್ತಗತವಾಗಿ ಬಂದಿದೆ. ಕಾಂಗ್ರೆಸ್ ನಿಮಗೆ ಒಂದು ಟಿಕೆಟ್ ‌ಕೊಟ್ಟಿರಬಹುದು ಆದರೆ ಹೋರಾಟದ ಮಣ್ಣಿನಲ್ಲಿ ನೀವು ಗೆಲ್ಲುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಅಂದುಕೊಳ್ಳಿ, ಗೋಹತ್ಯೆ ಬಿಲ್ ಹಿಂಪಡೆಯುತ್ತೇವೆ ಅಂದಿದ್ದಾರೆ, ನೀವು ಆಗ ಯಾರಿಗೆ ಬೆಂಬಲಿಸುತ್ತೀರಿ? ಒಂದು ಟಿಕೆಟ್ ನಿಮ್ಮ ಇಡೀ ಸಿದ್ದಾಂತವನ್ನೇ ಬದಲು ಮಾಡಿತಲ್ಲ. ಕೇವಲ ಅಧಿಕಾರಕ್ಕಾಗಿ ನೀವು ಕಾಂಗ್ರೆಸ್ ಸೇರ್ತೀರಾ ಅಂದಿದ್ದರೆ ಪಕ್ಷ ನಿಮ್ಮನ್ನು ಇಷ್ಟು ಬೆಳೆಸುತ್ತಿರಲಿಲ್ಲ. ವಿಪಕ್ಷ ನಾಯಕ, ಸ್ಪೀಕರ್, ಮಂತ್ರಿ, ಮುಖ್ಯಮಂತ್ರಿ ಮಾಡ್ತು‌ ಇನ್ನೇನು ಮಾಡಬೇಕು? ಚನ್ನಾಗಿ ನಡೆಸಿಕೊಂಡಿಲ್ಲ ಅಂದರೆ ಅರ್ಥ ಏನು ಎಂದು ಪ್ರಶ್ನಿಸಿದ್ದಾರೆ.

ಸಾಮಾನ್ಯ ಕಾರ್ಯಕರ್ತ ಯಾರ ಮೇಲೆ ಭರವಸೆ ಇಟ್ಟುಕೊಳ್ಳಬೇಕು. ಅಧಿಕಾರಕ್ಕೆ ಬಂದರೆ ಪಿಎಫ್ ಐ ನಿಷೇಧ ಹಿಂಪಡೆಯುತ್ತೇವೆ ಎಂದು ಡಿಕೆಶಿ, ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ ನೀವು ಭಯೋತ್ಪಾದನೆಗೆ ಬೆಂಬಲಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸೇರ್ಪಡೆಯಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗುತ್ತದಾ? ಬಿಜೆಪಿಗೆ ಇಷ್ಟೆಲ್ಲಾ ಕೆಲಸ ಮಾಡಿದಿರಿ. ಕಾಂಗ್ರೆಸ್ ಗೆ ಯಾಕೆ ಸೇರಿದಿರಿ ಎಂದು ನಿಮ್ಮ ಮೊಮ್ಮಗ ಕೇಳಿದರೆ ಏನು ಹೇಳುತ್ತೀರಿ? ಅವನು ಸಹ ಛೀ ಥೂ ಅಂತಾನೆ. ನೀವು ಕ್ಷಮೆ ಕೇಳಿ ಧರ್ಮ ಉಳಿಸಿದ, ತತ್ವ ಸಿದ್ದಾಂತ ಉಳಿಸಿದ ಪಕ್ಷಕ್ಕೆ ವಾಪಸ್ ಬರಬೇಕು. ಈಗಲೂ ಕಾಲ ಮಿಂಚಿಲ್ಲ‌ ನೀವು ವಾಪಸ್ ಬರಬಹುದು. ದೊಡ್ಡ ದೊಡ್ಡ ಭಾಷಣ ಮಾಡಿ ನೀವೇ ಜಾರಿಗೆ ತಂದ ಬಿಲ್ ವಾಪಸ್ ಪಡೆಯಲು ಬೆಂಬಲಿಸುತ್ತೀರಾ? ನನ್ನ ಬಹಿರಂಗ ಪತ್ರಕ್ಕೆ ಶೆಟ್ಟರ್ ಉತ್ತರ ಕೊಡಬೇಕು. ನಾನು ಬಹಿರಂಗ ಪತ್ರ ಬರೆದಾಗ ನಿಮಗೆ ನೋವು ಆಗಬಹುದು. ನೀವು ರಾಜೀನಾಮೆ ಕೊಟ್ಟಿದ್ದು ನನಗೆ ಆಘಾತವಾಯ್ತು. ಹೀಗಾಗಿ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

ತಂದೆಯ ಆತ್ಮಕ್ಕೆ ಶಾಂತಿ ಸಿಗುತ್ತದಾ?
ಸುಮಾರು 4 ದಶಕಗಳಿಗೂ ಹೆಚ್ಚಿನ ಕಾಲ ತಾವು ನಂಬಿ ತಮ್ಮ ರಾಜಕೀಯ ಜೀವನವನ್ನು ರೂಪಿಸಿಕೊಂಡಿದ್ದ ತತ್ವ ಸಿದ್ಧಾಂತ, ರಾಜಕೀಯ ನಿಲುವನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷದ ಕಡೆ ತಾವು ಮುಖ ಮಾಡಿರುವ ಈ ಬದಲಾದ ಪರಿಸ್ಥಿತಿಯಲ್ಲಿ ನನಗೆ ನಿಮ್ಮ ಪೂಜ್ಯ ತಂದೆಯವರಾದ ದಿ.ಶಿವಪ್ಪ ಶೆಟ್ಟರು ಬಹಳವಾಗಿ ನೆನಪಾಗುತ್ತಿದ್ದಾರೆ . ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಟ್ಟ ಪ್ರಭಾವದಲ್ಲಿ ತಮ್ಮ ರಾಜಕೀಯ ಜೀವನ ರೂಪಿಸಿಕೊಂಡ ದಿ. ಶಿವಪ್ಪ ಶೆಟ್ಟರು, ಭಾರತೀಯ ಜನತಾ ಪಕ್ಷದ ಮೂಲಕ ನಗರ ಸಭೆಯ ಸದಸ್ಯರಾಗಿ, ಮಹಾಪೌರರಾಗಿ, ಶಾಸಕರಾಗಿ ಎಲ್ಲದಕ್ಕಿಂತ ಮಿಗಿಲಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರದೇ ಪ್ರಭಾವದಲ್ಲಿ ಬೆಳದ ತಾವು ಸಹ ರಾಷ್ಟ್ರೀಯತೆಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡವರು. ಕಾಂಗ್ರೆಸ್ ಪಕ್ಷದ ದೇಶ ವಿರೋಧಿ ಧೋರಣೆಗಳನ್ನು ಸದಾ ಖಂಡಿಸುತ್ತಾ ಬಂದವರು, ಭಾರತೀಯ ಜನತಾ ಪಕ್ಷದ ಮೂಲಕ ಅನೇಕ ಬಾರಿ ಶಾಸಕರಾಗಿ ಚುನಾಯಿತರಾಗಿದ್ದು ಮಾತ್ರವಲ್ಲದೇ ರಾಜ್ಯದ ಮುಖ್ಯಮಂತ್ರಿಯಾಗುವಷ್ಟು ಎತ್ತರಕ್ಕೆ ಬೆಳೆದವರು.. ನಿಮ್ಮ ಈ ಕಾರ್ಯದಿಂದ ತಂದೆಯ ಆತ್ಮಕ್ಕೆ ಶಾಂತಿ ಸಿಗುತ್ತದಾ?  ಎಂದು ಈಶ್ವರಪ್ಪ ಅವರು ಪ್ರಶ್ನಿಸಿದ್ದಾರೆ.

ಪಕ್ಷ ತಾಯಿಯಂತೆ.. ಕಾಲಿನಿಂದ ಒದ್ದು ಹೋಗಬಾರದು!
ಪಕ್ಷ ತಾಯಿ ಇದ್ದಂತೆ, ನಾವು ಯಾವತ್ತೂ ತಾಯಿಯನ್ನು ಕಾಲಿನಿಂದ ಒದ್ದು ಹೋಗಬಾರದು. ಪ್ರಸಕ್ತ ಸಂಧರ್ಭದಲ್ಲಿ ತಾಯಿಯಂತ ಕಾಪಾಡಿದ ಪಕ್ಷ ತೆಗೆದುಕೊಂಡ ನಿರ್ಣಯದ ವಿರುದ್ಧ ಅಸಮಾಧಾನಗೊಂಡಿರುವ ತಮ್ಮ ಮನಸ್ಥಿತಿ ನನಗೆ ಅರ್ಥವಾಗುತ್ತದೆ, ಆದರೆ, ಪಕ್ಷವನ್ನು ಬಿಟ್ಟು ನಂಬಿದ ಎಲ್ಲಾ ಆದಶಳಗಳನ್ನು ಹೊರದು ನಮ್ಮ ಪಕ್ಷದ ಚಿಂತನೆಗೆ ವಿರುದ್ಧವಾದ ಕಾಂಗ್ರೇಸ್‌ ಪಕ್ಷಕ್ಕೆ ತಾವು ಸೇರಲು ಬಯಸಿರುವುದು ಮಾತ್ರ ಅತ್ಯಂತ ದುರದೃಷ್ಟಕರ ಎಂದು ಅವರು ವಿಷಾದಿಸಿದ್ದಾರೆ. 

ಗೋ ಹತ್ಯೆ ಚರ್ಚೆ ನಡೆದರೆ ನೀವು ಗೋ ಹತ್ಯೆ ಸಮರ್ಥಿಸಲು ಸಾಧ್ಯವೇ?
ಮುಂದೆ ತಾವು ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆದ್ದರೆ ಗೋ ಹತ್ಯೆ ಪರ - ವಿರೋಧದ ಚರ್ಚೆ ನಡೆದರೆ ತಾವು ಗೋ ಹತ್ಯೆಯನ್ನು ಸಮರ್ಥಿಸಲು ಸಾಧ್ಯವೇ?  ಯಾವುದೇ ವ್ಯಕ್ತಿ ರಾಜಕೀಯವಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯವಾದರೆ ಅದು ಆತ ನಂಬಿರುವ ಪಕ್ಷದ ತತ್ವ, ಸಿದ್ಧಾಂತಗಳು ಹಾಗು ಪಕ್ಷಕ್ಕಾಗಿ ರಾತ್ರಿ ಹಗಲೆನ್ನದೆ ದುಡಿಯುವ ಕಾರ್ಯಕರ್ತರ ಬೆಂಬಲದಿಂದ ಮಾತ್ರ ಎಂಬುದನ್ನು ತಾವು ಮರೆಯಬಾರದು. ತಮ್ಮ ಈ ಪಕ್ಷ ವಿರೋಧಿ ನಿಲುವಿನಿಂದ ಅನೇಕ ಹಿರಿಯ ನಾಯಕರಿಗೆ, ಪಕ್ಷವನ್ನು ಪ್ರೀತಿಸುವ ಅಸಂಖ್ಯಾತ ಕಾರ್ಯಕರ್ತರ ಮನಸ್ಸಿಗೆ ಅಪಾರವಾದ ನೋವಾಗಿದೆ. ದುಡುಕಿನ ನಿರ್ಧಾರ ಮಾಡದೇ ಒಮ್ಮೆ ಈ ಕುರಿತು ಸಮಗ್ರವಾಗಿ ಯೋಚಿಸಿ, ಕಾಲ ಇನ್ನೂ ಮಿಂಚಿಲ್ಲ'' ಎಂದು ಅವರು ತಿಳಿ ಹೇಳಿದ್ದಾರೆ.

ಧರ್ಮೇಂದ್ರ ಪ್ರಧಾನ್ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ನನಗೆ ಪೋನ್ ಮಾಡಿದ್ದರು. ಅವರು ಪೋನ್ ಮಾಡಿದ 10ನಿಮಿಷಕ್ಕೆ ನಾನು‌ ಪತ್ರ ಬರೆದೆ. ನಂತರ ನಿವೃತ್ತಿ ತೆಗೆದುಕೊಳ್ಳಬೇಕು ಅಂದಾಗ ಶೆಟ್ಟರ್ ಅವರ ಜೊತೆ ಮಾತನಾಡಿದ್ದೆ. ಟಿಕೆಟ್ ಕೊಡಬೇಕು ಅಂತ ಲಕ್ಷ ಲಕ್ಷ ಕಾರ್ಯಕರ್ತರು ಇದ್ದಾರೆ. ನಿನಗೆ ಏಕೆ ಟಿಕೆಟ್ ಕೊಡಬೇಕು. ಯಾರಿಗೆ ಟಿಕೆಟ್ ಕೊಡಬೇಕು, ಏಕೆ ಕೊಡಬೇಕು ಅಂತ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಹಿರಿಯರು ನಮಗಿಂತ ಬುದ್ದಿವಂತರು ಇದ್ದಾರೆ ಎಂದು ಹೇಳಿದ್ದಾರೆ. ಲಕ್ಷ್ಮಣ ಸವದಿ ಸಂಘ ಪರಿವಾರದಿಂದ ಬಂದವರಲ್ಲ. ಹೀಗಾಗಿ ಅವರ ಬಗ್ಗೆ ನಾನು ಅಷ್ಟು ಮಾತನಾಡುವುದಿಲ್ಲ.ಶೆಟ್ಟರ್ ಸಂಘಪರಿವಾರದಿಂದ ಬಂದವರು.ಹೀಗಾಗಿ ಅವರು ಪಕ್ಷ ಬಿಟ್ಟಿದ್ದು ನೋವಾಯಿತು. ಅವರು ವಾಪಸ್ ಬಂದರೆ ಬಹಳ ಸಂತೋಷ, ಇಲ್ಲದಿದ್ದರೆ ನೋವಾಗುತ್ತದೆ.

ಸೀಟ್ ಕಳೆದುಕೊಂಡರೆ ನಮಗೇನು ಬೇಜಾರಿಲ್ಲ. ಈ ದೇಶ ಉಳಿಯಬೇಕು ಅಂತ ಅನೇಕರು ಬೆಂಬಲ ಕೊಡುತ್ತಿದ್ದಾರೆ. ಚುನಾವಣೆ ಹಿನ್ನಡೆ ಬಹಳ ದೊಡ್ಡದಲ್ಲ. ಎರಡು ಸೀಟ್ ಇದ್ದು ಅಧಿಕಾರಕ್ಕೆ ಬಂದ ಪಕ್ಷ ನಮ್ಮದು. ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿತು.ವರುಣದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇವೆ. ನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದೇನೆ. ಈ ಬಗ್ಗೆ ಅವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ದ ಎಂದು ಈಶ್ವರಪ್ಪ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com